‘ಹಿಂದಿಯಲ್ಲಿ ‘ಆಚಾರ್ಯ’ ರಿಲೀಸ್ ಮಾಡಲ್ಲ, ಬೇಸರವೂ ಇಲ್ಲ’: ನಿರ್ಧಾರಕ್ಕೆ ಕಾರಣ ತಿಳಿಸಿದ ರಾಮ್ ಚರಣ್
Megastar Chiranjeevi: ಹಿಂದಿ ಮಾರ್ಕೆಟ್ ಬಗ್ಗೆ ‘ಆಚಾರ್ಯ’ ಚಿತ್ರತಂಡ ತಲೆ ಕೆಡಿಸಿಕೊಂಡಿಲ್ಲ. ಅದಕ್ಕೆ ಕಾರಣ ಏನೆಂದು ನಟ/ನಿರ್ಮಾಪಕ ರಾಮ್ ಚರಣ್ ವಿವರಿಸಿದ್ದಾರೆ.
ಈಗ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ (Pan India Movie) ಟ್ರೆಂಡ್ ಜೋರಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಹಿಂದಿ ವರ್ಷನ್ನಿಂದ ‘ಆರ್ಆರ್ಆರ್’, ‘ಪುಷ್ಪ’, ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳು ಅತ್ಯುತ್ತಮ ಕಮಾಯಿ ಮಾಡಿವೆ. ಬಾಲಿವುಡ್ ಮಾರುಕಟ್ಟೆಯನ್ನು ದಕ್ಷಿಣ ಭಾರತದ ಸಿನಿಮಾಗಳು ಆಕ್ರಮಿಸಿಕೊಂಡಿವೆ. ಉತ್ತರ ಭಾರತದಲ್ಲಿ ಬಾಲಿವುಡ್ ಚಿತ್ರಗಳೇ ಸೊರಗುತ್ತಿರುವಾಗ ದಕ್ಷಿಣ ಭಾರತದ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿವೆ. ಮುಂಬರುವ ಅನೇಕ ಸಿನಿಮಾಗಳು ಕೂಡ ಹಿಂದಿಗೆ ಡಬ್ ಆದರೆ ಬಾಕ್ಸ್ ಆಫೀಸ್ ದೃಷ್ಟಿಯಿಂದ ಸಖತ್ ಲಾಭ ಆಗಲಿದೆ. ಆದರೆ ‘ಮೆಗಾ ಸ್ಟಾರ್’ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ (Acharya Movie) ಬೇರೆ ದಾರಿ ಹಿಡಿದಿದೆ. ಈ ಸಿನಿಮಾವನ್ನು ರಾಮ್ ಚರಣ್ (Ram Charan) ನಿರ್ಮಾಣ ಮಾಡಿದ್ದಾರೆ. ಆದರೆ ಹಿಂದಿಗೆ ಡಬ್ ಮಾಡಲು ಅವರು ಸಿದ್ಧರಿಲ್ಲ. ಈ ಬಗ್ಗೆ ಅವರು ಖಡಕ್ ನಿರ್ಧಾರ ತಿಳಿಸಿದ್ದಾರೆ. ‘ಆಚಾರ್ಯ’ ಸಿನಿಮಾವನ್ನು ಹಿಂದಿಗೆ ಡಬ್ ಮಾಡದೇ ಇರುವುದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರ ವಿವರಿಸಿದ್ದಾರೆ. ಅವರ ಈ ಉತ್ತರ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.
ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಸಿನಿಮಾ ಏ.29ರಂದು ರಿಲೀಸ್ ಆಗಲಿದೆ. ಈಗಾಗಲೇ ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಉತ್ತರ ಭಾರತದ ಮಂದಿ ಕೂಡ ಈ ಸಿನಿಮಾವನ್ನು ನೋಡಬೇಕು ಎಂದು ಕಾತರ ಇಟ್ಟುಕೊಂಡಿರಬಹುದು. ಆದರೆ, ಹಿಂದಿಗೆ ಡಬ್ ಆಗದೇ ಇರುವುದರಿಂದ ಕೆಲವರಿಗೆ ನಿರಾಸೆ ಆಗಬಹುದು. ಹಿಂದಿ ಮಾರುಕಟ್ಟೆಯಿಂದ ಬರಬಹುದಾದ ಆದಾಯ ಕೂಡ ಚಿತ್ರತಂಡಕ್ಕೆ ಮಿಸ್ ಆಗಲಿದೆ. ಹಾಗಿದ್ದರೂ ಕೂಡ ರಾಮ್ ಚರಣ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
‘ಈ ಸಿನಿಮಾದ ಕೆಲಸ ಶುರು ಆದಾಗಿನಿಂದಲೂ ನಿರ್ದೇಶಕ ಕೊರಟಾಲ ಶಿವ ಅವರು ಈ ವಿಚಾರದಲ್ಲಿ ಸ್ಪಷ್ಟವಾಗಿದ್ದರು. ಇದು ದಕ್ಷಿಣ ಭಾರತದ ಸೊಗಡಿನ ಸಿನಿಮಾ. ಗಡಿಬಿಡಿಯಲ್ಲಿ ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿಸುವ ಉದ್ದೇಶವೂ ನಮಗೆ ಇಲ್ಲ. ಹಿಂದಿಗೆ ಡಬ್ ಆಗಿಲ್ಲ ಎಂಬ ಬಗ್ಗೆ ನಮಗೆ ಬೇಸರ ಕೂಡ ಇಲ್ಲ’ ಎಂದು ರಾಮ್ ಚರಣ್ ಅವರು ಹೇಳಿದ್ದಾರೆ.
ಈ ಸಿನಿಮಾದಲ್ಲಿ ರಾಮ್ ಚರಣ್ ಅತಿಥಿ ಪಾತ್ರ ಮಾಡಿದ್ದಾರೆ. ಆರಂಭದಲ್ಲಿ ಈ ಬಗ್ಗೆ ಸ್ವತಃ ರಾಮ್ ಚರಣ್ ಅವರಿಗೂ ತಿಳಿದಿರಲಿಲ್ಲವಂತೆ. ‘ನಾನು ನಿರ್ಮಾಪಕನಾಗಿ ತೊಡಗಿಕೊಂಡಿದ್ದೆ. ಒಂದು ದಿನ ಕೊರಟಾಲ ಶಿವ ಅವರು ಬಂದು ಅತಿಥಿ ಪಾತ್ರದ ಬಗ್ಗೆ ಹೇಳಿದರು. ನಾನು ‘ಆರ್ಆರ್ಆರ್’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದೆ. ‘ಆಚಾರ್ಯ’ ಸಿನಿಮಾದ ಗೆಸ್ಟ್ ರೋಲ್ ಬಗ್ಗೆ ಕೇಳಿ ಖುಷಿ ಆಯಿತು. ಆ ಪಾತ್ರ ನೀಡಿದ್ದಕ್ಕಾಗಿ ನಿರ್ದೇಶಕರಿಗೆ ಧನ್ಯವಾದಗಳು’ ಎಂದು ರಾಮ್ ಚರಣ್ ಹೇಳಿದ್ದಾರೆ.
‘ಆರ್ಆರ್ಆರ್’ ಸಿನಿಮಾದಿಂದ ರಾಮ್ ಚರಣ್ ಅವರಿಗೆ ಬಹುದೊಡ್ಡ ಯಶಸ್ಸು ಸಿಕ್ಕಿದೆ. ರಾಜಮೌಳಿ, ಜ್ಯೂ. ಎನ್ಟಿಆರ್ ಜತೆ ಸೇರಿ ಅವರು ಭರ್ಜರಿ ಗೆಲುವು ಕಂಡಿದ್ದಾರೆ.
ಇದನ್ನೂ ಓದಿ:
ಹೇಗಿದೆ ರಾಮ್ ಚರಣ್ ಹೊಸ ಕಾರು? ಇದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ
‘ಆರ್ಆರ್ಆರ್’ನಿಂದ ರಾಮ್ ಚರಣ್ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್ನಿಂದ ಬಂತು ಎರಡೆರಡು ಆಫರ್