ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್: ಕೋಟ್ಯಂತರ ಅಭಿಮಾನಿಗಳಿಗೆ ಶಾಕ್
ಖ್ಯಾತ ಸಿಂಗರ್ ಅರಿಜಿತ್ ಸಿಂಗ್ ಅವರು ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ನಿವೃತ್ತಿ ಘೋಷಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಹಲವಾರು ಜನಪ್ರಿಯ ಗೀತೆಗಳಿಗೆ ಧ್ವನಿ ಆಗಿರುವ ಅರಿಜಿತ್ ಸಿಂಗ್ ಇನ್ಮುಂದೆ ಹಾಡುವುದಿಲ್ಲ! ಈ ಸುದ್ದಿ ತಿಳಿದು ಅಭಿಮಾನಿಗಳಿಗೆ ತೀವ್ರ ಬೇಸರ ಆಗಿದೆ.

ನೂರಾರು ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಗಾಯಕ ಅರಿಜಿತ್ ಸಿಂಗ್ ಅವರು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಏಕಾಏಕಿ ಅವರು ನಿವೃತ್ತಿ (Arijit Singh Retirement) ಘೋಷಿಸಿದ್ದಾರೆ. ಅವರು ಈ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಅರಿಜಿತ್ ಸಿಂಗ್ ಅವರು ನಿವೃತ್ತಿ ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಹಲವಾರು ಲವ್ ಸಾಂಗ್ಗಳನ್ನು ಹಾಡುವ ಮೂಲಕ ಅರಿಜಿತ್ ಸಿಂಗ್ (Arijit Singh) ಅವರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಧ್ವನಿಯಲ್ಲಿ ಹೊಸ ಹೊಸ ಹಾಡುಗಳನ್ನು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈಗ ಶಾಕ್ ಆಗಿದೆ.
ಅರಿಜಿತ್ ಸಿಂಗ್ ಅವರು ಸೋಶಿಯಲ್ ಮೀಡಿಯಾ ಮೂಲಕ ಈ ನಿರ್ಧಾರ ತಿಳಿಸಿದ್ದಾರೆ. ‘ಇದನ್ನು ನಿಲ್ಲಿಸುತ್ತಿದ್ದೇನೆ. ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೇಳುಗರಾಗಿ ಇಷ್ಟು ವರ್ಷಗಳ ಕಾಲ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ಪ್ರಯಾಣ ಅದ್ಭುತವಾಗಿತ್ತು’ ಎಂದು ಅರಿಜಿತ್ ಸಿಂಗ್ ಅವರು ಪೋಸ್ಟ್ ಮಾಡಿದ್ದಾರೆ.
View this post on Instagram
‘ದೇವರು ನನಗೆ ಕರುಣಾಮಯನಾಗಿದ್ದ. ನಾನು ಒಳ್ಳೆಯ ಸಂಗೀತದ ಅಭಿಮಾನಿ. ಮುಂದಿನ ದಿನಗಳಲ್ಲಿ ಹೆಚ್ಚು ಕಲಿಯುತ್ತೇನೆ. ಚಿಕ್ಕ ಕಲಾವಿದನಾಗಿ ಇನ್ನಷ್ಟು ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಈಗಾಗಲೇ ಒಪ್ಪಿಕೊಂಡ ಕೆಲಸಗಳನ್ನು ನಾನು ಮುಗಿಸಬೇಕಿದೆ. ಅವುಗಳನ್ನು ಪೂರ್ಣಗೊಳಿಸುತ್ತೇನೆ. ಹಾಗಾಗಿ ಈ ವರ್ಷ ನಿಮಗೆ ಕೆಲವು ಹೊಸ ಹಾಡುಗಳು ಸಿಗುತ್ತವೆ. ಆದರೆ ಒಂದು ಸ್ಪಷ್ಟನೆ, ಸಂಗೀತದ ಕೆಲಸವನ್ನು ನಾನು ನಿಲ್ಲಿಸುವುದಿಲ್ಲ’ ಎಂದು ಅರಿಜಿತ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?
ಕನ್ನಡದಲ್ಲಿ ‘ನಿನ್ನಿಂದಲೇ’ ಸಿನಿಮಾದ ‘ಮೌನ ತಾಳಿತೆ..’ ಹಾಡು ಅರಿಜಿತ್ ಸಿಂಗ್ ಅವರ ಕಂಠದಲ್ಲಿ ಮೂಡಿಬಂದಿತ್ತು. ಹಿಂದಿ ಮಾತ್ರವಲ್ಲದೇ ಬೆಂಗಾಲಿ, ತಮಿಳು, ತೆಲುಗು ಹಾಡುಗಳಿಗೂ ಕೂಡ ಅರಿಜಿತ್ ಸಿಂಗ್ ಅವರು ಧ್ವನಿ ನೀಡಿದ್ದಾರೆ. ಆದರೆ ಅವರು ಈಗ ನಿವೃತ್ತಿ ಘೋಷಿಸಿರುವುದಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




