Brahmastra: ಮಹಾಕಾಳೇಶ್ವರ ದೇಗುಲಕ್ಕೆ ರಣಬೀರ್ ಕಪೂರ್ ಬಂದಿದ್ದಕ್ಕೆ ಬಜರಂಗ ದಳದ ಪ್ರತಿಭಟನೆ; ನಟನ ತಪ್ಪೇನು?
Ranbir Kapoor: ‘ಬ್ರಹಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತೆರೆಕಾಣುತ್ತಿದೆ. ರಣಬೀರ್ ಕಪೂರ್, ಆಲಿಯಾ ಭಟ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.
ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರು ಈ ವರ್ಷ ದೊಡ್ಡ ಸೋಲು ಅನುಭವಿಸಿದ್ದಾರೆ. ಅವರ ನಟಿಸಿದ್ದ ‘ಶಂಷೇರಾ’ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿಲ್ಲ. ಈಗ ಅವರು ‘ಬ್ರಹ್ಮಾಸ್ತ್ರ’ (Brahmastra) ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ರಿಲೀಸ್ಗೂ ಮುನ್ನವೇ ಅವರಿಗೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆಯ ಹೊಸ್ತಿನಲ್ಲಿ ಅವರು ಉಜ್ಜಯಿನಿ ಮಹಾಕಾಳೇಶ್ವರ (Mahakal Temple) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅದನ್ನು ವಿರೋಧಿಸಿ ದೇಗುಲದ ಹೊರಗೆ ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅದರ ಪರಿಣಾಮವಾಗಿ, ರಣಬೀರ್ ಕಪೂರ್ ಅವರು ತಕ್ಷಣಕ್ಕೆ ಆ ಸ್ಥಳದಿಂದ ಹೊರಡಬೇಕಾಯಿತು. ಅವರ ಜೊತೆ ನಟಿ ಆಲಿಯಾ ಭಟ್ ಹಾಗೂ ನಿರ್ದೇಶಕ ಅಯಾನ್ ಮುಖರ್ಜಿ ಕೂಡ ಇದ್ದರು.
‘ಬ್ರಹಾಸ್ತ್ರ’ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ದೇವಸ್ಥಾನದ ಒಳಗೆ ಶೂ ಧರಿಸಿ ಹೀರೋ ಎಂಟ್ರಿ ನೀಡುವಂತಹ ದೃಶ್ಯ ಟ್ರೇಲರ್ನಲ್ಲಿ ಕಾಣಿಸಿತ್ತು. ಅದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಿಸಲಾಗುತ್ತು. ಅದಕ್ಕೆ ನಿರ್ದೇಶಕ ಅಯಾನ್ ಮುಖರ್ಜಿ ಸಮಜಾಯಿಸಿ ನೀಡಿದ್ದರಾದರೂ ಅದರಿಂದ ಯಾರಿಗೂ ಸಮಾಧಾನ ಆಗಲಿಲ್ಲ.
ರಣಬೀರ್ ಕಪೂರ್ ಅವರು ಮಹಾಕಾಳೇಶ್ವರ ದೇವಸ್ಥಾನಕ್ಕೆ ಬಂದಿದ್ದನ್ನು ತಾವು ವಿರೋಧಿಸಿರುವುದು ಯಾಕೆ ಎಂದು ಬಜರಂಗ ದಳದವರು ತಿಳಿಸಿದ್ದಾರೆ. ‘ಕೆಲವೇ ದಿನಗಳ ಹಿಂದೆ ರಣಬೀರ್ ಕಪೂರ್ ಅವರು ಮಾಂಸಾಹಾರದ ಬಗ್ಗೆ ಮಾತನಾಡುತ್ತ ತಮಗೆ ಚಿಕನ್, ಮಟನ್ ಹಾಗೂ ಗೋಮಾಂಸ ಇಷ್ಟ ಎಂದು ಹೇಳಿದ್ದರು. ಹಾಗಾಗಿ ಅವರು ಮಹಾಕಾಳೇಶ್ವರ ದೇವರನ್ನು ಆರಾಧಿಸಲು ನಾವು ಬಿಡುವುದಿಲ್ಲ’ ಎಂದು ಬಜರಂಗ ದಳದ ಮುಖಂಡ ಅಂಕಿತ್ ಚೌಬೇ ಹೇಳಿದ್ದಾರೆ ಎಂದು ವರದಿ ಆಗಿದೆ.
‘ಬ್ರಹಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತೆರೆಕಾಣುತ್ತಿದೆ. ಹಿಂದಿ ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಅಮಿತಾಭ್ ಬಚ್ಚನ್, ನಾಗಾರ್ಜುನ ಮುಂತಾದ ಘಟಾನುಘಟಿ ಕಲಾವಿದರು ಕೂಡ ಇದರಲ್ಲಿ ನಟಿಸಿದ್ದಾರೆ.
ಕಳಪೆ ಗ್ರಾಫಿಕ್ಸ್ ಕಾರಣದಿಂದಾಗಿ ‘ಬ್ರಹ್ಮಾಸ್ತ್ರ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಜನರು ಟ್ರೋಲ್ ಮಾಡಿದ್ದಾರೆ. ಇಡೀ ಸಿನಿಮಾ ಕೂಡ ಅದೇ ರೀತಿ ಇದ್ದರೆ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡುವುದು ಕಷ್ಟ ಆಗುತ್ತದೆ. 3ಡಿ ಅವತರಣಿಕೆಯಲ್ಲೂ ಈ ಸಿನಿಮಾ ಮೂಡಿಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:25 pm, Wed, 7 September 22