ಆಸ್ಪತ್ರೆ ಎದುರು ಕಾಣಿಸಿಕೊಂಡ ದೀಪಿಕಾ-ರಣವೀರ್; ಪ್ರೆಗ್ನೆಂಟ್ ಎಂಬ ಸಂತಸವೋ, ಅನಾರೋಗ್ಯದ ಆತಂಕವೋ?
ದೀಪಿಕಾ ಪಡುಕೋಣೆ ಆಸ್ಪತ್ರೆಗೆ ಬಂದು ಹೋದ ಬಳಿಕ ಅವರ ಪ್ರೆಗ್ನೆನ್ಸಿ ಕುರಿತು ಸುದ್ದಿ ಹರಿದಾಡುತ್ತಿದೆ. ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಈ ಜೋಡಿ, ಬಳಿಕ ಪತಿ-ಪತ್ನಿಯಾದರು. ಇಬ್ಬರೂ ಈಗ ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಏಕಕಾಲಕ್ಕೆ ಸಂತಸ ಮತ್ತು ಆತಂಕ ಶುರುವಾಗಿದೆ. ಈ ಸ್ಟಾರ್ ದಂಪತಿ ಮುಂಬೈನ ಖಾಸಗಿ ಆಸ್ಪತ್ರೆಯ ಎದುರು ಕಾಣಿಸಿಕೊಂಡಿದ್ದೇ ಅದಕ್ಕೆ ಕಾರಣ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುಂಬೈನ ಹಿಂದುಜಾ ಆಸ್ಪತ್ರೆಗೆ ಗುಟ್ಟಾಗಿ ಬಂದು ಹೋಗಿದ್ದಾರೆ. ಆದರೂ ಕೂಡ ಅವರು ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಹೀಗೆ ಏಕಾಏಕಿ ಈ ಜೋಡಿ ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಲ್ಲಿ ಅನುಮಾನ ಮೂಡಲಾರಂಭಿಸಿದೆ. ಎರಡು ಸಾಧ್ಯತೆಗಳನ್ನು ಫ್ಯಾನ್ಸ್ ಊಹಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಆಗಿರಬಹುದು ಎಂದು ಒಂದು ವರ್ಗದ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಯಾವುದೋ ಅನಾರೋಗ್ಯದ ಕಾರಣದಿಂದ ಅವರು ಆಸ್ಪತ್ರೆಗೆ ಭೇಟಿ ನೀಡಿರಬಹುದು ಎಂದು ಇನ್ನೂ ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ದೀಪಿಕಾ ಹೀಗೆ ಆಸ್ಪತ್ರೆಗೆ ಬಂದು ಹೋದ ಬಳಿಕ ಅವರ ಪ್ರೆಗ್ನೆನ್ಸಿ ಕುರಿತು ಸುದ್ದಿ ಹರಿದಾಡುತ್ತಿದೆ. ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ‘ರಾಮ್ಲೀಲಾ’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ರೀತಿಯ ಸೂಪರ್ ಹಿಟ್ ಸಿನಿಮಾದಲ್ಲಿ ದೀಪಿಕಾ ಮತ್ತು ರಣವೀರ್ ಜೊತೆಯಾಗಿ ನಟಿಸಿದರು. ಇಬ್ಬರ ನಡುವಿನ ಒಡನಾಟ ಪ್ರೀತಿಗೆ ತಿರುಗಿತು. 2018ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮದುವೆ ಆಗಿ ಎರಡೂವರೆ ವರ್ಷ ಕಳೆದಿದೆ. ಪದೇ ಪದೇ ಜಾರಿ ಆಗುತ್ತಿರುವ ಲಾಕ್ಡೌನ್ನಿಂದಾಗಿ ಚಿತ್ರೀಕರಣದಲ್ಲೂ ಏರುಪೇರು ಆಗುತ್ತಿದೆ. ಹಾಗಾಗಿ ಮೊದಲ ಮಗು ಪಡೆಯಲು ಇದು ಸೂಕ್ತ ಸಮಯ ಎಂದು ಈ ದಂಪತಿ ನಿರ್ಧರಿಸಿರಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ‘83’ ಸಿನಿಮಾ ತಯಾರಾಗಿದೆ. ಅದರಲ್ಲಿ ಕಪಿಲ್ ದೇವ್ ಪಾತ್ರಕ್ಕೆ ರಣವೀರ್ ಸಿಂಗ್ ಬಣ್ಣ ಹಚ್ಚಿದ್ದು, ಅವರ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸಿರುವುದು ವಿಶೇಷ. ಲಾಕ್ಡೌನ್ ಕಾರಣದಿಂದಾಗಿ ಈ ಸಿನಿಮಾದ ರಿಲೀಸ್ ವಿಳಂಬ ಆಗುತ್ತಿದೆ.
ಇದನ್ನೂ ಓದಿ:
‘ಅಂದುಕೊಳ್ಳೋದು ಒಂದು, ಆಗೋದೇ ಇನ್ನೊಂದು’; ದೀಪಿಕಾ ಪಡುಕೋಣೆ ಹೊಸ ಪೋಸ್ಟ್ ನೋಡಿ
ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ಗೆ ಸಿಕ್ಕ ಮೊದಲ ಸಂಬಳ ಎಷ್ಟು? ಖರೀದಿಸಿದ್ದು ಏನು?