ಪವನ್ ಕಲ್ಯಾಣ್ ಹಳೆಯ ಚಿತ್ರಕ್ಕೆ ಕೊನೆಗೂ ಬಂತು ರಿಲೀಸ್ ಭಾಗ್ಯ
ಪವನ್ ಕಲ್ಯಾಣ್ ರಾಜಕೀಯ ಕಾರಣಕ್ಕೆ ಹೊಸ ಸಿನಿಮಾ ಒಪ್ಪಿಕೊಳ್ಳೋದು ಹಾಗಿರಲಿ, ಈ ಮೊದಲು ಸಹಿ ಹಾಕಿದ ಸಿನಿಮಾಗಳನ್ನು ಮಾಡಿ ಮುಗಿಸಿದರೆ ಸಾಕಾಗಿದೆ. ಈಗ ಅವರು ದೊಡ್ಡ ಬಿಡುವು ಪಡೆದು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರ ಹಳೆಯ ಚಿತ್ರ ಒಂದಕ್ಕೆ ರಿಲೀಸ್ ಭಾಗ್ಯ ಸಿಗುತ್ತಿದೆ ಅನ್ನೋದು ವಿಶೇಷ.

ಪವನ್ ಕಲ್ಯಾಣ್ (Pawan Kalyan) ಸದ್ಯ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಆಗಿರೋ ಅವರು ಆಡಳಿತದ ಕಡೆ ಗಮನ ಹರಿಸುತ್ತಿದ್ದಾರೆ. ಈಗ ಅವರಿಗೆ ಒಪ್ಪಿಕೊಂಡ ಸಿನಿಮಾ ಕೆಲಸಗಳನ್ನು ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕೆ ಪವನ್ ಕಲ್ಯಾಣ್ ಅವರು ರಾಜಕೀಯದಿಂದ ಬಿಡುವು ಮಾಡಿಕೊಂಡು, ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಇದರಿಂದ ಅವರ ಹಳೆಯ ಚಿತ್ರಕ್ಕೆ ಕೊನೆಗೂ ರಿಲೀಸ್ ಭಾಗ್ಯ ಸಿಕ್ಕಂತೆ ಆಗಿದೆ. ಈ ವಿಚಾರ ಪವನ್ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.
ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾ ಘೋಷಣೆ ಆಗಿದ್ದು 2022ರಲ್ಲಿ. ಆ ಬಳಿಕ ಈ ಚಿತ್ರದ ಶೂಟ್ ವಿಳಂಬ ಆಗುತ್ತಲೇ ಹೋಯಿತು. ಸಿನಿಮಾ ತಂಡದಿಂದ ಒಂದಷ್ಟು ಪೋಸ್ಟರ್ಗಳು ಬಂದವೇ ಹೊರತು ಸಿನಿಮಾ ಮಾತ್ರ ರಿಲೀಸ್ ಆಗಲೇ ಇಲ್ಲ. ಈಗ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಒಂದಷ್ಟು ಮಾಹಿತಿ ಹೊರ ಬಿದ್ದಿದೆ. ಈ ಚಿತ್ರ ಸೆಪ್ಟೆಂಬರ್ನಲ್ಲಿ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.
‘ಒಜಿ’ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಸಾಹೋ’ ಹೆಸರಿನ ಡಿಸಾಸ್ಟರ್ ಚಿತ್ರವನ್ನು ಅವರು ನೀಡಿದ್ದರು. ಆ ಬಳಿಕ ಅವರಿಗೆ ‘ಒಜಿ’ ಆಫರ್ ಸಿಕ್ಕಿತಾದರೂ ಶೂಟಿಂಗ್ ಮಾತ್ರ ಪೂರ್ಣಗೊಂಡಿರಲಿಲ್ಲ. ಈಗ ಪವನ್ ಕಲ್ಯಾಣ್ ಅವರು ದೊಡ್ಡ ಮನಸ್ಸು ಮಾಡಿ ಡೇಟ್ಸ್ ಕೊಟ್ಟಿದ್ದಾರೆ. ಹೀಗಾಗಿ, ಸುಜೀತ್ ಅವರು ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಲಿದ್ದಾರೆ.
ಪವನ್ ಕಲ್ಯಾಣ್ ಕೊಟ್ಟ ಡೇಟ್ಸ್ನಲ್ಲಿ ಶೂಟಿಂಗ್ ಪೂರ್ಣಗೊಳಿಸಲು ‘ಒಜಿ’ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅವರು ಇಂದು (ಮೇ 14) ಸೆಟ್ ಸೇರುತ್ತಿರುವ ಹಿನ್ನೆಲೆಯಲ್ಲಿ ತಂಡದಿಂದ ಏನಾದರೂ ಹೊಸ ಘೋಷಣೆಯ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ. ಈ ಚಿತ್ರವನ್ನು ಡಿವಿವಿ ದಾನಯ್ಯ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರು ಹಾಕಿದ ಹಣಕ್ಕೆ ಬಡ್ಡಿ ಬೆಳೆಯುತ್ತಿದ್ದು, ಚಿಂತೆಗೆ ಒಳಗಾಗುತ್ತಿದ್ದಾರೆ. ಪವನ್ ಕಲ್ಯಾಣ್ ಸೆಟ್ ಸೇರಿರುವುದರಿಂದ ಅವರು ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಸಿನಿಮಾದಲ್ಲಿ ಜಪಾನಿನ ಸೂಪರ್ ಸ್ಟಾರ್ ನಟ
ಪವನ್ ಕಲ್ಯಾಣ್ ಅವರು ‘ಹರಿ ಹರ ವೀರ ಮಲ್ಲು’, ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೂ ಡೇಟ್ಸ್ ಕೊಟ್ಟಿದ್ದಾರೆ. ಅವುಗಳ ಶೂಟ್ನೂ ಕೂಡ ಅವರು ಪೂರ್ಣಗೊಳಿಸಲಿದ್ದಾರೆ. ಇದು ಪವನ್ ಕಲ್ಯಾಣ್ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








