‘ಸಲ್ಮಾನ್ ಖಾನ್ ಜನರ ಜೀವನ ಹಾಳು ಮಾಡ್ತಾರೆ’: ಆರೋಪಕ್ಕೆ ಉತ್ತರ ನೀಡಿದ ನಟ
ಚಿತ್ರರಂಗದಲ್ಲಿ ಅನೇಕರಿಗೆ ನಟ ಸಲ್ಮಾನ್ ಖಾನ್ ಅವರು ಅವಕಾಶ ನೀಡಿ ಬೆಳೆಸಿದ್ದಾರೆ ಎಂಬುದು ನಿಜ. ಆದರೆ ಇನ್ನೂ ಕೆಲವರಿಗೆ ಸಲ್ಮಾನ್ ಖಾನ್ ಅವರಿಂದ ತೊಂದರೆ ಆಗಿದೆ ಎಂಬ ಆರೋಪವೂ ಇದೆ. ‘ಬಿಗ್ ಬಾಸ್ 19’ ವೇದಿಕೆಯಲ್ಲಿ ಈ ವಿಚಾರದ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಸಲ್ಮಾನ್ ಖಾನ್ (Salman Khan) ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಬಾಲಿವುಡ್ನಲ್ಲಿ ಅವರು ಸ್ಟಾರ್ ಆಗಿ ಮಿಂಚಿದ್ದಾರೆ. ಬಿಗ್ ಬಾಸ್ ನಿರೂಪಣೆ ಮೂಲಕವೂ ಅವರು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಸಲ್ಮಾನ್ ಖಾನ್ ಬ್ಯುಸಿ ಆಗಿದ್ದಾರೆ. ಅನೇಕರಿಗೆ ಅವರು ಅವಕಾಶ ನೀಡಿದ್ದಾರೆ. ಆದರೆ ಇನ್ನೊಂದು ಆರೋಪ ಇದೆ. ಕೆಲವರ ಜೀವನವನ್ನು ಸಲ್ಮಾನ್ ಖಾನ್ ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತದೆ. ಆ ಬಗ್ಗೆ ‘ಬಿಗ್ ಬಾಸ್ 19’ (Bigg Boss 19) ವೇದಿಕೆಯಲ್ಲಿ ಸ್ವತಃ ಸಲ್ಮಾನ್ ಖಾನ್ ಅವರು ಮಾತನಾಡಿದ್ದಾರೆ.
ಹಿಂದಿ ಬಿಗ್ ಬಾಸ್ 19ನೇ ಸೀಸನ್ ಆರಂಭ ಆಗಿದೆ. ಈ ಬಾರಿ ಕೂಡ ಸಲ್ಮಾನ್ ಖಾನ್ ಅವರು ನಿರೂಪಣೆ ಮಾಡುತ್ತಿದ್ದಾರೆ. ವೀಕೆಂಡ್ ಸಂಚಿಕೆಯಲ್ಲಿ ಮಾಜಿ ಸ್ಪರ್ಧಿ ಶೆಹನಾಜ್ ಗಿಲ್ ಅವರು ವೇದಿಕೆಗೆ ಬಂದಿದ್ದರು. ಅವರು ಸಲ್ಮಾನ್ ಖಾನ್ ಜೊತೆ ಮಾತನಾಡುತ್ತಿದ್ದಾಗ ಈ ವಿಚಾರ ಪ್ರಸ್ತಾಪ ಆಯಿತು. ‘ನೀವು ಎಷ್ಟೋ ಜನರ ಜೀವನ ರೂಪಿಸಿದ್ದೀರಿ’ ಎಂದು ಶೆಹನಾಜ್ ಗಿಲ್ ಹೊಗಳಿದರು. ಆ ಮಾತಿಗೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದರು.
‘ನಾನು ಯಾವಾಗ ಜನರ ಜೀವನ ರೂಪಿಸಿದ್ದೇನೆ? ಜೀವನ ರೂಪಿಸುವವನು ದೇವರು. ನಾನು ಜೀವನ ಹಾಳು ಮಾಡಿದ್ದೇನೆ ಎಂದು ಕೂಡ ಕೆಲವರು ಆರೋಪ ಹೊರಿಸಿದ್ದಾರೆ. ಪ್ರಮಾಣಿಕವಾಗಿ ಹೇಳಬೇಕು ಎಂದರೆ ಅದೆಲ್ಲ ನನ್ನ ಕೈಯಲ್ಲಿ ಇಲ್ಲ. ಹಾಗೇನಾದರೂ ಮಾಡುವುದಿದ್ದರೆ ನನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತೇನೆ. ಮತ್ತೆ ಸರಿಪಡಿಸಿಕೊಳ್ಳಲು ಪ್ರಯತ್ನಿಸುವೆ’ ಎಂದು ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.
ಈ ಮೊದಲು ಕೆಲವರು ಸಲ್ಮಾನ್ ಖಾನ್ ಮೇಲೆ ಗಂಭೀರ ಆರೋಪ ಹೊರಿಸಿದ್ದರು. ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ಅವರು ‘ಸಲ್ಮಾನ್ ಖಾನ್ ಅವರಿಂದಾಗಿ ನನ್ನ ವೃತ್ತಿಜೀವನ ಹಾಳಾಯಿತು’ ಎಂದು ಆರೋಪಿಸಿದ್ದರು. ಅದೇ ರೀತಿ ವಿವೇಕ್ ಒಬೆರಾಯ್ ಅವರ ಮೇಲೂ ಸಲ್ಮಾನ್ ಖಾನ್ ಹಗೆತನ ಸಾಧಿಸಿ ವೃತ್ತಿಜೀವನಕ್ಕೆ ತೊಂದರೆ ಕೊಟ್ಟಿದ್ದಾರೆ ಎಂಬ ಆರೋಪ ಇದೆ.
ಇದನ್ನೂ ಓದಿ: ಮಲಯಾಳಂ ನಿರ್ದೇಶಕನೊಟ್ಟಿಗೆ ಸಲ್ಮಾನ್ ಖಾನ್ ಐತಿಹಾಸಿಕ ಹಿನ್ನೆಲೆಯ ಸಿನಿಮಾ
ಗಾಯಕ ಅರಿಜಿತ್ ಸಿಂಗ್, ಸೋಮಿ ಅಲಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಆಕಾಶದೀಪ್ ಸೇಗಲ್ ಮುಂತಾದವರು ಕೂಡ ಸಲ್ಮಾನ್ ಖಾನ್ ಮೇಲೆ ಇದೇ ರೀತಿಯ ಆರೋಪ ಮಾಡಿದ್ದರು. ಈಗ ಬಿಗ್ ಬಾಸ್ ವೇದಿಕೆಯಲ್ಲಿ ಅವುಗಳಿಗೆಲ್ಲ ಪರೋಕ್ಷವಾಗಿ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




