
ಪ್ಯಾನ್ ಇಂಡಿಯಾ ನಟ ಜೂನಿಯರ್ ಎನ್ಟಿಆರ್ (Jr NTR) ಅವರಿಗೆ ಇಂದು (ಮೇ 20) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಈ ದಿನವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ವರ್ಷದ ಅವರ ಜನ್ಮದಿನವನ್ನು ಇನ್ನಷ್ಟು ಸ್ಪೆಷಲ್ ಆಗಿಸಲು ‘ವಾರ್ 2’ ಸಿನಿಮಾದ ಟೀಸರ್ (War 2 Teaser) ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಲು ಅಭಿಮಾನಿಗಳು ಸಖತ್ ಉತ್ಸುಕರಾಗಿದ್ದರು. ಆದರೆ ಇಂದು ‘ವಾರ್ 2’ ನೋಡಿದ ಜೂನಿಯರ್ ಎನ್ಟಿಆರ್ ಅಭಿಮಾನಿಗಳಿಗೆ ಬೇಸರ ಆಗಿದೆ. ಯಾಕೆಂದರೆ, ಈ ಟೀಸರ್ನಲ್ಲಿ ಜೂನಿಯರ್ ಎನ್ಟಿಆರ್ ಅವರಿಗಿಂತಲೂ ಹೃತಿಕ್ ರೋಷನ್ (Hrithik Roshan) ಪಾತ್ರವೇ ಹೆಚ್ಚು ಹೈಲೈಟ್ ಆಗಿದೆ.
‘ವಾರ್ 2’ ಸಿನಿಮಾದ ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಕೆಲವರು ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಮುಖ್ಯವಾಗಿ ಜೂನಿಯರ್ ಎನ್ಟಿಆರ್ ಅವರ ಲುಕ್ ನೋಡಿ ಫ್ಯಾನ್ಸ್ಗೆ ನಿರಾಸೆ ಆಗಿದೆ. ಅಲ್ಲದೇ ಇಡೀ ಟೀಸರ್ನಲ್ಲಿ ಹೊಸತನದಿಂದ ಕೂಡಿದ ಯಾವುದೇ ದೃಶ್ಯಗಳೂ ಕಾಣಿಸಿಲ್ಲ. ಹಾಗಾಗಿ ಟ್ರೋಲ್ ಮಾಡಲಾಗುತ್ತಿದೆ.
ಜೂನಿಯರ್ ಎನ್ಟಿಆರ್ ಅವರು ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಎನ್ಟಿಆರ್ ಬರ್ತ್ಡೇ ಪ್ರಯುಕ್ತ ಆ ಚಿತ್ರತಂಡದಿಂದ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಯಾಕೆಂದರೆ, ‘ವಾರ್ 2’ ಸಿನಿಮಾದ ಟೀಸರ್ಗೆ ಹೆಚ್ಚು ಪ್ರಚಾರ ಸಿಗಲಿ ಎಂಬ ಕಾರಣಕ್ಕೆ ಪ್ರಶಾಂತ್ ನೀಲ್ ಅವರ ಚಿತ್ರತಂಡ ಇಂದು ಸೈಲೆಂಟ್ ಆಗಿದೆ. ಇಷ್ಟೆಲ್ಲ ದಾರಿ ಮಾಡಿಕೊಟ್ಟರೂ ಕೂಡ ಅಭಿಮಾನಿಗಳನ್ನು ಇಂಪ್ರೆಸ್ ಮಾಡಲು ‘ವಾರ್ 2’ ಟೀಸರ್ ಸೋತಿದೆ.
ಆಗಸ್ಟ್ 14ರಂದು ‘ವಾರ್ 2’ ಸಿನಿಮಾ ಬಿಡುಗಡೆ ಆಗಲಿದೆ. ಸದ್ಯಕ್ಕೆ ಟೀಸರ್ ನೋಡಿದ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ನಿರ್ದೇಶಕರು, ನಿರ್ಮಾಪಕರು ಒಂದಷ್ಟು ಬದಲಾವಣೆ ಮಾಡಿಕೊಂಡರೆ ಉತ್ತಮ. ಇಲ್ಲದಿದ್ದರೆ ಬಾಕ್ಸ್ ಆಫೀಸ್ ಮೇಲೆ ಪರಿಣಾಮ ಬೀರಬಹುದು. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ‘ವಾರ್ 2’ ಸಿನಿಮಾ ತೆರೆಕಾಣಲಿದೆ.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್ ಕನ್ನಡ ಪ್ರೇಮಕ್ಕೆ ಈ ವ್ಯಕ್ತಿಯೇ ಕಾರಣ
‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಮೂಲಕ ‘ವಾರ್ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಅವರು ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ಕೌತುಕ ಮೂಡಿದೆ. ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ ಅವರು ನಾಯಕಿಯಾಗಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:35 pm, Tue, 20 May 25