875 ಶೋಗೆ ರೆಡಿ ಆದ ‘ಮುಖ್ಯಮಂತ್ರಿ’ ನಾಟಕ; ಎಲ್ಲಿ, ಯಾವಾಗ?
ಕಲಾಗಂಗೋತ್ರಿ ರಂಗಭೂಮಿಯ ‘ಮುಖ್ಯಮಂತ್ರಿ’ ನಾಟಕವು 875ನೇ ಪ್ರದರ್ಶನವನ್ನು ಈ ವಾರಾಂತ್ಯದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದೆ. 1980ರಿಂದ ಪ್ರದರ್ಶನಗೊಳ್ಳುತ್ತಿರುವ ಈ ನಾಟಕವು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಚಂದ್ರು ಅವರ ಅಭಿನಯ ಹಾಗೂ ಹಾಸ್ಯದ ಅಂಶಗಳು ನಾಟಕಕ್ಕೆ ವಿಶೇಷ ಆಕರ್ಷಣೆಯಾಗಿದೆ. ಟಿಕೆಟ್‌ಗಳು ಬುಕ್‌ಮೈಶೋದಲ್ಲಿ ಲಭ್ಯವಿದೆ.

ರಂಗಭೂಮಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರೋ ಕಲಾಗಂಗೋತ್ರಿ ಈಗ ‘ಮುಖ್ಯಮಂತ್ರಿ’ ನಾಟಕದ (Mukhyamantri Play) 875ನೇ ಶೋನ ಆಯೋಜನೆ ಮಾಡಿದೆ. ಈ ವೀಕೆಂಡ್ನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಶೋ ವೀಕ್ಷಿಸಬಹುದಾಗಿದೆ. ಹಲವು ದಶಕಗಳಿಂದ ಈ ನಾಟಕವನ್ನು ಮಾಡಿಕೊಂಡು ಬರಲಾಗುತ್ತಿದೆ. ಎಷ್ಟೇ ಶೋ ಪ್ರದರ್ಶನ ಕಂಡರೂ ಮುಖ್ಯಮಂತ್ರಿ ನಾಟಕದ ಜನಪ್ರಿಯತೆ ಎಂದಿಗೂ ಕಡಿಮೆ ಆಗಿಲ್ಲ. ಪ್ರತಿ ಬಾರಿಯೂ ಈ ನಾಟಕ ಹೌಸ್ಫುಲ್ ಪ್ರದರ್ಶನ ಕಾಣುತ್ತದೆ. ವೀಕೆಂಡ್ನಲ್ಲಿ ಈ ನಾಟಕವನ್ನು ನೀವು ನೋಡಬಹುದಾಗಿದೆ.
ಬಿವಿ ರಾಜಾರಾಮ್ ಅವರು ‘ಮುಖ್ಯಮಂತ್ರಿ’ ನಾಟಕವನ್ನು ನಿರ್ದೇಶನ ಮಾಡಿದರು. 1980ರಲ್ಲಿ ಈ ನಾಟಕದ ಮೊದಲ ಶೋ ಪ್ರದರ್ಶನ ಕಂಡಿತು. ಆಗ ಯಾರೊಬ್ಬರೂ ಈ ನಾಟಕ ಇಷ್ಟು ದೀರ್ಘ ಪ್ರಯಾಣ ಕಾಣುತ್ತದೆ ಎಂದು ಭಾವಿಸಿರಲಿಲ್ಲ. ರೆಂಜಿತ್ ಕಪೂರ್ ಅವರು ಹಿಂದಿಯಲ್ಲಿ ಬರೆದ ಕಥೆಯನ್ನು ಆಧರಿಸಿ ‘ಮುಖ್ಯಮಂತ್ರಿ’ ನಾಟಕ ಜನಿಸಿತು.
ಟಿಎಸ್ ಲೋಹಿತಾಶ್ವ ಅವರು ಈ ನಾಟಕವನ್ನು ಕನ್ನಡಕ್ಕೆ ತರ್ಜಮ್ಯ ಮಾಡಿದರು. ಅವರು ಮುಖ್ಯಮಂತ್ರಿ ಪಾತ್ರ ಮಾಡಬೇಕಿತ್ತು. ಆದರೆ, ಅವರಿಗೆ ಅನಾರೋಗ್ಯ ಆಗಿದ್ದರಿಂದ ಚಂದ್ರು ಅವರಿಗೆ ಅವಕಾಶ ಹೋಯಿತು. ಗಂಭೀರ ರಾಜಕೀಯ ವಿಚಾರ ಹೊಂದಿದ್ದ ಈ ನಾಟಕವು ಅದರ ಪ್ರಥಮ ಪ್ರದರ್ಶನದ ನಂತರ ರಾಜಕೀಯ ವಿಡಂಬನೆಯಾಗಿ ಬದಲಾಯಿತು ಅನ್ನೋದು ವಿಶೇಷ.
ಮುಖ್ಯಮಂತ್ರಿ ಚಂದ್ರುಗೆ ಬಾಯ್ಪಾಟ ಮಾಡಿಕೊಂಡು ಡೈಲಾಗ್ ಹೇಳಲು ಇಷ್ಟ ಇರಲಿಲ್ಲ. ಹೀಗಾಗಿ, ಅವರು ನಾಟಕಕ್ಕೆ ಹಾಸ್ಯದ ಟಚ್ ಕೊಟ್ಟರು. ಆ ಬಳಿಕ ಈ ನಾಟಕವನ್ನು ಎಲ್ಲರೂ ಹೆಚ್ಚು ಇಷ್ಟಪಟ್ಟರು. ಚಂದ್ರಶೇಖರ್ ಎಂದಿದ್ದವರು ಮುಖ್ಯಮಂತ್ರಿ ಚಂದ್ರು ಆಗಿ ಬದಲಾಗಲು ಈ ನಾಟಕವೇ ಕಾರಣ ಆಯಿತು.
ವರ್ಷಗಳು ಕಳೆದಂತೆ ಸ್ಥಿತಿ-ಗತಿಗಳು, ರಾಜಕೀಯ ವಿಚಾರಗಳು ಬದಲಾಗುತ್ತಾ ಬಂದಿವೆ. ಅದಕ್ಕೆ ತಕ್ಕಂತೆ ತಂಡದವರು ಡೈಲಾಗ್ನ ಬದಲಾಯಿಸುತ್ತಾ ಬಂದಿದ್ದಾರೆ. ಇದರಿಂದ ನಾಟಕ ಇನ್ನೂ ಹೊಸತನ ಕಾಪಾಡಿಕೊಂಡಿದೆ.
ಇದನ್ನೂ ಓದಿ: ಕಲ್ಪನಾ ಮೃತಪಟ್ಟಿದ್ದ ಐಬಿಯಲ್ಲಿ ರಾತ್ರಿ ಭಯನಾಕ ಅನುಭವ; ಕಿಲಕಿಲ ನಗುವಿಗೆ ಬೆಚ್ಚಿಬಿದ್ದ ಮುಖ್ಯಮಂತ್ರಿ ಚಂದ್ರು
‘ಮುಖ್ಯಮಂತ್ರಿ’ ನಾಟಕ ಮೇ 17ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ 7 ಗಂಟೆಗೆ ಪ್ರಸಾರ ಕಾಣಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್‌ಗಳು ಲಭ್ಯ ಇವೆ. ಸ್ಥಳದಲ್ಲಿ ತೆರಳಿಯೂ ನೀವು ಟಿಕೆಟ್ ಖರೀದಿಸಿಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








