‘ಮನ್ನತ್’ ನವೀಕರಣ ಮಾಡ್ತೀನಿ ಎಂದು ಹೊರಟ ಶಾರುಖ್ಗೆ ಹಿನ್ನಡೆ; ಬಿತ್ತು ಕೇಸ್
ಶಾರುಖ್ ಖಾನ್ ಅವರ ಮುಂಬೈನ ಮನ್ನತ್ ಬಂಗಲೆಯ ನವೀಕರಣ ಕಾರ್ಯಕ್ಕೆ ಎನ್‌ಜಿಟಿಯಲ್ಲಿ ವಿವಾದ ಉಂಟಾಗಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ನವೀಕರಣ ಕಾರ್ಯಕ್ಕೆ ಅನುಮತಿಯಲ್ಲಿ ಅಕ್ರಮವಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ. ಮನ್ನತ್ ಗ್ರೇಡ್ 3 ಹೆರಿಟೇಜ್ ಕಟ್ಟಡ ಆಗಿರುವುದರಿಂದ, ನವೀಕರಣಕ್ಕೆ ಸೂಕ್ತ ಅನುಮತಿ ಪಡೆಯುವುದು ಅಗತ್ಯ.

ಶಾರುಖ್ ಖಾನ್ ಅವರ ಮುಂಬೈನ ಮನ್ನತ್ ಬಂಗಲೆಯ ನವೀಕರಣ ಕಾರ್ಯ ಶೀಘ್ರವೇ ಆರಂಭ ಆಗಬೇಕಿತ್ತು. ಆರು ಅಂತಸ್ತಿನ ಈ ಕಟ್ಟಡಕ್ಕೆ ಇನ್ನೂ ಎರಡು ಅಂತಸ್ತನ್ನು ಸೇರಿಸುವ ಆಲೋಚನೆ ಶಾರುಖ್ ಖಾನ್ (Shah Rukh Khan) ಅವರಿಗೆ ಇತ್ತು. ಆದರೆ, ಈ ವಿಚಾರ ಈಗ ವಿವಾದದಲ್ಲಿ ಕೊನೆ ಆಗುವ ಸೂಚನೆ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ನವೀಕರಣ ಕಾರ್ಯ ನಿಲ್ಲಿಸಬೇಕು ಎಂದು ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ (ಎನ್ಜಿಟಿ) ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಶಾರುಖ್ ಖಾನ್ ಅವರು ಹಲವು ವರ್ಷಗಳಿಂದ ‘ಮನ್ನತ್’ನಲ್ಲಿ ವಾಸವಿದ್ದಾರೆ. ಅವರಿಗೆ ಬಂಗಲೆ ಇನ್ನೂ ದೊಡ್ಡದಾಗಿ ಇರಬೇಕು ಎಂದನಿಸಿದೆ. ಈ ಕಾರಣಕ್ಕೆ ಹೆಚ್ಚುವರಿಯಾಗಿ ಎರಡು ಅಂತಸ್ತು ಕಟ್ಟಲು ಅವರು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಬೇರೆಡೆ ಫ್ಲ್ಯಾಟ್ ತೆಗೆದುಕೊಂಡಿದ್ದು, ನವೀಕರಣ ಕಾರ್ಯ ಮುಗಿಯೋವರೆಗೆ ಅಲ್ಲಿ ವಾಸಿಸಲು ಶಾರುಖ್ ಖಾನ್ ನಿರ್ಧರಿಸಿದ್ದಾರೆ. ಆದರೆ, ಈಗ ಶಾರುಖ್ ಖಾನ್ ಪ್ಲ್ಯಾನ್ಗೆ ತಣ್ಣೀರು ಎರೆಚಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸಂತೋಷ್ ದೌಂಡ್ಕರ್ ಅವರು ಎನ್ಜಿಟಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶಾರುಖ್ ಖಾನ್ ಹಾಗೂ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಕಟ್ಟಡ ನವೀಕರಣ ಮಾಡಲು ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಶಾರುಖ್ ಖಾನ್ ಅವರ ನಿವಾಸವನ್ನು ‘ಗ್ರೇಡ್ 3 ಹೆರಿಟೇಜ್ ಸ್ಟ್ರಕ್ಚರ್’ ಅಡಿಯಲ್ಲಿ ಸೇರಿಸಲಾಗಿದೆ. ಹೀಗಾಗಿ, ಇದನ್ನು ನವೀಕರಣ ಮಾಡಲು ಸರಿಯಾದ ಒಪ್ಪಿಗೆ ಪಡೆದುಕೊಳ್ಳಲೇಬೇಕಿದೆ.
ಈ ಬಗ್ಗೆ ಸೂಕ್ತ ದಾಖಲೆ ಸಲ್ಲಿಕೆ ಮಾಡುವಂತೆ ಸಂತೋಷ್ ಅವರಿಗೆ ಎನ್ಜಿಟಿ ಸೂಚಿಸಿದೆ. ಒಂದೊಮ್ಮೆ ಇದನ್ನು ಸಲ್ಲಿಕೆ ಮಾಡಲು ಸಂತೋಷ್ ಅವರು ವಿಫಲರಾದರೆ ಶಾರುಖ್ ಖಾನ್ ಮನೆಯ ನವೀಕರಣ ಕೆಲಸ ಮುಂದುವರಿಯಲಿದೆ. ಸರಿಯಾದ ದಾಖಲೆ ಒದಗಿಸಿದರೆ ಶಾರುಖ್ ಮನೆಯ ಕೆಲಸಗಳು ನಿಲ್ಲುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಲ್ಮಾನ್, ಶಾರುಖ್ ಖಾನ್ ಸಾವಿನ ಬಗ್ಗೆ ಭವಿಷ್ಯ, ಜ್ಯೋತಿಷಿ ವಿರುದ್ಧ ಆಕ್ರೋಶ
2023ರಲ್ಲಿ ಶಾರುಖ್ ಖಾನ್ ಅವರ ನಟನೆಯ ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು ರಿಲೀಸ್ ಆದವು. 2024ರಲ್ಲಿ ಅವರ ನಟನೆಯ ಯಾವುದೇ ಸಿನಿಮಾಗಳು ಕೂಡ ತೆರೆಗೆ ಬಂದಿಲ್ಲ ಅನ್ನೋದು ಬೇಸರದ ವಿಚಾರ. ಇನ್ನೂ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಹೀಗಾಗಿ, ಈ ವರ್ಷ ಕೂಡ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.