ತೆಲುಗಿನಲ್ಲಿ ‘ಮಹಾಕಾಳಿ’ಯಾದ ಕನ್ನಡದ ಹುಡುಗಿ ಭೂಮಿ ಶೆಟ್ಟಿ
Bhoomi Shetty Telugu movie: ರಶ್ಮಿಕಾ, ಶ್ರೀಲೀಲಾ, ರುಕ್ಮಿಣಿ ವಸಂತ್ ಇನ್ನೂ ಕೆಲವು ಕನ್ನಡದ ನಟಿಯರು ಪರಭಾಷೆ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಆದರೆ ಬಹುತೇಕ ನಟಿಯರಿಗೆ ಮರ ಸುತ್ತುವ ನಾಯಕಿಯ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ಕನ್ನಡದ ನಟಿ ಭೂಮಿ ಶೆಟ್ಟಿ ಈಗಾಗಲೇ ಕೆಲ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇದೀಗ ಅವರು ಮಹಿಳಾ ಪ್ರಧಾನ ದೊಡ್ಡ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಮಾಹಿತಿ ಇಲ್ಲಿದೆ...

ಮುಖ್ಯಾಂಶಗಳು
- ಭೂಮಿ ಶೆಟ್ಟಿ ಕನ್ನಡದ ನಟಿ.
- ಈ ಹಿಂದೆ ಅವರು ‘ಇಕ್ಕಟ್’ ಸಿನಿಮಾನಲ್ಲಿ ನಟಿಸಿದ್ದರು.
- ಇದೀಗ ಅವರ ತೆಲುಗು ಸಿನಿಮಾ ರಿಲೀಸ್ಗೆ ಸಜ್ಜಾಗಿದೆ.
ಕನ್ನಡದ ಹುಡುಗಿಯರಿಗೆ ಪರಭಾಷೆ ಸಿನಿಮಾಗಳಲ್ಲಿ ಸಖತ್ ಅವಕಾಶಗಳು ಸಿಗುತ್ತಿವೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ, ಶ್ರೀನಿಧಿ ಶೆಟ್ಟಿ, ರುಕ್ಮಿಣಿ ವಸಂತ್ ಇನ್ನೂ ಕೆಲವು ಕನ್ನಡದ ನಟಿಯರು ಪರ ಭಾಷೆ ಸಿನಿಮಾಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ಆದರೆ ಬಹುತೇಕರಿಗೆ ಕಮರ್ಶಿಯಲ್ ಮಾಸ್, ಮಸಾಲಾ ಮಾದರಿಯ ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳು ಸಿಗುತ್ತಿವೆ. ರಶ್ಮಿಕಾರ ‘ಗರ್ಲ್ಫ್ರೆಂಡ್’ ಹೊರತುಪಡಿಸಿದರೆ ಪ್ರಬಲ ನಾಯಕಿಯ ಪಾತ್ರವುಳ್ಳ ಸಿನಿಮಾಗಳು ಸಿಕ್ಕಿರುವುದು ಕಡಿಮೆ. ಆದರೆ ಇದೀಗ ಕನ್ನಡದ ನಟಿಯಾಗಿರುವ ಭೂಮಿ ಶೆಟ್ಟಿ ಅವರಿಗೆ ಪರಭಾಷೆಯಲ್ಲಿ ಪವರ್ಫುಲ್ ಕತೆಯುಳ್ಳ ಸಿನಿಮಾನಲ್ಲಿ ಪಾತ್ರ ದೊರೆತಿದ್ದು, ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ.
‘ಮಹಾಕಾಳಿ’ ಹಸರಿನ ಪೌರಾಣಿಕ ಕತೆಯುಳ್ಳ ಸಿನಿಮಾನಲ್ಲಿ ಭೂಮಿ ಶೆಟ್ಟಿ ನಟಿಸಿದ್ದಾರೆ. ಸಿನಿಮಾ ತೆಲುಗಿನ ಜನಪ್ರಿಯ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ಅವರು ತಮ್ಮ ಕತೆಗಳ ಮೂಲಕ ಕಟ್ಟಿರುವ ‘ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್’ (PVCU)ಕ್ಕೆ ಸೇರಿದ ಕತೆಯನ್ನು ಒಳಗೊಂಡಿದೆ. ಪ್ರಶಾಂತ್ ವರ್ಮಾ ಖುದ್ದು ‘ಮಹಾಕಾಳಿ’ ಸಿನಿಮಾಕ್ಕೆ ಕತೆ ಬರೆದಿದ್ದು, ಸಿನಿಮಾ ಅನ್ನು ಕರ್ನಾಟಕ ಮೂಲದವರೇ ಆದ ಪೂಜಾ ಕೊಲ್ಲೂರು ನಿರ್ದೇಶನ ಮಾಡಿದ್ದಾರೆ.
ಸಿನಿಮಾನಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಪೋಸ್ಟರ್ಗಳಲ್ಲಿ ಭೂಮಿ ಶೆಟ್ಟಿ ಅದ್ಭುತವಾಗಿ ಕಾಣುತ್ತಿದ್ದಾರೆ. ಭೂಮಿ ಶೆಟ್ಟಿ ಅವರು ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಇಕ್ಕಟ್’ ಅವರ ಮೊದಲ ಸಿನಿಮಾ. ಅದಕ್ಕೆ ಮುಂಚೆ ಕೆಲ ಧಾರಾವಾಹಿ ಹಾಗೂ 2019ರ ಬಿಗ್ಬಾಸ್ನಲ್ಲೂ ಅವರು ಭಾಗಿ ಆಗಿದ್ದರು. ತೆಲುಗಿನಲ್ಲಿ ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಮತ್ತು ‘ಷರತ್ತುಲು ವರತೀಸ್ತೆ’ ಸಿನಿಮಾನಲ್ಲಿ ಭೂಮಿ ಶೆಟ್ಟಿ ನಟಿಸಿದ್ದಾರೆ. ಈಗ ಬಿಡುಗಡೆಗೆ ಸಿದ್ಧವಾಗುತ್ತಿರುವ ‘ಮಹಾಕಾಳಿ’ ಸಿನಿಮಾನಲ್ಲಿ ಭೂಮಿ ಜೊತೆಗೆ ಬಾಲಿವುಡ್ ಸ್ಟಾರ್ ಪೋಷಕ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಅವರದ್ದು ಇಲ್ಲಿ ವಿಶ್ವಾಮಿತ್ರನ ಪಾತ್ರ ಎನ್ನಲಾಗುತ್ತಿದೆ.
ಇದನ್ನೂ ಓದಿ:ಮೇಕಪ್ ಇಲ್ಲದೆ ಫೋಟೋ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ
ಚಿತ್ರತಂಡವು ಇಂದು ಅಕ್ಷಯ್ ಖನ್ನಾ ಅವರನ್ನೊಳಗೊಂಡ ಹೊಸ ಪೋಸ್ಟರ್ ಅನ್ನು ಇದೀಗ ಬಿಡುಗಡೆ ಮಾಡಿದೆ. ಅದಕ್ಕೆ ‘ದಿ ಎಂಡ್ ಬಿಗಿನ್ಸ್’ ಎಂಬ ಕುತೂಹಲಕಾರಿ ಶೀರ್ಷಿಕೆಯನ್ನು ನೀಡಲಾಗಿದೆ ಮತ್ತು ಚಿತ್ರದ ಆಗಸ್ಟ್ 24 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಸಿನಿಮಾದ ಬಗ್ಗೆ ತೆಲುಗು ಸಿನಿಮಾ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸ್ಮರಣ್ ಸಾಯಿ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವು 2027ರ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Wed, 19 August 26




