ರುದ್ರನಾಗಿ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ಅಜಯ್ ದೇವಗನ್; ಇದು ಯಾವುದರ ರಿಮೇಕ್?
ಅಜಯ್ ದೇವಗನ್ ಜೊತೆಯಲ್ಲಿ ಇನ್ನೂ ಯಾರೆಲ್ಲ ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಮುಂಬೈನಲ್ಲಿ ಇದರ ಶೂಟಿಂಗ್ ನಡೆಯಲಿದೆ.

ವೆಬ್ ಸಿರೀಸ್ ಲೋಕ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಹಲವಾರು ಬಗೆಯ ವೆಬ್ ಸರಣಿಗಳು ಮೂಡಿಬರುತ್ತಿವೆ. ಅನೇಕ ಸ್ಟಾರ್ ಕಲಾವಿದರು ಇವುಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಷ್ಟು ದಿನ ಬರೀ ಸಿನಿಮಾಗಳನ್ನೇ ನಂಬಿಕೊಂಡಿದ್ದ ದೊಡ್ಡ ದೊಡ್ಡ ನಟ-ನಟಿಯರಿಗೆ ಈಗ ವೆಬ್ ಸಿರೀಸ್ ಲೋಕ ಕೈ ಬೀಸಿ ಕರೆಯುತ್ತಿದೆ. ಬಾಲಿವುಡ್ನ ಸ್ಟಾರ್ ನಟ ಅಜಯ್ ದೇವಗನ್ ಅವರು ಇದೇ ಮೊದಲ ಬಾರಿಗೆ ಡಿಜಿಟಲ್ ದುನಿಯಾಗೆ ಎಂಟ್ರಿ ನೀಡುತ್ತಿದ್ದಾರೆ.
ಮುಂಚೂಣಿ ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿರುವ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಹೊಸದೊಂದು ವೆಬ್ ಸಿರೀಸ್ ಘೋಷಣೆ ಮಾಡಲಾಗಿದೆ. ಅದಕ್ಕೆ ‘ರುದ್ರ’ ಎಂದು ಹೆಸರಿಡಲಾಗಿದೆ. ದಿ ಎಡ್ಜ್ ಆಫ್ ಡಾರ್ಕ್ನೆಸ್ ಎಂಬುದು ಇದರ ಟ್ಯಾಗ್ ಲೈನ್. ಈ ವೆಬ್ ಸಿರೀಸ್ನಲ್ಲಿ ಅಜಯ್ ದೇವಗನ್ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ. ಟೈಟಲ್ ಜೊತೆಗೆ ಅಜಯ್ ದೇವಗನ್ ಅವರ ಫಸ್ಟ್ಲುಕ್ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ವೆಬ್ ಸಿರೀಸ್ನಲ್ಲಿ ನಟಿಸುತ್ತಿರುವುದಕ್ಕೆ ಅಜಯ್ ದೇವಗನ್ ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ‘ಯಾವಾಗಲೂ ವಿಶೇಷವಾದ ಕಥೆಗಳನ್ನು ಹೇಳಬೇಕು ಮತ್ತು ಪ್ರತಿಭಾವಂತರ ಜೊತೆ ಕೆಲಸ ಮಾಡಬೇಕು ಎಂಬುದೇ ನನ್ನ ಪ್ರಯತ್ನ ಆಗಿರುತ್ತದೆ. ಈ ವೆಬ್ ಸಿರೀಸ್ ಮೂಲಕ ಭಾರತದಲ್ಲಿ ಮನರಂಜನೆಯನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯುವ ಆಲೋಚನೆ ಇದೆ’ ಎಂದು ಅಜಯ್ ದೇವಗನ್ ಹೇಳಿದ್ದಾರೆ.
ಅಂದಹಾಗೆ, ಇದು ಬ್ರಿಟಿಷ್ ವೆಬ್ ಸಿರೀಸ್ ‘ಲೂಥರ್’ನ ಹಿಂದಿ ರಿಮೇಕ್ ಆಗಿರಲಿದೆ. ಇದರಲ್ಲಿ ಅಜಯ್ ದೇವಗನ್ ಪೊಲೀಸ್ ಅಧಿಕಾರಿ ಪಾತ್ರ ಮಾಡಲಿದ್ದಾರೆ. ರಾಜೇಶ್ ಮಪುಸ್ಕರ್ ನಿರ್ದೇಶನ ಮಾಡಲಿದ್ದಾರೆ. ಅಪ್ಲಾಸ್ ಎಂಟರ್ಟೇನ್ಮೆಂಟ್ ಮತ್ತು ಬಿಬಿಸಿ ಸ್ಟುಡಿಯೂ ಇಂಡಿಯಾ ಜೊತೆಯಾಗಿ ಇದನ್ನು ನಿರ್ಮಾಣ ಮಾಡಲಿವೆ. ಅಜಯ್ ದೇವಗನ್ ಜೊತೆಯಲ್ಲಿ ಇನ್ನೂ ಯಾರೆಲ್ಲ ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಮುಂಬೈನಲ್ಲಿ ಇದರ ಶೂಟಿಂಗ್ ನಡೆಯಲಿದೆ.
Happy to announce the crime thriller of the year Hotstar Specials ‘Rudra – The Edge Of Darkness’. This one’s going to be ‘killer’ @DisneyplusHSVIP ?#DebutDobara #Rudra@ApplauseSocial @BBCStudiosIndia @nairsameer pic.twitter.com/CoFFRlARAW
— Ajay Devgn (@ajaydevgn) April 20, 2021
‘ಬೇಗ ಶೂಟಿಂಗ್ ಶುರುವಾಗಲಿ ಎಂದು ನಾನು ಕಾಯುತ್ತಿದ್ದೇನೆ. ಪೊಲೀಸ್ ಪಾತ್ರ ಮಾಡುವುದು ನನಗೆ ಹೊಸದೇನೂ ಅಲ್ಲ. ಆದರೆ ಈ ಬಾರಿ ನಾನು ಮಾಡುತ್ತಿರುವ ಪಾತ್ರ ಹೆಚ್ಚು ತೀಕ್ಷ್ಣ, ಕಠಿಣ ಮತ್ತು ಗಾಢವಾಗಿದೆ’ ಎಂದು ತಮ್ಮ ಪಾತ್ರದ ಬಗ್ಗೆ ಅಜಯ್ ದೇವಗನ್ ಬರೆದುಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಅಜಯ್ ದೇವಗನ್ ನಿರ್ಮಾಪಕನಾಗಿ ಓಟಿಟಿಗೆ ಕಾಲಿಟ್ಟಿದ್ದರು. ಅವರು ನಿರ್ಮಾಣ ಮಾಡಿದ ‘ದಿ ಬಿಗ್ ಬುಲ್’ ಸಿನಿಮಾ ಕೂಡ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿತ್ತು.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಜಗಳ ಮಾಡಿ ಹೊಡೆತ ತಿಂದ್ರಾ ಅಜಯ್ ದೇವಗನ್? ವಿಡಿಯೋ ವೈರಲ್!