ಜೈಲಿನಲ್ಲಿರುವ ಹೀರೋನ ಕೊಲ್ಲಲು ನಡೆದಿದೆ ಪ್ಲ್ಯಾನ್? ಅನುಮಾನ ಹುಟ್ಟಿಸಿತು ಟ್ವೀಟ್
ಕಮಾಲ್ ಖಾನ್ ಆಗಸ್ಟ್ 30ರಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೆ ಒಳಗಾದರು. ಈಗ ಕಮಾಲ್ ಟ್ವಿಟರ್ ಖಾತೆಯಿಂದ ಅಚ್ಚರಿಯ ಟ್ವೀಟ್ ಮಾಡಲಾಗಿದೆ.
ನಟ, ಸ್ವಯಂಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ (Kamaal R Khan) ಜೈಲು ಪಾಲಾಗಿದ್ದಾರೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಹಾಗೂ ವಿವಾದಾತ್ಮಕ ಟ್ವೀಟ್ ಪ್ರಕರಣದಲ್ಲಿ ಅವರು ಜೈಲು ಸೇರಿದ್ದಾರೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಆದರೆ, ವಿವಾದಾತ್ಮಕ ಟ್ವೀಟ್ ಪ್ರಕರಣದಲ್ಲಿ ಅವರು ಜೈಲಿನಲ್ಲೇ ಇದ್ದಾರೆ. ತಂದೆಯನ್ನು ಜೈಲಿನಲ್ಲೇ ಕೊಲೆ ಮಾಡಲು ಸಂಚು ನಡೆದಿದೆ ಎಂದು ಅರ್ಥ ಬರುವ ರೀತಿಯಲ್ಲಿ ಕಮಾಲ್ ಮಗ ಫೈಸಲ್ ಕಮಾಲ್ ಆರೋಪ ಮಾಡಿದ್ದಾರೆ. ಈ ಮೂಲಕ ಪ್ರಕರಣ ನಾಟಕೀಯ ಬೆಳವಣಿಗೆ ಪಡೆದುಕೊಂಡಿದೆ.
ಕಮಾಲ್ ಖಾನ್ ಆಗಸ್ಟ್ 30ರಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೆ ಒಳಗಾದರು. ಕಮಾಲ್ ಖಾನ್ ವಿರುದ್ಧ ಎರಡೆರಡು ಕೇಸ್ ದಾಖಲಾಗಿದೆ. ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದು ಒಂದು ಕಡೆಯಾದರೆ, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮತ್ತೊಂದು ಕಡೆ. ಈಗ ಕಮಾಲ್ ಟ್ವಿಟರ್ ಖಾತೆಯಿಂದ ಅಚ್ಚರಿಯ ಟ್ವೀಟ್ ಮಾಡಲಾಗಿದೆ.
‘ನಾನು ಕೆಆರ್ಕೆ ಮಗ ಫೈಸಲ್ ಕಮಾಲ್. ಕೆಲವರು ಮುಂಬೈನಲ್ಲಿ ನನ್ನ ತಂದೆಯನ್ನು ಕೊಲ್ಲಲು ಟಾರ್ಚರ್ ನೀಡುತ್ತಿದ್ದಾರೆ. ನನಗೆ ಇನ್ನೂ 23 ವರ್ಷ ವಯಸ್ಸು. ನಾನು ಲಂಡನ್ನಲ್ಲಿದ್ದೇನೆ. ನನ್ನ ತಂದೆಗೆ ಹೇಗೆ ಸಹಾಯ ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದು ಕಮಾಲ್ ಖಾನ್ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
‘ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್ ಹಾಗೂ ದೇವೇಂದ್ರ ಫಡ್ನವೀಸ್ ಅವರು ನನ್ನ ತಂದೆಯ ಜೀವನನ್ನು ಉಳಿಸಬೇಕು ಎಂದು ಕೋರುತ್ತೇನೆ. ಅವರು ಇಲ್ಲದಿದ್ದರೆ ನಾನು ನನ್ನ ತಂಗಿ ಸಾಯುತ್ತೇವೆ. ಅವರೇ ನನ್ನ ಜೀವ. ನನ್ನ ತಂದೆ ಉಳಿಸಲು ಸಾರ್ವಜನಿಕರೂ ಬೆಂಬಲ ನೀಡಿ. ಅವರು ಸಾಯಬಾರದು’ ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ.
I am KRK’ son Faisal Kamaal. Some people are torturing to kill my father in Mumbai. I am just 23years old living in London. I don’t know how to help my father. I request @juniorbachchan @Riteishd and @Dev_Fadnavis ji to save my father’s life. Me n my sister will die without him.
— Kamal Rashid Kumar (@kamaalrkhan) September 8, 2022
ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್ನಲ್ಲಿ ‘ಬ್ರಹ್ಮಾಸ್ತ್ರ’ ಕಮಾಲ್; ಆದರೆ, ‘ಕೆಜಿಎಫ್ 2’ ಸಮೀಪವೂ ಬರಲಿಲ್ಲ ರಣಬೀರ್ ಸಿನಿಮಾ ಕಲೆಕ್ಷನ್
ಈ ಟ್ವೀಟ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕಮಾಲ್ ಅವರನ್ನು ಜೈಲಿನಲ್ಲೇ ಹತ್ಯೆ ಮಾಡಲು ಕೆಲವರು ಸಂಚು ರೂಪಿಸಿದ್ದಾರೆಯೇ ಎಂಬ ಪ್ರಶ್ನೆ ಅನೇಕರದ್ದು. ಇನ್ನೂ ಕೆಲವರು ಈ ಟ್ವೀಟ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಮಾಲ್ ಟ್ವಿಟರ್ ಖಾತೆ ಹ್ಯಾಕ್ ಆಗಿದೆಯೇ ಎಂಬ ಅನುಮಾನವನ್ನು ಕೆಲವರು ಹೊರಹಾಕಿದ್ದಾರೆ.