ಡ್ರಗ್ಸ್ ಪ್ರಕರಣದಲ್ಲಿ ಹೆಸರು ಬಹಿರಂಗ, ಪ್ರತಿಕ್ರಿಯೆ ನೀಡಿದ ನಟಿ ಆಶು ರೆಡ್ಡಿ

Ashu Reddy: ಕೆಲವು ದಿನಗಳ ಹಿಂದಷ್ಟೆ ಡ್ರಗ್ಸ್ ಪ್ರಕರಣದಲ್ಲಿ ನಿರ್ಮಾಪಕ ಕೆಪಿ ಚೌಧರಿಯನ್ನು ಪೊಲೀಸರು ಬಂಧಿಸಿದ್ದು, ಆತ ನಟಿ ಆಶು ರೆಡ್ಡಿಗೆ ಡ್ರಗ್ಸ್ ಮಾರಾಟ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ನಟಿ ಆಶು ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಹೆಸರು ಬಹಿರಂಗ, ಪ್ರತಿಕ್ರಿಯೆ ನೀಡಿದ ನಟಿ ಆಶು ರೆಡ್ಡಿ
ಆಶು ರೆಡ್ಡಿ
Follow us
ಮಂಜುನಾಥ ಸಿ.
|

Updated on: Jun 24, 2023 | 5:43 PM

ನೆರೆಯ ತೆಲುಗು ಚಿತ್ರರಂಗದಲ್ಲಿ (Tollywood) ಮತ್ತೊಮ್ಮೆ ಡ್ರಗ್ಸ್ ಪ್ರಕರಣ (Drugs Case) ಹೊರಗೆ ಬಂದಿದೆ. ಈ ಹಿಂದೆ ಹಲವು ಬಾರಿ ತೆಲುಗು ಚಿತ್ರರಂಗದ ಡ್ರಗ್ಸ್ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದರು. ಈಗ ಮತ್ತೊಮ್ಮೆ ಕೆಲವು ತೆಲುಗು ಸಿನಿಮಾ ನಟ-ನಟಿಯರು ಹಾಗೂ ನಿರ್ಮಾಪಕರು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಜೂನ್ 14ರಂದು ನಿರ್ಮಾಪಕ ಕೆಪಿ ಚೌದರಿಯನ್ನು (KP Chowdary) ಹೈದರಾಬಾದ್ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದರು. ಆತನ ವಿಚಾರಣೆ ನಡೆಸಿದ ಬಳಿಕ ಇನ್ನೂ 12 ಮಂದಿಯ ಹೆಸರು ಹೊರಬಂದಿದ್ದು ಅದರಲ್ಲಿ ನಟಿ ಆಶು ರೆಡ್ಡಿ (Ashu Reddy) ಹೆಸರೂ ಸಹ ಇದೆ.

ಕೆಪಿ ಚೌದರಿಯು ಹಲವು ಜನರಿಗೆ ಕೊಕೇನ್ ಸೇರಿದಂತೆ ಇನ್ನೂ ಕೆಲವು ಅಪಾಯಕಾರಿ ಮಾದಕ ವಸ್ತುಗಳನ್ನು ಮಾರಿರುವುದಾಗಿ ಪೊಲೀಸರು ತಮ್ಮ ರಿಮ್ಯಾಂಡ್ ರಿಪೋರ್ಟ್​ನಲ್ಲಿ ಹೇಳಿದ್ದಾರೆ. ಈ ಪ್ರಮುಖ ಹನ್ನೆರಡು ಮಂದಿಯಲ್ಲಿ ಚಿತ್ರರಂಗದ ಕೆಲವು ನಟ ಹಾಗೂ ನಟಿಯರು ಇದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಜನಪ್ರಿಯ ನಟಿ ಆಶು ರೆಡ್ಡಿಗೆ ಸಹ ಕೆಪಿ ಚೌಧರಿ ಮಾದಕ ವಸ್ತು ಮಾರಿರುವುದಾಗಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆದರೆ ನಟಿ ಆಶು ರೆಡ್ಡಿ ಮಾತ್ರ, ತಮಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲವೆಂದಿದ್ದಾರೆ.

ಈ ಬಗ್ಗೆ ನಟಿ ಆಶು ರೆಡ್ಡಿ ತಮ್ಮ ಇನ್​ಸ್ಟಾಗ್ರಾಂ ಮೂಲಕ ಸ್ಪಷ್ಟನೆ ನೀಡಿದ್ದು, ”ಕೆಲವು ಮಾಧ್ಯಮದವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕೆಲವು ವ್ಯಕ್ತಿಗಳೊಟ್ಟಿಗೆ, ಕೆಲವು ಕಾರಣಗಳಿಗೆ ನಾನು ಸಂಪರ್ಕ ಹೊಂದಿದ್ದೇನೆ ಎಂದು ಆರೋಪ ಮಾಡುತ್ತಿದ್ದಾರೆ. ಅದೆಲ್ಲವೂ ಸುಳ್ಳು. ಅನಿವಾರ್ಯತೆ ಬಂದಾಗ ಸೂಕ್ತ ವ್ಯಕ್ತಿಗಳಿಗೆ ನಾನೇ ಸ್ವತಃ ಆ ಬಗ್ಗೆ ಸ್ಪಷ್ಟನೆ ನೀಡುತ್ತೇನೆ ಎಂದಿರುವ ಆಶು ರೆಡ್ಡಿ, ನನ್ನ ಮೊಬೈಲ್ ಸಂಖ್ಯೆಯನ್ನು ಬಹಿರಂಗ ಮಾಡುವುದನ್ನು ನಾನು ಸಹಿಸುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ:ಡ್ರಗ್ ಕೇಸ್​ನಲ್ಲಿ ಸುದ್ದಿ ಆದ ಆಶು ರೆಡ್ಡಿ ಯಾರು? ಸಂದರ್ಶನದಲ್ಲಿ ಈ ನಟಿಯ ಕಾಲಿಗೆ ಮುತ್ತಿಟ್ಟಿದ್ರು ಆರ್​ಜಿವಿ

ತೆಲುಗು ಬಿಗ್​ಬಾಸ್​ನ ಮಾಜಿ ಸ್ಪರ್ಧಿಯಾಗಿರುವ ಆಶು ರೆಡ್ಡಿ ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದು, ಐಟಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈಗ ಬಂಧನಕ್ಕೆ ಒಳಗಾಗಿರುವ ಕೆಪಿ ಚೌಧರಿ ಹಾಗೂ ಆಶು ರೆಡ್ಡಿ ಬಹಳ ಆಪ್ತರು ಎನ್ನಲಾಗುತ್ತಿದ್ದು, ಅವರಿಬ್ಬರ ಆಪ್ತತೆ ಸಾರುವ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಕೆಪಿ ಚೌಧರಿಯ ಮೊಬೈಲ್ ಜಾಲಾಡಿದ ಪೊಲೀಸರಿಗೆ ಆಶು ರೆಡ್ಡಿ ಹಾಗೂ ಚೌಧರಿಯ ಹಲವು ಚಿತ್ರಗಳು ದೊರೆತಿವೆ ಎನ್ನಲಾಗುತ್ತಿದೆ. ಅಲ್ಲದೆ ಕೆಪಿ ಚೌಧರಿ, ಆಶು ರೆಡ್ಡಿ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದುದಾಗಿ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆಶು ರೆಡ್ಡಿ ಜೊತೆಗೆ ರವಿ ತೇಜ ಸಹೋದರ ರಘು ತೇಜ, ಸನಾ ಮಿಶ್ರಾ, ಸುಶ್ರಾಂತ್ ರೆಡ್ಡಿ, ಶ್ವೇತಾ ಠಾಗೂರ್, ನಿತಿನೇಶ್, ಬೆಜವಾಡ ಭರತ್, ಪ್ರಸಾದ್ ಎಂಬುವರಿಗೆ ಬಂಧಿತ ನಿರ್ಮಾಪಕ ಕೆಪಿ ಚೌಧರಿ ಡ್ರಗ್ಸ್ ಮಾರಾಟ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಕೆಪಿ ಚೌಧರಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ತಾನು ಡ್ರಗ್ಸ್ ಸೇವಿಸುತ್ತಿದುದಾಗಿಯೂ, ತನ್ನ ಸೇವನೆಗೆಂದು ದೊಡ್ಡ ಮೊತ್ತದ ಕೊಕೇನ್ ಖರೀದಿಸಿದ್ದಾಗಿಯೂ ಹೇಳಿದ್ದಾನೆ. ತಾನು ಯಾರಿಗೂ ಮಾದಕ ವಸ್ತು ಮಾರಾಟ ಮಾಡಿಲ್ಲವೆಂದು ಚೌಧರಿ ಹೇಳಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ