ಎ.ಆರ್. ರೆಹಮಾನ್ ಆಗಿ ಬದಲಾದ ದಿಲೀಪ್ ಕುಮಾರ್; ಮತಾಂತರಕ್ಕೆ ಕಾರಣ ಆಗಿತ್ತು ಈ ವಿಚಾರ
AR Rahman Birthday: ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್.ಎಸ್. ಶೇಖರ್ ಅವರ ಮಗನಾಗಿ ದಿಲೀಪ್ ಕುಮಾರ್ ಜನಿಸಿದ್ದರು. ದಿಲೀಪ್ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುವ ಮೊದಲೇ ಶೇಖರ್ ಮೃತಪಟ್ಟರು.
ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (AR Rahman) ಅವರು ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರು ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಕೂಡ ಗೆದ್ದಿದ್ದಾರೆ. ಇಡೀ ವಿಶ್ವಕ್ಕೆ ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆ ಬಗ್ಗೆ ಮೆಚ್ಚುಗೆ ಇದೆ. ಇಂದು (ಜನವರಿ 6) ಹುಟ್ಟುಹಬ್ಬ (AR Rahman Birthday) ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದಲೂ ಶುಭಾಶಯ ಬರುತ್ತಿದೆ. ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಹಾಕಿ ವಿಶ್ ಮಾಡುತ್ತಿದ್ದಾರೆ. ಅವರು ಮೊದಲು ಹಿಂದು ಕುಟುಂಬಕ್ಕೆ ಸೇರಿದ್ದರು. ಆದರೆ, ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು.
ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್.ಎಸ್. ಶೇಖರ್ ಅವರ ಮಗನಾಗಿ ದಿಲೀಪ್ ಕುಮಾರ್ ಜನಿಸಿದ್ದರು. ದಿಲೀಪ್ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುವ ಮೊದಲೇ ಶೇಖರ್ ಮೃತಪಟ್ಟರು. ಇದರಿಂದ ದಿಲೀಪ್ ಕುಮಾರ್ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು. ಇದೇ ಸಂದರ್ಭದಲ್ಲಿ ದಿಲೀಪ್ ಕುಮಾರ್ ತಾಯಿ ಕರೀಮಾ ಬೇಗಂ (ಈಗಿನ ಹೆಸರು) ಸೂಫಿ ಸಂತ ಕರಿಮುಲ್ಲಾ ಶಾ ಖದ್ರಿಯನ್ನು ಭೇಟಿ ಮಾಡಿದರು. ಅವರಿಂದ ಪ್ರಭಾವಕ್ಕೆ ಒಳಗಾದರು. ದಿಲೀಪ್ ಕುಮಾರ್ ಕೂಡ ಅವರಿಂದ ಪ್ರಭಾವಿತರಾದರು. ಈ ಕಾರಣಕ್ಕೆ ಮುಸ್ಲಿಂ ಧರ್ಮಕ್ಕೆ ಒಳಗಾದರು.
‘1986ರಲ್ಲಿ ಕರಿಮುಲ್ಲಾ ಅವರನ್ನು ಭೇಟಿ ಮಾಡಿದೆವು. ಆಗ ಅವರಿಗೆ ಅನಾರೋಗ್ಯ ಕಾಡಿತ್ತು. ನನ್ನ ಅಮ್ಮ ಅವರ ಆರೈಕೆ ಮಾಡಿದರು. ನನ್ನ ತಾಯಿಯನ್ನು ಅವರು ಮಗಳು ಎಂದು ಸ್ವೀಕರಿಸಿದ್ದರು. ನನಗೆ ಆಗ 19 ವರ್ಷ ವಯಸ್ಸು. ನಾವು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡೆವು. ನಾನು ಎ.ಆರ್. ರೆಹಮಾನ್ ಆದೆ’ ಎಂದು ರೆಹಮಾನ್ ಸಂದರ್ಶನದಲ್ಲಿ ಹೇಳಿದ್ದರು.
ಇದನ್ನೂ ಓದಿ: ‘ಐಫಾ 2022’ ಸಮಾರಂಭದಲ್ಲಿ ಎಸ್ಪಿಬಿ, ಲತಾಜೀ, ಕೆಕೆ ನಿಧನದ ಬಗ್ಗೆ ಮಾತನಾಡಿದ ಎ.ಆರ್. ರೆಹಮಾನ್
ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದ ಮೊದಲ ಸಿನಿಮಾ ‘ರೋಜಾ’ ತೆರೆಗೆ ಬರುವುದಕ್ಕೂ ಕೆಲವೇ ದಿನ ಮೊದಲು ರೆಹಮಾನ್ ಮತಾಂತರಗೊಂಡಿದ್ದರು. ಸಿನಿಮಾದಲ್ಲಿ ಅವರ ಹೆಸರು ದಿಲೀಪ್ ಕುಮಾರ್ ಎಂದೇ ಇತ್ತು. ಈ ಕಾರಣಕ್ಕೆ ರೆಹಮಾನ್ ಎಂದು ಬದಲಾಯಿಸಿಕೊಳ್ಳುವಂತೆ ಅವರ ತಾಯಿ ಸೂಚಿಸಿದ್ದರು. ‘ನಿನ್ನ ಹೊಸ ಹೆಸರು ತೆರೆಮೇಲೆ ಕಾಣಲಿ. ಇಲ್ಲವಾದರೆ ನಿನ್ನ ಹೆಸರನ್ನು ಅವರು ಹಾಕುವುದೇ ಬೇಡ’ ಎಂದು ರೆಹಮಾನ್ ತಾಯಿ ಹೇಳಿದ್ದರಂತೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ