
ನಟಿ ಊರ್ವಶಿ ರೌಟೇಲಾ (Urvashi Rautela) ಅವರಿಗೆ ತುಂಬ ಜನಪ್ರಿಯತೆ ಇದೆ ಎಂಬುದು ನಿಜ. ಆದರೆ ಅವರು ಹೋದಲ್ಲಿ ಬಂದಲ್ಲಿ ಗಿಮಿಕ್ ಮಾಡುವುದು ನಿಲ್ಲಿಸಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದರೂ ಕೂಡ ಅವರಿಗೆ ಸುದ್ದಿಯಾಗುವ ಹಪಹಪಿ ಇದೆ. ಆ ಕಾರಣಕ್ಕೆ ಅವರು ಕೆಲವೊಮ್ಮೆ ಸುಳ್ಳು ಕೂಡ ಹೇಳ್ತಾರೆ. ಅದಕ್ಕೆ ಈಗೊಂದು ಬೆಸ್ಟ್ ಉದಾಹರಣೆ ಸಿಕ್ಕಿದೆ. ಇತ್ತೀಚೆಗೆ ಕಾನ್ ಚಿತ್ರೋತ್ಸವಕ್ಕೆ (Cannes 2025) ಹೋಗಿ ಬಂದಿರುವ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ (Leonardo Dicaprio) ಇದ್ದಾರೆ. ಫೋಟೋಗೆ ಊರ್ವಶಿ ರೌಟೇಲಾ ನೀಡಿದ ಕ್ಯಾಪ್ಷನ್ ವೈರಲ್ ಆಗಿದೆ.
ಕಾನ್ ಚಿತ್ರೋತ್ಸವಕ್ಕೆ ಹಲವು ದೇಶಗಳ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಮೇ 13ರಿಂದ ಮೇ 24ರ ತನಕ ಈ ಫಿಲ್ಮ್ ಫೆಸ್ಟಿವಲ್ ನಡೆಯಿತು. ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಅವಕಾಶ ಊರ್ವಶಿ ರೌಟೇಲಾ ಅವರಿಗೂ ಸಿಕ್ಕಿತು. ವಿವಿಧ ಬಗೆಯ ಡ್ರೆಸ್ನಲ್ಲಿ ಅವರು ಮಿಂಚಿದರು. ಈ ನಡುವೆ ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ಜೊತೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಕೂಡ ಅವರಿಗೆ ಸಿಕ್ತು.
ಲಿಯೊನಾರ್ಡೊ ಡಿಕಾಪ್ರಿಯೊ ಜೊತೆಗಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಊರ್ವಶಿ ರೌಟೇಲಾ ಅವರು ಈ ರೀತಿ ಕ್ಯಾಪ್ಷನ್ ನೀಡಿದ್ದಾರೆ. ‘ಲಿಯೊನಾರ್ಡೊ ಡಿಕಾಪ್ರಿಯೊ ಅವರು ಕಾನ್ ರಾಣಿ ಎಂದು ಕರೆದಾಗ.. ಧನ್ಯವಾದಗಳು ಲಿಯೋ.. ಇದು ಟೈಟಾನಿಕ್ ರೀತಿ ಪ್ರಶಂಸೆ’ ಎಂದು ಊರ್ವಶಿ ರೌಟೇಲಾ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನೋಡಿದ ನೆಟ್ಟಿಗರಿಗೆ ನಗು ಬಂದಿದೆ. ಊರ್ವಶಿ ರೌಟೇಲಾ ಅವರಿಗೆ ಲಿಯೊನಾರ್ಡೊ ಡಿಕಾಪ್ರಿಯೊ ಆ ರೀತಿ ಹೊಗಳಿರಲು ಸಾಧ್ಯವೇ ಇಲ್ಲ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ‘ಈ ವಿಚಾರ ಲಿಯೊನಾರ್ಡೊ ಡಿಕಾಪ್ರಿಯೊ ಅವರಿಗೆ ಗೊತ್ತಾ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಏನೇ ಇರಲಿ, ಸೋಶಿಯಲ್ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ಮತ್ತು ಲಿಯೊನಾರ್ಡೊ ಡಿಕಾಪ್ರಿಯೊ ಅವರ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ: ಊರ್ವಶಿ ರೌಟೇಲಾ ಧರಿಸಿದ ಈ ಗೌನ್ ಬೆಲೆ ಬರೋಬ್ಬರಿ 40 ಕೋಟಿ ರೂಪಾಯಿ!
ಹಾಲಿವುಡ್ನಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಅವರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಟೈಟಾನಿಕ್’, ‘ಇನ್ಸೆಪ್ಷನ್’, ‘ದಿ ವುಲ್ಫ್ ಆಫ್ ವಾಲ್ಸ್ಟ್ರೀಟ್’ ಮುಂತಾದ ಸಿನಿಮಾಗಳ ಮೂಲಕ ಅವರ ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ಅಂಥ ನಟ ಬಂದು ಊರ್ವಶಿಗೆ ರಾಣಿ ಅಂತ ಹೊಗಳಿದರು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.