Kiara Advani: ಡಿ.2ಕ್ಕೆ ಗುಟ್ಟು ರಟ್ಟು ಮಾಡ್ತಾರೆ ಕಿಯಾರಾ ಅಡ್ವಾಣಿ; ಇದು ಮದುವೆ ಸಮಾಚಾರ ಅಂತಾರೆ ಫ್ಯಾನ್ಸ್
Kiara Advani Sidharth Malhotra Marriage: ‘ಈ ರಹಸ್ಯವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಡಿಸೆಂಬರ್ 2ಕ್ಕೆ ಕಾದಿರಿ’ ಎಂದು ಕಿಯಾರಾ ಅಡ್ವಾನಿ ಪೋಸ್ಟ್ ಮಾಡಿದ್ದಾರೆ. ಇದು ಮದುವೆಯ ವಿಚಾರ ಎಂದು ಫ್ಯಾನ್ಸ್ ಊಹಿಸಿದ್ದಾರೆ.
ಈಗ ಸೆಲೆಬ್ರಿಟಿಗಳ ಮದುವೆ ಸೀಸನ್ ನಡೆಯುತ್ತಿದೆ ಎನ್ನಬಹುದು. ಹಲವು ನಟ-ನಟಿಯರು ಹಸೆಮಣೆ ಏರುತ್ತಿದ್ದಾರೆ. ಅದೇ ರೀತಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಅನುಮಾನ ಮೂಡಿದೆ. ಈ ಅನುಮಾನಕ್ಕೆ ಕಾರಣ ಆಗಿರುವುದು ಅವರ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್. ನಟ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಈಗ ಈ ಸಂಬಂಧಕ್ಕೆ ಅವರು ಮದುವೆಯ ಮುದ್ರೆ ಒತ್ತಲು ತೀರ್ಮಾನಿಸಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಕಿಯಾರಾ ಕಡೆಯಿಂದಲೇ ಮದುವೆ (Kiara Advani Marriage) ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ನ.27ರಂದು ಕಿಯಾರಾ ಅಡ್ವಾಣಿ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಚಿಕ್ಕ ವಿಡಿಯೋ ಹಂಚಿಕೊಂಡರು. ಬಿಳಿ ಪರದೆಗಳ ಹಿಂದೆ ನಿಂತು ಅವರು ಫೋಟೋಗೆ ಪೋಸ್ ನೀಡಿದ್ದಾರೆ. ಇದು ಯಾವುದೋ ವಿಶೇಷವಾದ ಫೋಟೋಶೂಟ್ ಎಂದು ಅಭಿಮಾನಿಗಳು ಊಹಿಸಿದ್ದಾರೆ. ‘ಈ ರಹಸ್ಯವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಶೀಘ್ರದಲ್ಲೇ ಬರಲಿದೆ. ಡಿಸೆಂಬರ್ 2ಕ್ಕೆ ಕಾದಿರಿ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.
ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ವೈರಲ್ ಆಗಿದೆ. 6 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಕಮೆಂಟ್ಗಳು ಬಂದಿವೆ. ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಮದುವೆಯ ಕುರಿತಾಗಿಯೇ ಈ ಪೋಸ್ಟ್ ಹಾಕಲಾಗಿದೆ ಎಂದು ಬಹುತೇಕ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
‘ನಿಮ್ಮ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರ ಸೀಕ್ರೆಟ್ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಬೇರೆ ಯಾವುದಾದರೂ ಸೀಕ್ರೆಟ್ ಇದ್ದರೆ ಹೇಳಿ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಕಿಯಾರಾ ಅವರು ಯಾವುದೋ ಬ್ರ್ಯಾಂಡ್ ಜೊತೆ ಕೈ ಜೋಡಿಸಿರಬಹುದು ಅಥವಾ ತಮ್ಮದೇ ಹೊಸ ಬ್ರ್ಯಾಂಡ್ ಆರಂಭಿಸಬಹುದು ಎಂದು ಕೂಡ ಅನೇಕರು ಊಹಿಸಿದ್ದಾರೆ. ಎಲ್ಲದಕ್ಕೂ ಡಿಸೆಂಬರ್ 2ರಂದು ಉತ್ತರ ಸಿಗಲಿದೆ.
View this post on Instagram
2014ರಿಂದಲೂ ಕಿಯಾರಾ ಅಡ್ವಾಣಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ’, ‘ಕಬೀರ್ ಸಿಂಗ್’, ‘ಶೇರ್ಷಾ’, ‘ಭೂಲ್ ಭುಲಯ್ಯ 2’ ಮುಂತಾದ ಸಿನಿಮಾಗಳಿಂದ ಅವರು ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರು ಫೇಮಸ್ ಆಗಿದ್ದಾರೆ. ತೆಲುಗಿನ ‘ಭರತ್ ಅನೇ ನೇನು’, ‘ವಿನಯ ವಿದೇಯ ರಾಮ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.