ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
ಬಹುತಾರಾಗಣದ ‘ಖೇಲ್ ಖೇಲ್ ಮೇ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿತ್ತು. ಮೊದಲ ದಿನ ಸಿನಿಮಾವನ್ನು ವೀಕ್ಷಿಸಿದ ಜನರು ಮೆಚ್ಚಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ಅಂದಹಾಗೆ, ಈ ಸಿನಿಮಾಗೆ ಬೇರೆ ಚಿತ್ರಗಳಿಂದ ಪೈಪೋಟಿ ಕೂಡ ಜೋರಾಗಿದೆ.
ನಟ ಅಕ್ಷಯ್ ಕುಮಾರ್ ಅವರು ‘ಖೇಲ್ ಖೇಲ್ ಮೇ’ ಸಿನಿಮಾದಲ್ಲಿ ಅಭಿನಯಿಸಿದ್ದು, ಅವರ ಜೊತೆ ವಾಣಿ ಕಪೂರ್, ಫರ್ದೀನ್ ಖಾನ್, ತಾಪ್ಸಿ ಪನ್ನು, ಎಮಿ ವಿರ್ಕ್, ಪ್ರಗ್ಯಾ ಜೈಸ್ವಾಲ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ. ಆಗಸ್ಟ್ 15ರಂದು ಬಿಡುಗಡೆ ಆದ ಈ ಸಿನಿಮಾಗೆ ಜನರಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲೆಕ್ಷನ್ ವಿಚಾರದಲ್ಲಿಯೂ ‘ಖೇಲ್ ಖೇಲ್ ಮೇ’ ಸಿನಿಮಾ ಸಮಾಧಾನಕರ ಬೆಳವಣಿಗೆ ಕಂಡಿದೆ. ಮೊದಲ ದಿನ ಈ ಚಿತ್ರಕ್ಕೆ 5.23 ಕೋಟಿ ರೂಪಾಯಿ ಗಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ಎಷ್ಟು ಗಳಿಕೆ ಆಗಲಿದೆ ಎಂಬುದನ್ನು ಕಾದುನೋಡಬೇಕು.
ಅಕ್ಷಯ್ ಕುಮಾರ್ ನಟನೆಯ ಈ ಹಿಂದಿನ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡಿರಲಿಲ್ಲ. ಹಾಗಾಗಿ ಈಗ ಅವರು ‘ಖೇಲ್ ಖೇಲ್ ಮೇ’ ಸಿನಿಮಾದಲ್ಲಿ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಇದೆ. ಇದು ಬಹುತಾರಾಗಣದ ಸಿನಿಮಾ ಆದ್ದರಿಂದ ಜನರಿಗೆ ನಿರೀಕ್ಷೆ ಇತ್ತು. ಮೊದಲ ದಿನ ಸಿನಿಮಾ ನೋಡಿದ ಬಹುತೇಕರು ಉತ್ತಮ ವಿಮರ್ಶೆ ನೀಡುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.
ಆಗಸ್ಟ್ 15ರ ಪ್ರಯುಕ್ತ ‘ಖೇಲ್ ಖೇಲ್ ಮೇ’ ಸಿನಿಮಾ ಬಿಡುಗಡೆ ಆಯಿತು. ಇದು ವಿಶೇಷ ದಿನ ಆದ್ದರಿಂದ ಹಲವು ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗಿವೆ. ಹಾಗಾಗಿ ‘ಖೇಲ್ ಖೇಲ್ ಮೇ’ ಸಿನಿಮಾಗೆ ಪೈಪೋಟಿ ಜೋರಾಗಿದೆ. ‘ಸ್ತ್ರೀ 2’, ‘ವೇದಾ’, ‘ತಂಗಲಾನ್’ ಮುಂತಾದ ಸಿನಿಮಾಗಳು ಸ್ಪರ್ಧೆಯೊಡ್ಡಿವೆ. ಇತ್ತ, ಕನ್ನಡದಲ್ಲಿ ‘ಕೃಷ್ಣಂ ಪ್ರಣಯ ಸಖಿ’, ‘ಭೀಮ’ ಚಿತ್ರಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ಇಷ್ಟೆಲ್ಲ ಪೈಪೋಟಿ ನಡುವೆ ‘ಖೇಲ್ ಖೇಲ್ ಮೇ’ ಸಿನಿಮಾ ಸಮಾಧಾನಕರ ರೀತಿಯಲ್ಲಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಹಾಜಿ ಅಲಿ ದರ್ಗಾ ನವೀಕರಣಕ್ಕೆ 1.21 ಕೋಟಿ ರೂಪಾಯಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್
ಸ್ವಾತಂತ್ರ್ಯೋತ್ಸವ, ವರಮಹಾಲಕ್ಷ್ಮಿ ಹಬ್ಬ, ವೀಕೆಂಡ್ ರಜೆ… ಹೀಗೆ ವಿಶೇಷ ದಿನಗಳ ಲಾಭವನ್ನು ಪಡೆಯಲು ಸಿನಿಮಾ ತಂಡಗಳು ಪ್ರಯತ್ನಿಸಿವೆ. ಪ್ರೇಕ್ಷಕರಿಂದ ‘ಖೇಲ್ ಖೇಲ್ ಮೇ’ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿರುವ ಕಾರಣ ವೀಕೆಂಡ್ನಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಮನೆ ಮಾಡಿದೆ. ಈ ಚಿತ್ರಕ್ಕೆ ಭೂಷಣ್ ಕುಮಾರ್, ಕೃಷನ್ ಕುಮಾರ್, ವಿಪುಲ್ ಡಿ. ಶಾ, ಅಶ್ವಿನ್ ವಾರ್ದೆ, ರಾಜೇಶ್ ಬಹ್ಲ್, ಶಶಿಕಾಂತ್ ಸಿನ್ಹಾ, ಅಜಯ್ ರೈ ಅವರು ಬಂಡವಾಳ ಹೂಡಿದ್ದಾರೆ. ಮುದಾಸರ್ ಅಜೀಜ್ ಅವರು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.