ಪ್ರತಿ ತಿಂಗಳ ಫಿಟ್ನೆಸ್ ಖರ್ಚಿಗೆ 4 ಲಕ್ಷ ರೂ. ಇರಲಿಲ್ಲ: ಪರಿಣೀತಾ ಚೋಪ್ರಾ ಕಷ್ಟದ ದಿನಗಳು
ನಟಿ ಪರಿಣೀತಿ ಚೋಪ್ರಾ ಅವರು 2011ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವೃತ್ತಿಜೀವನದ ಪ್ರಾರಂಭದಲ್ಲಿ ಅವರ ಬಳಿಕ ಹಣ ಇರಲಿಲ್ಲ. ಆ ದಿನಗಳ ಬಗ್ಗೆ ಅವರು ಈಗ ಮಾತನಾಡಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ಬಾಲಿವುಡ್ ಮಂದಿಯ ರೀತಿ ಜೀವನ ನಡೆಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದನ್ನೆಲ್ಲ ಅವರು ಈಗ ಮೆಲುಕು ಹಾಕಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಪರಿಣೀತಿ ಚೋಪ್ರಾ (Parineeti Choora) ಅವರು ಜನಪ್ರಿಯತೆ ಪಡೆದಿದ್ದಾರೆ. ಅವರ ಸಂಬಂಧಿ ಪ್ರಿಯಾಂಕಾ ಚೋಪ್ರಾ ರೀತಿ ಮಿಂಚಲು ಸಾಧ್ಯವಾಗದಿದ್ದರೂ ಕೂಡ ಪರಿಣೀತಿ ಅವರು ಒಂದು ಹಂತದ ಗೆಲುವು ಕಂಡಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರಿಗೆ ಹಣದ ಕೊರತೆ ಇತ್ತು. ಪ್ರತಿ ತಿಂಗಳು ಫಿಟ್ನೆಸ್ (Fitness) ಸಲುವಾಗಿ 4 ಲಕ್ಷ ರೂಪಾಯಿ ಖರ್ಚು ಮಾಡುವ ಶಕ್ತಿ ಅವರಿಗೆ ಇರಲಿಲ್ಲ. ಆ ದಿನಗಳ ಬಗ್ಗೆ ಅವರು ಈಗ ಮಾತನಾಡಿದ್ದಾರೆ. ‘ಅಮರ್ ಸಿಂಗ್ ಚಮ್ಕೀಲಾ’ (Amar Singh Chamkila) ಸಿನಿಮಾ ಪ್ರಯುಕ್ತ ಮಾಧ್ಯಮವೊಂದಕ್ಕೆ ಪರಿಣೀತಿ ಚೋಪ್ರಾ ಸಂದರ್ಶನ ನೀಡಿದ್ದು, ತಮ್ಮ ಕಷ್ಟದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.
ಪರಿಣೀತಿ ಚೋಪ್ರಾ ಅವರು ‘ಅಮರ್ ಸಿಂಗ್ ಚಮ್ಕೀಲಾ’ ಸಿನಿಮಾದಲ್ಲಿ ದಿಲ್ಜಿತ್ ದೋಸಾಂಜ್ ಜೊತೆ ಅಭಿನಯಿಸಿದ್ದಾರೆ. ನೆಟ್ಫ್ಲಿಕ್ಸ್ ಮೂಲಕ ಈ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಪರಿಣೀತಿ ಚೋಪ್ರಾ ಅವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಈಗ ಪರಿಣೀತಿ ಅವರಿಗೆ ಶ್ರೀಮಂತಿಕೆ ಇದೆ. ಆದರೆ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರಿಗೆ ಸರಿಯಾದ ಸೌಕರ್ಯಗಳು ಇರಲಿಲ್ಲ.
‘ನಾನು ತುಂಬ ಶ್ರೀಮಂತ ಕುಟುಂಬದಿಂದ ಬಂದವಳಲ್ಲ. ನಾನು ಮಧ್ಯಮವರ್ಗದ ಹುಡುಗಿ. ಬಾಲಿವುಡ್ ಹೇಗೆ ಎಂಬುದು ನನಗೆ ಅರ್ಥವಾಗಿರಲಿಲ್ಲ. ಮುಂಬೈ ಜನ ಹೇಗೆ ಎಂಬುದು ಕೂಡ ಗೊತ್ತಿರಲಿಲ್ಲ. ಜಿಮ್ ಟ್ರೇನರ್ ಹಾಗೂ ಡಯೆಟಿಷಿಯನ್ಗೆ ಪ್ರತಿ ತಿಂಗಳು 4 ಲಕ್ಷ ರೂಪಾಯಿ ನೀಡಲು ನನ್ನ ಬಳಿ ಹಣ ಇರಲಿಲ್ಲ. ಆಗಿನ್ನೂ ನಾನು 3ನೇ ಸಿನಿಮಾ ಮಾಡುತ್ತಿದ್ದೆ. ನನ್ನ ಮೊದಲ ಸಿನಿಮಾಗೆ 5 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿತ್ತು. ಅದು ಒಂದು ತಿಂಗಳಿನ ಎಲ್ಲ ಖರ್ಷಿಗೆ ಸಾಕಾಗುತ್ತಿರಲಿಲ್ಲ’ ಎಂದು ಪರಿಣೀತಿ ಚೋಪ್ರಾ ಹೇಳಿದ್ದಾರೆ.
ಇದನ್ನೂ ಓದಿ: ಪ್ರೆಗ್ನೆಂಟ್ ಎಂದು ಗಾಸಿಪ್ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಪರಿಣೀತಿ ಚೋಪ್ರಾ
ಆ ದಿನಗಳಲ್ಲಿ ತಮ್ಮ ಸ್ನೇಹಿತರ ಬಳಿಕ ಹೋಗಿ ಪರಿಣೀತಿ ಚೋಪ್ರಾ ಅವರು ಕಷ್ಟ ಹೇಳಿಕೊಂಡಿದ್ದರು. ಆದರೆ ಅವರಿಗೆ ಸಿಕ್ಕಿದ್ದು ಅವಮಾನ ಮಾತ್ರ. ‘ಈ ಖರ್ಚು ನಿಭಾಯಿಸಲು ನಿನಗೆ ಸಾಧ್ಯವಿಲ್ಲ ಎಂದಾದರೆ ನೀನು ಈ ವೃತ್ತಿಯಲ್ಲಿ ಇರಬಾರದು ಎಂದು ಸ್ನೇಹಿತರು ಖಡಕ್ ಆಗಿ ಹೇಳಿದ್ದರು. ಅದರಿಂದ ನನಗೆ ತುಂಬ ನೋವಾಗಿತ್ತು’ ಎಂದಿದ್ದಾರೆ ಪರಿಣೀತಿ ಚೋಪ್ರಾ.
ದಿನದಿಂದ ದಿನಕ್ಕೆ ಪರಿಣೀತಿ ಚೋಪ್ರಾ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ನಂತರ ಅವರು ಫಿಟ್ನೆಸ್ ಕಾಪಾಡಿಕೊಂಡರು. ಸಿನಿಮಾಗಳಿಂದ ಉತ್ತಮ ಸಂಭಾವನೆ ಪಡೆದುಕೊಂಡರು. 2023ರ ಸೆಪ್ಟೆಂಬರ್ನಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಡ್ಡಾ ಜೊತೆ ಪರಿಣೀತಿ ಚೋಪ್ರಾ ಮದುವೆ ಆದರು. ಇತ್ತೀಚೆಗೆ ಅವರು ಪ್ರೆಗ್ನೆಂಟ್ ಎಂಬ ಗಾಸಿಪ್ ಹಬ್ಬಿತ್ತು. ಆದರೆ ಆ ಗಾಳಿಸುದ್ದಿಯನ್ನು ಅವರು ತಳ್ಳಿ ಹಾಕಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.