ಆಕ್ಷನ್ ದೃಶ್ಯದ ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್ನ ಖ್ಯಾತ ನಟ; ಈಗ ಹೇಗಿದೆ ಆರೋಗ್ಯ ಸ್ಥಿತಿ?
Randeep Hooda: ಖ್ಯಾತ ಬಾಲಿವುಡ್ ನಟ ರಣದೀಪ್ ಹೂಡ ತಮ್ಮ ಪಾತ್ರ ಪೋಷಣೆಗೆ ಹೆಸರಾದವರು. ಪಾತ್ರಕ್ಕೋಸ್ಕರ ಸಂಪೂರ್ಣವಾಗಿ ಗೆಟಪ್ ಬದಲಿಸಲೂ ಅವರು ಹಿಂದೆ ಮುಂದೆ ಯೋಚಿಸುವುದಿಲ್ಲ. ಇದೀಗ ಸೀರೀಸ್ ಒಂದರ ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದಾರೆ.
ಖ್ಯಾತ ಬಾಲಿವುಡ್ ನಟ ರಣದೀಪ್ ಹೂಡ (Randeep Hooda) ತಮ್ಮ ಪಾತ್ರ ಪೋಷಣೆಗೆ ಹೆಸರಾದವರು. ಪಾತ್ರಕ್ಕಾಗಿ ಸಂಪೂರ್ಣವಾಗಿ ತಮ್ಮ ಗೆಟಪ್ ಬದಲಿಸಲೂ ಅವರು ಹಿಂದೆ ಮುಂದೆ ನೋಡುವವರಲ್ಲ. ಇದೀಗ ನಟ ತಮ್ಮ ಚೊಚ್ಚಲ ವೆಬ್ ಸೀರೀಸ್ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇನ್ಸ್ಪೆಕ್ಟರ್ ಅವಿನಾಶ್’ನಲ್ಲಿ (Inspector Avinash) ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರು ಚಿತ್ರೀಕರಣ ನಡೆಸುವಾಗ ಗಾಯಗೊಂಡಿದ್ದಾರೆ. ಸೆಟ್ನಲ್ಲಿದ್ದವರು ರಣದೀಪ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರೂ ಕೂಡ ರಣದೀಪ್ ಅದನ್ನು ನಿರಾಕರಿಸಿದ್ದಾರೆ. ಅಲ್ಲದೇ ಚಿತ್ರೀಕರಣ ಮುಂದುವರೆಸಿದ್ದಾರೆ. ತಮ್ಮಿಂದಾಗಿ ಚಿತ್ರೀಕರಣ ನಿಲ್ಲಬಾರದು ಎಂದು ಅವರು ಕಾಳಜಿ ತೋರಿದ್ದಾರೆ. ಆ ದಿನದ ಚಿತ್ರೀಕರಣ ಮುಗಿದ ನಂತರವೇ ರಣದೀಪ್ ಆಸ್ಪತ್ರೆಗೆ ತೆರಳಿದ್ದಾರೆ. ರಣದೀಪ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಣದೀಪ್ ಅವರು ಸಹನಟ ಅಮಿತ್ ಸಿಯಾಲ್ ಅವರೊಂದಿಗೆ ಆಕ್ಷನ್ ದೃಶ್ಯದಲ್ಲಿ ನಟಿಸುತ್ತಿದ್ದರು. ಆಗ ಘಟನೆ ನಡೆದಿದೆ ಎಂದು ವರದಿಯಾಗಿದೆ. ಚಿತ್ರೀಕರಣದಲ್ಲಿ ಹಲವು ಜನರು ಭಾಗಿಯಾಗಿದ್ದರು. ಆದ್ದರಿಂದ ಶೂಟಿಂಗ್ ನಿಲ್ಲಿಸಲು ರಣದೀಪ್ ಮನಸ್ಸು ಮಾಡಲಿಲ್ಲ. ಐಸ್ ಪ್ಯಾಕ್ಗಳನ್ನು ಬಳಸಿ ಅವರು ಗಾಯದ ನೋವು ಜಾಸ್ತಿಯಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡರು. ನಂತರ ಶೂಟಿಂಗ್ ಮುಂದುವರೆಸಿದರು. ಚಿತ್ರೀಕರಣ ಮುಗಿದ ನಂತರವೇ ರಣದೀಪ್ ಆಸ್ಪತ್ರೆಗೆ ತೆರಳಿದರು. 2021ರಲ್ಲಿ ‘ರಾಧೆ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ರಣದೀಪ್ ಗಾಯಗೊಂಡಿದ್ದರು. ಈಗಲೂ ಅದೇ ಜಾಗಕ್ಕೆ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ.
ಕ್ರೈಮ್-ಥ್ರಿಲ್ಲರ್ ಸರಣಿಯಾಗಿರುವ ‘ಇನ್‌ಸ್ಪೆಕ್ಟರ್ ಅವಿನಾಶ್’ ಅನ್ನು ನೀರಜ್ ಪಾಠಕ್ ನಿರ್ದೇಶಿಸುತ್ತಿದ್ದಾರೆ. 2021ರ ಜನವರಿಯಲ್ಲೇ ತಂಡ ಚಿತ್ರೀಕರಣ ಆರಂಭಿಸಿತ್ತು. ಆದರೆ ಕೊರೋನ ವೈರಸ್ ಎರಡನೇ ಅಲೆಯಿಂದಾಗಿ ಶೂಟಿಂಗ್ ಮುಂದೂಡಲ್ಪಟ್ಟಿತ್ತು. ‘ಇನ್‌ಸ್ಪೆಕ್ಟರ್ ಅವಿನಾಶ್’ನಲ್ಲಿ ಮಹೇಶ್ ಮಂಜ್ರೇಕರ್, ಊರ್ವಶಿ ರೌಟೇಲಾ, ರಜನೀಶ್ ದುಗ್ಗಲ್, ಗೋವಿಂದ್ ನಾಮ್‌ದೇವ್, ಅಧ್ಯಯನ್ ಸುಮನ್, ಅಮಿತ್ ಸಿಯಾಲ್, ಪ್ರಿಯಾಂಕಾ ಬೋಸ್ ಮತ್ತು ಅಭಿಮನ್ಯು ಸಿಂಗ್ ಮೊದಲಾದವರು ನಟಿಸುತ್ತಿದ್ದಾರೆ.
‘ಇನ್ಸ್ಪೆಕ್ಟರ್ ಅವಿನಾಶ್’ ಹೊರತುಪಡಿಸಿ, ಹಲವು ಚಿತ್ರಗಳಲ್ಲಿ ರಣದೀಪ್ ಹೂಡಾ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಕಬೀರ್ ನಿರ್ದೇಶನದ ‘ಮರ್ದ್’ ಮತ್ತು ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶಿಸಿದ ‘ತೇರಾ ಕ್ಯಾ ಹೋಗಾ ಲವ್ಲಿ’ ಮೊದಲಾದ ಚಿತ್ರಗಳಲ್ಲಿ ರಣದೀಪ್ ಬಣ್ಣಹಚ್ಚುತ್ತಿದ್ದಾರೆ.
ಇದನ್ನೂ ಓದಿ:
Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ
‘ಯಾರಾದ್ರೂ ಟಚ್ ಮಾಡಿದ್ರೆ ₹ 500 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’; ರಾಖಿ ಹೀಗೆ ಆವಾಜ್ ಹಾಕಿದ್ದೇಕೆ?
Published On - 10:02 am, Fri, 4 February 22