ಕಿಚ್ಚ ಸುದೀಪ್ (Kichcha Sudeep) ಅವರು ನಿರ್ದೇಶಕನಾಗಬೇಕು ಎಂದು ಕನಸು ಕಂಡವರು. ಆದರೆ, ಅವರು ಆಗಿದ್ದು ಹೀರೋ. ನಂತರ ಅವರು ಕನಸನ್ನು ನನಸು ಮಾಡಿಕೊಂಡರು. ‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ಸುದೀಪ್ (Sudeep) ನಿರ್ದೇಶಕರಾಗಿ ಬಡ್ತಿ ಪಡೆದರು. ನಂತರ ಹಲವು ಚಿತ್ರಗಳಿಗೆ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಿಚ್ಚ ನಿರ್ದೇಶನಕ್ಕೆ ಮರಳಬೇಕು ಎಂಬುದು ಅನೇಕರ ಕೋರಿಕೆ. ಈ ಬಗ್ಗೆ ಈಗ ಬಿಸಿಬಿಸಿ ಅಪ್ಡೇಟ್ ಸಿಕ್ಕಿದೆ. ಸಲ್ಮಾನ್ ಖಾನ್ ಚಿತ್ರಕ್ಕೆ ಸುದೀಪ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ವಿಚಾರವನ್ನು ಸ್ವತಃ ಸುದೀಪ್ ಖಚಿತಪಡಿಸಿದ್ದಾರೆ.
2019ರಲ್ಲಿ ಸಲ್ಮಾನ್ ಖಾನ್ ನಟನೆಯ ‘ದಬಾಂಗ್ 3’ ಚಿತ್ರ ತೆರೆಗೆ ಬಂತು. ಈ ಸಿನಿಮಾದಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಹಾಗೂ ಸುದೀಪ್ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಸುದೀಪ್ಗೆ ಸಲ್ಮಾನ್ ಖಾನ್ ಕಾರ್ ಗಿಫ್ಟ್ ಮಾಡಿದ್ದರು. ಕಿಚ್ಚನ ಮೇಲೆ ಸಲ್ಲುಗೆ ಎಷ್ಟು ಪ್ರೀತಿ, ಗೌರವ ಇದೆ ಎಂಬುದಕ್ಕೆ ಇದೊಂದು ಸಣ್ಣ ಸಾಕ್ಷಿ ಅಷ್ಟೇ. ಸಲ್ಮಾನ್ ಹಾಗೂ ಕಿಚ್ಚನ ನಡುವೆ ಹಲವು ಸಾಮ್ಯತೆಗಳು ಇರುವುದಕ್ಕೆ ಇಬ್ಬರೂ ಸಾಕಷ್ಟು ಕ್ಲೋಸ್ ಆಗಿದ್ದಾರೆ. ಕಥೆ ಓಕೆ ಆದರೆ ಸುದೀಪ್ಗೆ ಸಲ್ಮಾನ್ ಖಾನ್ ಕಾಲ್ಶೀಟ್ ಸಿಗಲಿದೆ.
ಸುದೀಪ್ ಅವರು ‘ವಿಕ್ರಾಂತ್ ರೋಣ’ ಗೆಲುವಿನ ಖುಷಿಯಲ್ಲಿದ್ದಾರೆ. ಈ ಚಿತ್ರದ ಬಗ್ಗೆ ಸುದೀಪ್ ಪಿಂಕ್ವಿಲ್ಲಾ ವೆಬ್ಸೈಟ್ ಜತೆ ಮಾತನಾಡುವಾಗ ಹೊಸ ವಿಚಾರ ರಿವೀಲ್ ಮಾಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರವನ್ನು ಹಿಂದಿಯಲ್ಲಿ ಸಲ್ಮಾನ್ ಪ್ರೆಸೆಂಟ್ ಮಾಡಿದ್ದಾರೆ. ಈ ಕಾರಣಕ್ಕೆ ಸಲ್ಲು ಜತೆ ಸಿನಿಮಾ ಯಾವಾಗ ಎಂಬ ಪ್ರಶ್ನೆ ಸುದೀಪ್ಗೆ ಎದುರಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.
‘ಕಳೆದ ವರ್ಷವೇ ಇದಕ್ಕೆ ಪ್ರಕ್ರಿಯೆ ಆರಂಭ ಆಗಿದೆ. ನೀವು ಇನ್ನೂ ಸ್ವಲ್ಪ ಸಮಯ ಇದಕ್ಕಾಗಿ ಕಾಯಬೇಕಾಗುತ್ತದೆ. ನಾನು ಅವರಿಗೆ ಕಥೆ ಹೇಳಬೇಕು. ಅವರು ಅದಕ್ಕೆ ಓಕೆ ಹೇಳಬೇಕು. ನಂತರ ಅವರು ಸೆಟ್ಗೆ ಬರಬೇಕು. ನಾವು ಈ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇವೆ. ಅವರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದಾರೆ. ಸರಿಯಾದ ಸಮಯಕ್ಕೆ ಎಲ್ಲವೂ ಆಗಲಿದೆ’ ಎಂದು ಸುದೀಪ್ ಅಸಲಿ ವಿಚಾರ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್; ಇಲ್ಲಿವೆ ಫೋಟೋಗಳು
ಸಲ್ಮಾನ್ ಖಾನ್ ಅವರು ಎಲ್ಲಾ ಚಿತ್ರಗಳನ್ನು ಹಂಚಿಕೆ ಮಾಡಲು ಒಪ್ಪುವುದಿಲ್ಲ. ‘ವಿಕ್ರಾಂತ್ ರೋಣ’ ಚಿತ್ರವನ್ನು ಅವರು ಹಿಂದಿಯಲ್ಲಿ ಹಂಚಿಕೆ ಮಾಡಿದ್ದು ನಿಜಕ್ಕೂ ಖುಷಿಯ ವಿಚಾರ. ಈ ವಿಚಾರಕ್ಕೆ ಸಲ್ಲುಗೆ ಧನ್ಯವಾದ ಅರ್ಪಿಸಿದ್ದಾರೆ ಸುದೀಪ್.
Published On - 5:56 pm, Fri, 29 July 22