ಡಿಸೆಂಬರ್​ 24ಕ್ಕೆ ತೆರೆಗೆ ಬರಲಿದೆ 1983 ವಿಶ್ವಕಪ್​ ಕಥೆ; ನಿರೀಕ್ಷೆ ಹೆಚ್ಚಿಸಿದ ‘83’ ಟೀಸರ್​

83 Movie Teaser: ‘83’ ಸಿನಿಮಾದ ಟೀಸರ್​ ಹಂಚಿಕೊಂಡಿರುವ ರಣವೀರ್​ ಸಿಂಗ್​ ಅವರು ಟ್ರೇಲರ್​ ಬಿಡುಗಡೆಯ ದಿನಾಂಕವನ್ನು ತಿಳಿಸುವ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಿಸಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಡಿಸೆಂಬರ್​ 24ಕ್ಕೆ ತೆರೆಗೆ ಬರಲಿದೆ 1983 ವಿಶ್ವಕಪ್​ ಕಥೆ; ನಿರೀಕ್ಷೆ ಹೆಚ್ಚಿಸಿದ ‘83’ ಟೀಸರ್​
ರಣವೀರ್ ಸಿಂಗ್


ರಣವೀರ್​ ಸಿಂಗ್​ (Ranveer Singh) ನಟನೆಯ ಬಹುನಿರೀಕ್ಷಿತ ಸಿನಿಮಾ ‘83’ (83 Movie) ಈಗ ಬಿಡುಗಡೆ ದಿನಾಂಕ ಘೋಷಿಸಿಕೊಂಡಿದೆ. ಕ್ರಿಸ್​ ಮಸ್​ ಹಬ್ಬದ ಪ್ರಯುಕ್ತ ಡಿ.24ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾಗಾಗಿ ಕ್ರಿಕೆಟ್​ ಪ್ರೇಮಿಗಳು ಮತ್ತು ಸಿನಿಪ್ರಿಯರು ಬಹಳ ತಿಂಗಳುಗಳಿಂದ ಕಾದಿದ್ದರು. ಆದರೆ ಕೊರೊನಾ ವೈರಸ್​ ಹಾವಳಿಯಿಂದಾಗಿ ಪದೇ ಪದೇ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿತ್ತು. ಈಗ ಅಂತಿಮವಾಗಿ ‘83’ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಟೀಸರ್ (83 Movie Teaser)​ ಮೂಲಕ ರಿಲೀಸ್​ ದಿನಾಂಕವನ್ನು ಖಚಿತಪಡಿಸಲಾಗಿದೆ. ಖ್ಯಾತ ನಿರ್ದೇಶಕ ಕಬೀರ್​ ಖಾನ್​ (Kabir Khan) ಆ್ಯಕ್ಷನ್​-ಕಟ್​ ಹೇಳಿರುವ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಕೂಡ ನಟಿಸಿದ್ದಾರೆ. ಕಪಿಲ್​ ದೇವ್​ (Kapil Dev) ಪಾತ್ರದಲ್ಲಿ ರಣವೀರ್​ ಸಿಂಗ್​ ಅಭಿನಯಿಸಿದ್ದರೆ, ಅವರ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ದೀಪಿಕಾ ನಿರ್ವಹಿಸಿದ್ದಾರೆ.

1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡವನ್ನು ಮಣಿಸಿದ ಘಟನೆಯನ್ನೇ ಆಧಾರವಾಗಿ ಇಟ್ಟುಕೊಂಡು ‘83’ ಸಿನಿಮಾ ಮೂಡಿಬಂದಿದೆ. ಕಪಿಲ್​ ದೇವ್​ ಪಾತ್ರದಲ್ಲಿ ನಟಿಸಲು ರಣವೀರ್​ ಸಿಂಗ್​ ತುಂಬ ಶ್ರಮಪಟ್ಟಿದ್ದಾರೆ. ಟೀಸರ್​ ಮತ್ತು ಪೋಸ್ಟರ್​ಗಳಲ್ಲಿ ಅವರ ಲುಕ್​ ಗಮನ ಸೆಳೆದಿದೆ. ಇಡೀ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ‘83’ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ.

ಟೀಸರ್​ ಹಂಚಿಕೊಂಡಿರುವ ರಣವೀರ್​ ಸಿಂಗ್​ ಅವರು ಟ್ರೇಲರ್​ ಬಿಡುಗಡೆಯ ದಿನಾಂಕವನ್ನು ತಿಳಿಸುವ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಿಸಿದ್ದಾರೆ. ‘ಭಾರತದ ದೊಡ್ಡ ಗೆಲುವಿನ ಹಿಂದಿರುವ ಕಥೆಯನ್ನು ವಿವರಿಸುವ ‘83’ ಸಿನಿಮಾ ಡಿ.24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆಕಾಣಲಿದೆ. ನವೆಂಬರ್​ 30ರಂದು ಟ್ರೇಲರ್​ ಬಿಡುಗಡೆ ಆಗಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ತಿಹಾರ್​ ರಾಜ್​ ಭಾಸಿನ್​, ಸಾಖಿಬ್​ ಸಲೀಮ್​, ಅಮೃತಾ ಪುರಿ, ಪಂಕಜ್​ ತ್ರಿಪಾಠಿ, ಚಿರಾಗ್​ ಪಾಟಿಲ್​, ಸಾಹಿಲ್​ ಕಟ್ಟರ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕ್ರಿಕೆಟ್​ ಮತ್ತು ಸಿನಿಮಾ ಜಗತ್ತಿಗೆ ಹತ್ತಿರದ ನಂಟು. ಹಲವು ಕ್ರಿಕೆಟ್​ ಆಟಗಾರರ ಬದುಕು ಈಗಾಗಲೇ ಸಿನಿಮಾ ರೂಪದಲ್ಲಿ ತೆರೆಮೇಲೆ ಬಂದಿದೆ. ಅದೇ ರೀತಿ 1983ರ ವಿಶ್ವಕಪ್​ ಗೆಲುವನ್ನು ತೆರೆಗೆ ತರಲು ‘83’ ಚಿತ್ರ ಪ್ರಯತ್ನಿಸಿದೆ.

ಈ ಸಿನಿಮಾದಲ್ಲಿ ಯಾವೆಲ್ಲ ಅಂಶಗಳು ಹೈಲೈಟ್​ ಆಗಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ‘ಪುಷ್ಪ’ (ಡಿ.17) ಮುಂತಾದ ಬಿಗ್​ ಬಜೆಟ್​ ಸಿನಿಮಾಗಳು ಕೂಡ ತೆರೆಕಾಣುತ್ತಿವೆ. ಹಾಗಾಗಿ ಬಾಕ್ಸ್​ ಆಫೀಸ್​ ಕ್ಲ್ಯಾಶ್​​ ಸಹ ಏರ್ಪಡಲಿದೆ.

ಇದನ್ನೂ ಓದಿ:

‘ನಾಗಿಣಿ’ ಸೀರಿಯಲ್​ ನಟಿಯರಿಗೆ ರಣವೀರ್​ ಸಿಂಗ್ ಪೈಪೋಟಿ; ಸ್ನೇಕ್​ ಡ್ಯಾನ್ಸ್​ ಕಂಡು ನಿರ್ಮಾಪಕಿ ಫಿದಾ

ಕತ್ರಿನಾ ಕೈಫ್​-ವಿಕ್ಕಿ ಮದುವೆಗೆ ವಿಶೇಷ ಮೆಹಂದಿ; ಇದರ ಬೆಲೆ ಕೇಳಿ ಅಚ್ಚರಿಪಟ್ಟ ಫ್ಯಾನ್ಸ್​

Click on your DTH Provider to Add TV9 Kannada