ಮೇ 24ರಂದು ನಿರ್ದೇಶಕಿಯರ ಕಿರುಚಿತ್ರೋತ್ಸವ ‘ಅವಳ ಹೆಜ್ಜೆ’; ವಿಜೇತರಿಗೆ 1 ಲಕ್ಷ ರೂ. ಬಹುಮಾನ
ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಇದೆ. ಈ ವಿಚಾರದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಅಗತ್ಯವಿದೆ. ‘ಅವಳ ಹೆಜ್ಜೆ ಕಿರುಚಿತ್ರೋತ್ಸವ’ ಮೂಲಕ ಅಂಥ ಪ್ರಯತ್ನ ಆಗಲಿದೆ. ಮಹಿಳೆಯರು ನಿರ್ದೇಶಿಸಿದ ವಿಶೇಷವಾದ ಕೆಲವು ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. ಸಂವಾದ ಕೂಡ ಹಮ್ಮಿಕೊಳ್ಳಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಚಿತ್ರರಂಗದಲ್ಲಿ ಮಹಿಳಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮೇ 24ರ ಭಾನುವಾರದಂದು ‘ಅವಳ ಹೆಜ್ಜೆ ಕಿರುಚಿತ್ರೋತ್ಸವ 2026’ (Avala Hejje Women’s Short Film Festival) ಚಲನಚಿತ್ರ ಹಬ್ಬ ಆಯೋಜನೆಗೊಂಡಿದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7ರವರೆಗೆ ನಡೆಯಲಿರುವ ಈ ಸಿನಿಮಾ ಉತ್ಸವದಲ್ಲಿ ಮಹಿಳೆಯರೇ ನಿರ್ದೇಶಿಸಿದ ಆಯ್ದ ಕಲಾತ್ಮಕ ಹಾಗೂ ವಿಭಿನ್ನ ಕಿರುಚಿತ್ರಗಳು (Short Films) ಪ್ರದರ್ಶನಗೊಳ್ಳಲಿದ್ದು, ಅತ್ಯುತ್ತಮ ಚಿತ್ರಕ್ಕೆ ಭರ್ಜರಿ 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಣೆಯಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿರುವ ಈ ಚಿತ್ರೋತ್ಸವದಲ್ಲಿ ಒಟ್ಟು 2 ಹಂತಗಳಲ್ಲಿ ಪ್ರದರ್ಶನಗಳು ನಡೆಯಲಿವೆ. ಮೊದಲ ಅವಧಿಯಲ್ಲಿ ಅನು ಕುಲಕರ್ಣಿ ಅವರ ‘ಕಾಶಿ ಕೈಲಾಸ’, ಅಶ್ವಿನಿ ಅನೀಶ್ ಅವರ ‘ಸೋರುತಿಹುದು ಮನೆಯ ಮಾಳಿಗಿ’, ಸುಪ್ರಿಯಾ ಶಂಕರ ನಿಪ್ಪಾಣಿ ಅವರ ‘ರೊಟ್ಟಿ’, ಸೀಮಾ ಶಶಿಧರ್ ಅವರ ‘ಎ ಲಿಟ್ಲ್ ಕೇರ್’ ಹಾಗೂ ಸೌರಭಾ ರಾವ್ ನಿರ್ದೇಶನದ ‘ಹುಲಿಯಪ್ಪ’ ಚಿತ್ರಗಳ ಪ್ರದರ್ಶನ ಆಗಲಿದೆ.
ಮಧ್ಯಾಹ್ನದ ನಂತರದ ದ್ವಿತೀಯ ಅವಧಿಯಲ್ಲಿ ಸುಷ್ಮಾ ಭಾರದ್ವಾಜ್ ಅವರ ‘ದಾರಿ’, ಸುನಯನಾ ಸುರೇಶ್ ಅವರ ‘ಮೌನ ರಾಗ’, ಶ್ರೇಯ ಸುನಿಲ್ ಅವರ ‘ಆ ಮಾಡಿ’, ಹರ್ಷಿತಾ ಜಿ. ಮತ್ತು ರಚನಾ ಸುವರ್ಣ ಜಂಟಿಯಾಗಿ ನಿರ್ದೇಶಿಸಿರುವ ‘ಗೆಜ್ಜೆ’ ಹಾಗೂ ವನು ಪಾಟೀಲ್ ಅವರ ‘ನಿತ್ಯ’ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕೇವಲ ಸಿನಿಮಾ ವೀಕ್ಷಣೆಗಷ್ಟೇ ಸೀಮಿತವಾಗದೆ, ಚಿತ್ರಪ್ರೇಮಿಗಳಿಗೆ ನಿರ್ದೇಶಕಿಯರೊಂದಿಗೆ ನೇರವಾಗಿ ಸಂವಹನ ನಡೆಸಲು ಪ್ರಶ್ನೋತ್ತರ ಅವಧಿಯನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿ ಸಂಜೆ 5 ಗಂಟೆಗೆ ‘ಸಿನಿಮಾದಲ್ಲಿ ಅವಳ ಹೆಜ್ಜೆ ಅ-ಅಃ ವರೆಗೆ’ ಎಂಬ ವಿಶೇಷ ಚರ್ಚಾಗೋಷ್ಠಿ ಆಯೋಜಿತವಾಗಿದೆ. ಚಿತ್ರೋತ್ಸವದ ನಿರ್ದೇಶಕಿ ಶಾಂತಲಾ ದಾಮ್ಲ ನಡೆಸಿಕೊಡಲಿರುವ ಈ ಗೋಷ್ಠಿಯಲ್ಲಿ ಸ್ಯಾಂಡಲ್‌ವುಡ್ ನಟಿ ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುಂಡಸ್ವಾಮಿ ಮತ್ತು ಸಂಜೋತಾ ಭಂಡಾರಿ ಭಾಗವಹಿಸಿ ಚಿತ್ರರಂಗದಲ್ಲಿ ಮಹಿಳೆಯರ ಪಯಣದ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ: ‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು
ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ವಿಜೇತರ ಹೆಸರುಗಳನ್ನು ಪ್ರಕಟಿಸಿ, ಪ್ರಶಸ್ತಿ ಹಾಗೂ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ವಿತರಿಸಲಾಗುವುದು. ಸಿನಿಮಾ ಆಸಕ್ತರಿಗೆ ಇದೊಂದು ಅತ್ಯುತ್ತಮ ಸಾಂಸ್ಕೃತಿಕ ವೇದಿಕೆಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಟ್ರಸ್ಟ್ ಕೋರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





