The Kerala Story: ‘ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಇನ್ನೂ ಮುಗಿದಿಲ್ಲ’; 32,000 ಮಹಿಳೆಯರ ಮತಾಂತರ ಆರೋಪದ ಬಗ್ಗೆ ನಿರ್ಮಾಪಕ ಪ್ರತಿಕ್ರಿಯೆ
Vipul Amrutlal Shah: ‘ನಾವು ಯಾವಾಗಲೂ ಕೋರ್ಟ್ ಆದೇಶವನ್ನು ಪಾಲಿಸಿದ್ದೇವೆ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಟಾಪಿಕ್ ಇನ್ನೂ ಮುಗಿದಿಲ್ಲ. ಅದರ ಬಗ್ಗೆ ಮತ್ತೆ ಮಾತನಾಡುತ್ತೇವೆ’ ಎಂದು ವಿಪುಲ್ ಅಮೃತ್ಲಾಲ್ ಶಾ ಹೇಳಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಸುತ್ತ ಇರುವ ವಿವಾದಗಳು ಒಂದೆರಡಲ್ಲ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗಿದೆ. 32 ಸಾವಿರ ಮಹಿಳೆಯರ ಮತಾಂತರ (Conversion) ಆಗಿದೆ ಎಂದು ಆರಂಭದಲ್ಲಿ ಈ ಚಿತ್ರತಂಡ ಹೇಳಿಕೊಂಡಿತ್ತು. ನಂತರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆದ ಬಳಿಕ ಕೇವಲ 3 ಮಹಿಳೆಯರ ಕಥೆ ಎಂದು ಹೇಳಲಾಯಿತು. ಈ ವಿಚಾರವಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾದ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ (Vipul Amrutlal Shah) ಅವರು ಮೌನ ಮುರಿದಿದ್ದಾರೆ. ‘ಸುಪ್ರೀಂ ಕೋರ್ಟ್ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಇನ್ನೂ ಮುಗಿದಿಲ್ಲ’ ಎಂದು ಅವರು ಹೇಳಿದ್ದಾರೆ. ಆ ಮೂಲಕ ಮತ್ತೆ ಕೌತುಕ ಮೂಡುವಂತೆ ಮಾಡಿದ್ದಾರೆ. ಅದಾ ಶರ್ಮಾ ನಟನೆಯ ಈ ಚಿತ್ರಕ್ಕೆ ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದು, ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದೆ.
‘ಡಿಎನ್ಎ’ಗೆ ನೀಡಿದ ಸಂದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಈ ಕೇಸ್ ಇನ್ನೂ ಅಂತ್ಯವಾಗಿಲ್ಲ. ಅಂದು ವಿಚಾರಣೆ ನಡೆದಿದ್ದು ಕೇವಲ ಬ್ಯಾನ್ ಕುರಿತಾಗಿ. 32 ಸಾವಿರ ಮಹಿಳೆಯರ ಮತಾಂತರದ ಬಗ್ಗೆ ನಂತರ ವಿಚಾರಣೆ ನಡೆಯಲಿದೆ. ಜುಲೈ 18ಕ್ಕೆ ವಿಚಾರಣೆ ಇದೆ. ವಿವಾದ ಅಂತ್ಯವಾಗಬೇಕಿತ್ತು. ಹಾಗಾಗಿ ಡಿಸ್ಕ್ಲೈಮರ್ ಸೇರಿಸುವಂತೆ ಸೂಚಿಸಲಾಯಿತು. ನಾವು ಯಾವಾಗಲೂ ಕೋರ್ಟ್ ಆದೇಶವನ್ನು ಪಾಲಿಸಿದ್ದೇವೆ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಟಾಪಿಕ್ ಇನ್ನೂ ಮುಗಿದಿಲ್ಲ. ಅದರ ಬಗ್ಗೆ ಮಾತನಾಡುತ್ತೇವೆ’ ಎಂದು ವಿಪುಲ್ ಅಮೃತ್ಲಾಲ್ ಶಾ ಹೇಳಿದ್ದಾರೆ.
25 ದಿನ ಪೂರೈಸಿದ ‘ದಿ ಕೇರಳ ಸ್ಟೋರಿ’:
‘ದಿ ಕೇರಳ ಸ್ಟೋರಿ’ ಸಿನಿಮಾ ಈಗ 25 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಮೇ 5ರಂದು ಈ ಚಿತ್ರ ಬಿಡುಗಡೆ ಆಯಿತು. ನೋಡನೋಡುತ್ತಿದ್ದಂತೆಯೇ 25 ದಿನ ಕಳೆದು ಹೋಗಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಅದಾ ಶರ್ಮಾ ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಕ್ಕಿದೆ. ನಿರ್ದೇಶಕ ಸುದೀಪ್ತೋ ಸೇನ್ ಅವರ ಖ್ಯಾತಿ ಕೂಡ ಹೆಚ್ಚಾಗಿದೆ. ನಾಲ್ಕನೇ ವೀಕೆಂಡ್ನಲ್ಲೂ ಅಬ್ಬರಿಸಿದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚಿನ್ನದ ಬೆಳೆ ತೆಗೆದಿದೆ. ಈವರೆಗೂ ಒಟ್ಟು ಕಲೆಕ್ಷನ್ 225 ಕೋಟಿ ರೂಪಾಯಿ ಆಗಿದೆ. ಇಂದಿಗೂ ‘ದಿ ಕೇರಳ ಸ್ಟೋರಿ’ ಸಿನಿಮಾ ಚರ್ಚೆಯಲ್ಲಿದೆ.
ಇದನ್ನೂ ಓದಿ: Sudipto Sen: ಆಸ್ಪತ್ರೆ ಸೇರಿದ್ದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್ ಆರೋಗ್ಯ ಈಗ ಹೇಗಿದೆ?
ಮೊದಲ ದಿನ ‘ದಿ ಕೇರಳ ಸ್ಟೋರಿ’ ಗಳಿಸಿದ್ದು ಕೇವಲ 8 ಕೋಟಿ ರೂಪಾಯಿ ಮಾತ್ರ. ನಂತರದ ದಿನಗಳಲ್ಲಿ ಇದರ ಕಲೆಕ್ಷನ್ ಹೆಚ್ಚಾಯಿತು. ಯಾವುದೇ ಸ್ಟಾರ್ ಹೀರೋಗಳು ಇಲ್ಲದ ಈ ಚಿತ್ರಕ್ಕೆ ಉತ್ತಮವಾಗಿ ಬಾಯಿ ಮಾತಿನ ಪ್ರಚಾರ ಸಿಕ್ಕಿತು. ಕೆಲವು ಕಡೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಇಲ್ಲದಿದ್ದರೂ ಕೂಡ ಇನ್ನುಳಿದ ರಾಜ್ಯಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಂಡಿತು. ವಾರದ ದಿನಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ವೀಕೆಂಡ್ಗಳಲ್ಲಿ ಇನ್ನೂ ಹೆಚ್ಚಿನ ಕಮಾಯಿ ಆಗಲು ಆರಂಭವಾಯಿತು. ಬಾಕ್ಸ್ ಆಫೀಸ್ ತಜ್ಞರಿಗೂ ಅಚ್ಚರಿ ಆಗುವ ರೀತಿಯಲ್ಲಿ ಈ ಸಿನಿಮಾಗೆ ಹಣ ಹರಿದುಬಂದಿದೆ. ಈವರೆಗೂ 225 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆದರೆ 250 ಕೋಟಿ ರೂಪಾಯಿ ತಲುಪುವುದು ಅನುಮಾನ ಎನ್ನಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.