‘100 ಗ್ರಾಂ ತೂಕವೂ ಮುಖ್ಯ, ಮಹಿಳೆಯರಿಗೆ ಇದು ಪಾಠ’ ಎಂದು ಟ್ರೋಲ್ ಆದ ಹೇಮಾ ಮಾಲಿನಿ
ವಿನೇಶ್ ಫೋಗಟ್ ಬಗ್ಗೆ ಹೇಮಾ ಮಾಲಿನಿ ನೀಡಿದ ಹೇಳಿಕೆಯು ನೆಟ್ಟಿಗರಿಗೆ ಸರಿ ಎನಿಸಿಲ್ಲ. ‘ಕಲಾವಿದರಿಗೆ ಮತ್ತು ಮಹಿಳೆಯರಿಗೆ ಇದು ಒಂದು ಪಾಠ’ ಎಂದು ಹೇಮಾ ಮಾಲಿನಿ ಹೇಳಿದ್ದಾರೆ. ಅವರ ಹೇಳಿಕೆಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂಥ ಹೇಳಿಕೆಗಳನ್ನು ನೀಡಬೇಡಿ ಎಂದು ಅನೇಕರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬಂಗಾರ ಗೆಲ್ಲುವ ಅವಕಾಶ ಕೈತಪ್ಪಿದೆ. ಕೇವಲ 100 ಗ್ರಾಂ ದೇಹದ ತೂಕ ಹೆಚ್ಚಿರುವ ಕಾರಣದಿಂದ ಅವರಿಗೆ ಫೈನಲ್ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನಟಿ, ಸಂಸದೆ ಹೇಮಾ ಮಾಲಿನಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಸೂಕ್ತವಲ್ಲದ ರೀತಿಯಲ್ಲಿ ಹೇಳಿಕೆ ನೀಡಿದ ಕಾರಣದಿಂದ ಹೇಮಾ ಮಾಲಿನಿ ಅವರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಹೇಮಾ ಮಾಲಿನಿ ಹೇಳಿದ್ದೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..
ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅನರ್ಹಗೊಂಡ ವಿಷಯದ ಬಗ್ಗೆ ಹೇಮಾ ಮಾಲಿನಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ನಿಜಕ್ಕೂ ಅಚ್ಚರಿ ಎನಿಸುತ್ತಿದೆ. ಅಲ್ಲದೇ, ವಿಚಿತ್ರ ಕೂಡ. ಕೇವಲ 100 ಗ್ರಾಂ ದೇಹದ ತೂಕ ಹೆಚ್ಚಿರುವ ಕಾರಣದಿಂದ ಅವರು ಅನರ್ಹಗೊಂಡಿದ್ದಾರೆ. ದೇಹದ ತೂಕವನ್ನು ಸರಿಯಾಗಿ ನೋಡಿಕೊಳ್ಳುವುದು ಮುಖ್ಯ. ಕಲಾವಿದರಿಗೆ, ಮಹಿಳೆಯರಿಗೆ ಇದು ಒಂದು ಪಾಠ. ವಿನೇಶ್ ಆದಷ್ಟು ಬೇಗ 100 ಗ್ರಾಂ ತೂಕ ಇಳಿಸಿಕೊಳ್ಳಲಿ. ಆದರೆ ಅವರಿಗೆ ಇನ್ನೊಂದು ಅವಕಾಶ ಸಿಗುವುದಿಲ್ಲ’ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಇದನ್ನೂ ಓದಿ: ‘ನೀವೇ ಚಾಂಪಿಯನ್’: ವಿನೇಶ್ ಫೋಗಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಬಾಲಿವುಡ್
ಇಂಥ ಹೇಳಿಕೆಗಳನ್ನು ನೀಡುವ ಹೇಮಾ ಮಾಲಿನಿ ಅವರು ಸಂಸದೆ ಆಗಲು ಅನರ್ಹರು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ‘ಇಂಥವರಿಗೆ ಜನರು ಹೇಗೆ ಮತ ಹಾಕುತ್ತಾರೆ ಅಂತ ನನಗೆ ಅರ್ಥವೇ ಆಗುತ್ತಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ವಿನೇಶ್ ಫೋಗಟ್ ಅವರು ದೇಹದ ತೂಕ ನಿರ್ಲಕ್ಷಿಸಿ ಈ ರೀತಿ ಆಗಿದ್ದಲ್ಲ. ಸಮೋಸಾ, ಐಸ್ ಕ್ರೀಂ ತಿಂದು ಅವರು ತೂಕದ ತೂಕ ಹೆಚ್ಚಿಸಿಕೊಂಡಿಲ್ಲ. ಅವರು ಅನುಸರಿಸುವ ಕಠಿಣ ಡಯೆಟ್ ಮತ್ತು ತರಬೇತಿ ಬಗ್ಗೆ ನಿಮಗೆ ಗೊತ್ತಿಲ್ಲದೇ ಈ ರೀತಿ ಹೇಳಿಕೆ ನೀಡಬೇಡಿ’ ಎಂದು ಇನ್ನೊಬ್ಬರು ಹೇಮಾ ಮಾಲಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
VIDEO | “It is very surprising, and it feels strange that she was disqualified for being 100 gm overweight. It is important to keep the weight in check. It is a lesson for all of us. I wish she should lose that 100 gm quickly but she would not get an opportunity,” says BJP leader… pic.twitter.com/9vFyl91Dll
— Press Trust of India (@PTI_News) August 7, 2024
ವಿನೇಶ್ ಫೋಗಟ್ ಅವರು ಕುಸ್ತಿಯಲ್ಲಿ ಭಾರತಕ್ಕೆ ಬಂಗಾರದ ಪದಕ ತರುತ್ತಾರೆ ಎಂದು ಎಲ್ಲರಿಗೂ ಭರವಸೆ ಇತ್ತು. ಆದರೆ ದೇಹದ ತೂಕದ ಕಾರಣದಿಂದ ಆ ಕನಸು ನುಚ್ಚು ನೂರಾಗಿದೆ. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ವಿನೇಶ್ ಫೋಗಟ್ ಅವರಿಗೆ ಧೈರ್ಯ ತುಂಬಿದ್ದಾರೆ. ಆಲಿಯಾ ಭಟ್, ಫರ್ಹಾನ್ ಅಖ್ತರ್, ಕರೀನಾ ಕಪೂರ್, ತಾಪ್ಸಿ ಪನ್ನು, ರಣವೀರ್ ಸಿಂಗ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ‘ವಿನೇಶ್ ಅವರೇ ನಮ್ಮ ಪಾಲಿನ ಚಾಂಪಿಯನ್’ ಎಂದು ಹೇಳಿದ್ದಾರೆ. ಇಂಥದ್ದರ ನಡುವೆ ಹೇಮಾ ಮಾಲಿನಿಯ ಹೇಳಿಕೆ ಟ್ರೋಲ್ಗೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.