‘ಪಾಕಿಸ್ತಾನದ ನಿಜ ಮುಖ ಬಯಲು ಮಾಡ್ತೀನಿ, ಆಗ ನಿಮಗೆ ಗೊತ್ತಾಗುತ್ತೆ’; ಗಾಯಕನ ಎಚ್ಚರಿಕೆ
ಅದ್ನಾನ್ ಸಮಿ ಅವರ ಈ ಪೋಸ್ಟ್ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ‘ಭಾರತೀಯರು ನಿಮ್ಮೊಂದಿಗೆ ಇದ್ದಾರೆ. ನೀವು ಭಾರತೀಯರು ಎಂದು ಹೇಳಲು ಹೆಮ್ಮೆ ಆಗುತ್ತಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಗಾಯಕ ಅದ್ನಾನ್ ಸಮಿ (Adnan Sami) ಅವರು ತಮ್ಮ ಕಂಠದ ಮೂಲಕ ಗುರುತಿಸಿಕೊಂಡಿದ್ದಾರೆ. ಪಾಕಿಸ್ತಾನದ ಪೌರತ್ವ ಹೊಂದಿದ್ದ ಅದ್ನಾನ್ ಸಮಿ ಕೆಲ ವರ್ಷಗಳಿಂದ ಭಾರತದ ಪ್ರಜೆ ಆಗಿದ್ದಾರೆ. ಅವರು ಹುಟ್ಟಿದ್ದು ಇಂಗ್ಲೆಂಡ್ನಲ್ಲಿ. ಅವರ ತಂದೆ ಪಾಕಿಸ್ತಾನದವರು. ಈಗ ಅವರು ಪಾಕಿಸ್ತಾನದ ಆಡಳಿತದ ಬಗ್ಗೆ ಕಿಡಿಕಾರಿದ್ದಾರೆ. ಪಾಕ್ನ ಅಸಲಿ ಮುಖವನ್ನು ಬಹಿರಂಗ ಮಾಡುವ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. ತಾವು ನೀಡುವ ಹೇಳಿಕೆ ಅನೇಕರಿಗೆ ಶಾಕ್ ತರಲಿದೆ ಎಂದು ಕೂಡ ಹೇಳಿದ್ದಾರೆ.
‘ಪಾಕಿಸ್ತಾನದ ಬಗ್ಗೆ ನನಗೆ ಯಾಕೆ ತಿರಸ್ಕಾರ ಮನೋಭಾವನೆ ಇದೆ ಎಂದು ಎಲ್ಲರೂ ಕೇಳುತ್ತಾರೆ. ಆದರೆ, ನನ್ನ ಜತೆ ಉತ್ತಮವಾಗಿರುವ ಪಾಕಿಸ್ತಾನದ ಜನರ ಬಗ್ಗೆ ಯಾವುದೇ ದ್ವೇಷ ಭಾವನೆ ಇಲ್ಲ. ನನ್ನನ್ನು ಯಾರೆಲ್ಲ ಪ್ರೀತಿಸುತ್ತಾರೋ ಅವರ ಬಗ್ಗೆ ನನಗೂ ಪ್ರೀತಿ ಇದೆ’ ಎಂದಿದ್ದಾರೆ ಅವರು.
‘ನನಗೆ ಪಾಕಿಸ್ತಾನದ ಆಡಳಿತದ ಬಗ್ಗೆ ದ್ವೇಷ ಇದೆ. ನನ್ನನ್ನು ನಿಜವಾಗಿಯೂ ತಿಳಿದಿರುವವರಿಗೆ ಪಾಕಿಸ್ತಾನದ ಆಡಳಿತ ನನಗೆ ಏನು ಮಾಡಿದೆ ಅನ್ನೋದು ಗೊತ್ತು. ಅದುವೇ ನಾನು ಪಾಕ್ ತೊರೆಯಲು ಪ್ರಮುಖ ಕಾರಣ’ ಎಂದಿದ್ದಾರೆ ಅವರು.
‘ಪಾಕಿಸ್ತಾನ ನನ್ನನ್ನು ಹೇಗೆ ಟ್ರೀಟ್ ಮಾಡಿದೆ ಎನ್ನುವ ವಿಚಾರವನ್ನು ಶೀಘ್ರದಲ್ಲೇ ಎಕ್ಸ್ಪೋಸ್ ಮಾಡುತ್ತೇನೆ. ಆಗ ನಿಮಗೆ ಗೊತ್ತಾಗುತ್ತದೆ. ಈ ವಿಚಾರ ಅನೇಕರಿಗೆ ಶಾಕ್ ನೀಡಬಹುದು. ನಾನು ಈ ವಿಚಾರದಲ್ಲಿ ಹಲವು ವರ್ಷಗಳಿಂದ ಮೌನವಾಗಿದ್ದೆ. ಇದಕ್ಕೆ ಹಲವು ಕಾರಣಗಳು ಇದ್ದವು. ಆದರೆ, ಸರಿಯಾದ ಸಮಯ ನೋಡಿ ಎಲ್ಲರಿಗೆ ಎಲ್ಲವನ್ನೂ ಹೇಳುತ್ತೇನೆ’ ಎಂದಿದ್ದಾರೆ ಅದ್ನಾನ್ ಸಮಿ.
ಅದ್ನಾನ್ ಸಮಿ ಅವರ ಈ ಪೋಸ್ಟ್ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ‘ಭಾರತೀಯರು ನಿಮ್ಮೊಂದಿಗೆ ಇದ್ದಾರೆ. ನೀವು ಭಾರತೀಯರು ಎಂದು ಹೇಳಲು ಹೆಮ್ಮೆ ಆಗುತ್ತಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಅದ್ನಾನ್ ಸಮಿ ಅವರು 2016ರಲ್ಲಿ ಭಾರತದ ಪೌರತ್ವ ಪಡೆದರು. ಅದಕ್ಕೂ ಮೊದಲು ಅವರು ಪಾಕಿಸ್ತಾನದ ಪೌರತ್ವ ಹೊಂದಿದ್ದರು. ಆದರೆ, ಅದನ್ನು ಅವರು ಹಿಂದಿರುಗಿಸಿದರು. 2020ರಲ್ಲಿ ಅದ್ನಾನ್ ಸಮಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ‘ಗುಡ್ ಬೈ’ ಹೇಳಿದ ಖ್ಯಾತ ಗಾಯಕ ಅದ್ನಾನ್ ಸಮಿ: ಫ್ಯಾನ್ಸ್ ವಲಯದಲ್ಲಿ ಆತಂಕ
ಅದ್ನಾನ್ ಸಮಿ ಅವರು ಫಿಟ್ನೆಸ್ ವಿಚಾರದಲ್ಲೂ ಗಮನ ಸೆಳೆಯುತ್ತಾರೆ. ಈ ಮೊದಲು ಅವರು ಮಿತಿಮೀರಿದ ದೇಹದ ತೂಕ ಹೊಂದಿದ್ದರು. ಹಲವು ವರ್ಷಗಳ ಶ್ರಮ ಹಾಕಿ ಅವರು ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ ಆಗಿದ್ದಾರೆ.