‘ಬಾಲಿವುಡ್‌ನಲ್ಲಿ ಪಾಕಿಸ್ತಾನ ಪ್ರೇಮ ಹೆಚ್ಚಿದೆ’: ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್

ನಟ ರಣವೀರ್ ಸಿಂಗ್ ಅವರನ್ನು ಕೆಲವರು ಟಾರ್ಗೆಟ್ ಮಾಡಿದ್ದಾರೆ. ಅಂಥವರ ಬಗ್ಗೆ ಕಂಗನಾ ರಣಾವತ್ ಮಾತನಾಡಿದ್ದಾರೆ. ‘ಧುರಂಧರ್’ ಸಿನಿಮಾ ಗೆದ್ದ ಬೆನ್ನಲ್ಲೇ ‘ಡಾನ್ 3’ ವಿವಾದ ಇಟ್ಟುಕೊಂಡು ರಣವೀರ್ ಸಿಂಗ್ ಅವರನ್ನು ಬ್ಯಾನ್ ಮಾಡಲು ಪ್ರಯತ್ನಿಸಿದ್ದು ಯಾಕೆ ಎಂಬುದಕ್ಕೆ ಕಂಗನಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಬಾಲಿವುಡ್‌ನಲ್ಲಿ ಪಾಕಿಸ್ತಾನ ಪ್ರೇಮ ಹೆಚ್ಚಿದೆ’: ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್
Kangana Ranaut

Updated on: Jun 12, 2026 | 6:17 PM

ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ತಮ್ಮ ನೇರ ನುಡಿಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ‘ಡಾನ್ 3’ ವಿವಾದಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ (Ranveer Singh) ಅವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಂಗನಾ ಆಕ್ರೋಶ ಹೊರಹಾಕಿದ್ದಾರೆ. ‘ಚಿತ್ರರಂಗದ ಕೆಲವರಿಗೆ ಪಾಕಿಸ್ತಾನದ ಮೇಲೆ ಅತಿಯಾದ ಪ್ರೇಮವಿದೆ, ಅದಕ್ಕಾಗಿಯೇ ದೇಶಪ್ರೇಮದ ಸಿನಿಮಾ ಮಾಡಿದವರನ್ನು ಇಲ್ಲಿ ಟಾರ್ಗೆಟ್ ಮಾಡಲಾಗುತ್ತದೆ’ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ತಿಂಗಳು ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಹೊರಬಂದಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ, FWICE (ಚಲನಚಿತ್ರ ಕಾರ್ಮಿಕರ ಒಕ್ಕೂಟ) ರಣವೀರ್ ವಿರುದ್ಧ ಅಸಹಕಾರದ ನಿರ್ದೇಶನವನ್ನು ಹೊರಡಿಸಿತ್ತು. ಈ ವಿಚಾರವಾಗಿ ರಣವೀರ್ ಪರವಾಗಿ ನಿಂತಿದ್ದ ಕಂಗನಾ, ಈಗ ಅದರ ಹಿಂದಿನ ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ‘ನಮ್ಮ ಚಿತ್ರರಂಗದಲ್ಲಿ ಒಂದು ವರ್ಗಕ್ಕೆ ಪಾಕಿಸ್ತಾನದ ಮೇಲೆ ವಿಶೇಷ ಪ್ರೇಮವಿದೆ. ದಶಕಗಳಿಂದ ಬಾಲಿವುಡ್ ಸಿನಿಮಾಗಳು ನಮಗೆ ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದುವುದನ್ನೇ ಕಲಿಸುತ್ತಾ ಬಂದಿವೆ. ಆದರೆ ಯಾವಾಗ ರಣವೀರ್ ಸಿಂಗ್ ನಟನೆಯ ಧುರಂಧರ್ ರೀತಿಯ ಸಿನಿಮಾಗಳು ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿಗೆ ತೋರಿಸುತ್ತವೆಯೋ, ಆಗ ಇಲ್ಲಿನ ಕೆಲವರಿಗೆ ನೋವಾಗಲು ಶುರುವಾಗುತ್ತದೆ’ ಎಂದು ಕಿಡಿಕಾರಿದ್ದಾರೆ.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 3000 ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ನಿರ್ಮಿಸಿತ್ತು. ಈ ಚಿತ್ರದಲ್ಲಿ ರಣವೀರ್ ಅವರು ಭಾರತೀಯ ಗೂಡಾಚಾರಿಯಾಗಿ ಪಾಕಿಸ್ತಾನದ ಭಯೋತ್ಪಾದಕ ಜಾಲವನ್ನು ಧ್ವಂಸ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಯಶಸ್ಸಿನ ನಂತರವೇ ರಣವೀರ್ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಎಂಬುದು ಕಂಗನಾ ಅವರ ವಾದ.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕವೂ ನನಗೆ ಕೆಲಸ ಸಿಗಲಿಲ್ಲ: ಸತ್ಯ ತೆರೆದಿಟ್ಟ ಕಂಗನಾ ರಣಾವತ್

‘ತಾವು ಇಷ್ಟು ವರ್ಷ ಮಾಡಿಕೊಂಡು ಬಂದ ಪಾಕಿಸ್ತಾನ ಪರವಾದ ಪ್ರಚಾರಕ್ಕೆ ಬೆಲೆ ಇಲ್ಲದಂತಾಯಿತೇ ಎಂಬ ಭಯ ಅವರಲ್ಲಿ ಮೂಡಿದೆ. ಹಾಗಾಗಿಯೇ ಧುರಂಧರ್ ಸಕ್ಸಸ್ ಬೆನ್ನಲ್ಲೇ ಇಂತಹ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದು ಕಂಗನಾ ಬಾಲಿವುಡ್‌ನ ಒಳಸಂಚಿನ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಬಾಲಿವುಡ್ ಮಂದಿ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us