ಜಾತಿ ವಿವಾದ ಹೊಂದಿರುವ ‘ವೇದಾ’ ಸಿನಿಮಾದ 9 ನಿಮಿಷ ಅವಧಿಯ ದೃಶ್ಯಗಳು ಡಿಲೀಟ್
ಬಹಳ ದಿನಗಳ ಮೊದಲೇ ಸೆನ್ಸಾರ್ ಮಂಡಳಿಗೆ ‘ವೇದಾ’ ಸಿನಿಮಾವನ್ನು ಕಳಿಸಲಾಗಿತ್ತಾದರೂ ಪ್ರಮಾಣಪತ್ರ ಸಿಗುವುದು ತಡವಾಯಿತು. ಕಡೆಗೂ ‘ಯು/ಎ’ ಸರ್ಟಿಫಿಕೇಟ್ ನೀಡಲಾಗಿದೆ. ಆದರೆ ಹಲವು ದೃಶ್ಯಗಳನ್ನು ಡಿಲೀಟ್ ಮಾಡಲು ಸೂಚಿಸಲಾಗಿದೆ. ಜಾತಿ ತಾರತಮ್ಯದ ಕುರಿತಾದ ಕಥೆ ಈ ಸಿನಿಮಾದಲ್ಲಿ ಇದೆ. ಆ ಕಾರಣದಿಂದಲೇ ಸೆನ್ಸಾರ್ ಪ್ರಕ್ರಿಯೆ ವಿಳಂಬ ಆಗಿದೆ.
ಆಗಸ್ಟ್ 15ರಂದು ‘ವೇದಾ’ ಸಿನಿಮಾ ರಿಲೀಸ್ ಆಗಲಿದ್ದು, ಕಥಾವಸ್ತು ಕಾರಣದಿಂದ ಈ ಚಿತ್ರ ಈಗಲೇ ಸದ್ದು ಮಾಡುತ್ತಿದೆ. ಜಾತಿ ಪದ್ಧತಿ ಮತ್ತು ಸಾಮಾಜಿಕ ಅಸಮಾನತೆ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಇತ್ತೀಚೆಗೆ ‘ವೇದಾ’ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಲಾಗಿದೆ. ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರು ಹಲವು ಕಡೆಗಳಲ್ಲಿ ಕತ್ತರಿ ಹಾಕಿದ್ದಾರೆ. ಒಟ್ಟು 9.14 ನಿಮಿಷ ಅವಧಿಯ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ ಮತ್ತು ಶಾರ್ವರಿ ವಾಘ್ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಸಹಜವಾಗಿಯೇ ವಿವಾದ ಸೃಷ್ಟಿ ಆಗುತ್ತದೆ. ಒಮ್ಮೆ ರಿಲೀಸ್ ಆದ ನಂತರ ವಿವಾದ ಜಾಸ್ತಿಯಾದರೆ ಸೆನ್ಸಾರ್ ಮಂಡಳಿ ಪೇಚಿಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ಅಂಥ ಸಿನಿಮಾಗಳನ್ನು ಸೆನ್ಸಾರ್ ಹಂತದಲ್ಲಿಯೇ ಹಲವು ಬಾರಿ ಪರಿಶೀಲಿಸಿ, ಕೆಲವು ಕಡೆಗಳಲ್ಲಿ ಕತ್ತರಿ ಹಾಕಲಾಗುತ್ತದೆ. ‘ವೇದಾ’ ಚಿತ್ರಕ್ಕೂ ಹಾಗೆಯೇ ಮಾಡಲಾಗಿದೆ.
‘ವೇದಾ’ ಸಿನಿಮಾವನ್ನು ಬಹಳ ಹಿಂದೆಯೇ ಸೆನ್ಸಾರ್ ಮಂಡಳಿಗೆ ಕಳಿಸಲಾಗಿತ್ತು. ಆದರೆ ಇದರಲ್ಲಿನ ದೃಶ್ಯಗಳನ್ನು ನೋಡಿದ ಸೆನ್ಸಾರ್ ಮಂಡಳಿ ಸದಸ್ಯರು ಪ್ರಮಾಣಪತ್ರ ನೀಡುವಲ್ಲಿ ಹಿಂದೇಟು ಹಾಕಿದ್ದರು. ಹಾಗಾಗಿ ಈ ಚಿತ್ರವನ್ನು ಮೇಲ್ವಿಚಾರಣಾ ಸಮಿತಿಗೆ ಕಳಿಸಲಾಯಿತು. ಅಲ್ಲಿ, ಎಲ್ಲ ದೃಶ್ಯಗಳನ್ನು ಮತ್ತೊಮ್ಮೆ ಪರಿಶೀಲಿಸಿ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ವಿವಾದಕ್ಕೆ ಕಾರಣ ಆಗಬಹುದಾದ ಅನೇಕ ದೃಶ್ಯಗಳನ್ನು ತೆಗೆದು ಹಾಕುವಂತೆ ನಿರ್ಮಾಪಕರಿಗೆ ಸೂಚಿಸಲಾಗಿದೆ.
ಜಾನ್ ಅಬ್ರಹಾಂ ಅವರು ಈ ಸಿನಿಮಾದಲ್ಲಿ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಈ ಸಿನಿಮಾ ಕೂಡ ಅವರ ಹಿಂದಿನ ಸಿನಿಮಾಗಳ ರೀತಿಯೇ ಇರಲಿದೆಯಾ ಎಂಬ ಅನುಮಾನ ಕೆಲವರಿಗೆ ಇದೆ. ಇತ್ತೀಚೆಗೆ ಈ ಕುರಿತು ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರು ವ್ಯಂಗ್ಯ ಮಾಡಿದ್ದರು. ಆಗ ಜಾನ್ ಅಬ್ರಾಹಂ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಲವ್ ಜಿಹಾದ್ ಆರೋಪ ಹೊತ್ತ ‘ಅನ್ನಪೂರ್ಣಿ’ ಸಿನಿಮಾ ಮತ್ತೆ ಒಟಿಟಿಯಲ್ಲಿ ಲಭ್ಯ; ಆದರೆ ಒಂದು ಟ್ವಿಸ್ಟ್
‘ವೇದಾ ಸಿನಿಮಾ ಡಿಫರೆಂಟ್ ಆಗಿದೆ ಅಂತ ನಾನು ನೇರವಾಗಿ ಹೇಳುತ್ತೇನೆ. ನನ್ನ ಪ್ರಕಾರ, ನಾನು ಈ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿದ್ದೇನೆ. ನೀವಿನ್ನೂ ಈ ಸಿನಿಮಾವನ್ನು ನೋಡಿಲ್ಲ. ಬರೀ ಟ್ರೇಲರ್ ನೋಡಿದ್ದೀರಷ್ಟೇ. ನೀವು ಮೊದಲು ನಮ್ಮ ಸಿನಿಮಾವನ್ನು ನೋಡಿ. ಆಮೇಲೆ ಜಡ್ಜ್ ಮಾಡಿ. ಬಳಿಕ ನೀವು ಹೇಳಿದ್ದನ್ನು ನಾನು ಒಪ್ಪಿಕೊಳ್ತೇನೆ. ಒಂದುವೇಳೆ ನಿಮ್ಮ ಅಭಿಪ್ರಾಯ ತಪ್ಪಾಗಿದ್ದರೆ ನಿಮ್ಮನ್ನು ನಾನು ಸುಮ್ಮನೆ ಬಿಡಲ್ಲ’ ಎಂದು ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.