Game Changer: ಫ್ಲಾಪ್ ಸಿನಿಮಾ ಪ್ರಸಾರ ಮಾಡಿ ಅರೆಸ್ಟ್ ಆದ ಕೇಬಲ್ ಟಿವಿ ಸಿಬ್ಬಂದಿ
ನಟ ರಾಮ್ ಚರಣ್ ಅವರಿಗೆ 2025ರ ಆರಂಭದಲ್ಲೇ ಸೋಲು ಉಂಟಾಗಿದೆ. ಈ ವರ್ಷ ಸಂಕ್ರಾಂತಿ ಪ್ರಯುಕ್ತ ಅವರು ನಟಿಸಿದ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಯಿತು. ಆದರೆ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ. ಸಿನಿಮಾದ ಸೋಲಿಗೆ ಪೈರಸಿ ಕೂಡ ಕಾರಣ ಆಗಿದೆ.
ಸ್ಟಾರ್ ನಟರ ಸಿನಿಮಾಗಳು ಬಹುಬೇಗ ಪೈರಸಿ ಕಾಟಕ್ಕೆ ಒಳಗಾಗುತ್ತವೆ. ಟಾಲಿವುಡ್ ನಟ ರಾಮ್ ಚರಣ್ ಅವರು ನಟಿಸಿದ ‘ಗೇಮ್ ಚೇಂಜರ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಅಭಿಮಾನಿಗಳು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡಲು ‘ಗೇಮ್ ಚೇಂಜರ್’ ಸೋತಿತು. ಇದರಿಂದಾಗಿ ರಾಮ್ ಚರಣ್ ಅವರ ಅಭಿಮಾನಿಗಳಿಗೆ ಬೇಸರ ಆಯಿತು. ಹೀನಾಯವಾಗಿ ಸೋತ ಈ ಸಿನಿಮಾವನ್ನು ಅನಧಿಕೃತವಾಗಿ ಕೇಬಲ್ ಟಿವಿಯಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.
‘ಗೇಮ್’ ಚೇಂಜರ್’ ಸಿನಿಮಾಗೆ ಮೊದಲ ದಿನವೇ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿತು. ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದ್ದರೂ ಕೂಡ ಜನರಿಗೆ ಇಷ್ಟ ಆಗಲಿಲ್ಲ. ಕಥೆಯಲ್ಲಿ ಲಾಜಿಕ್ ಇಲ್ಲ ಎಂಬ ಕಾರಣಕ್ಕೆ ಟ್ರೋಲ್ ಮಾಡಲಾಯಿತು. ದಿನದಿಂದ ದಿನಕ್ಕೆ ‘ಗೇಮ್ ಚೇಂಜರ್’ ಕಲೆಕ್ಷನ್ ಕುಗ್ಗುತ್ತಲೇ ಹೋಯಿತು. ಇದೇ ಅವಕಾಶವನ್ನು ಬಳಸಿಕೊಂಡು ಕೆಲವರು ಪೈರಸಿ ಮಾಡಿದರು.
‘ಎಪಿ ಲೋಕಲ್ ಟಿವಿ’ ವಾಹಿನಿಯಲ್ಲಿ ‘ಗೇಮ್ ಚೇಂಜರ್’ ಸಿನಿಮಾದ ಪೈರಸಿ ಕಾಪಿ ಪ್ರಸಾರ ಮಾಡಲಾಗಿದೆ. ಕೂಡಲೇ ಚಿತ್ರತಂಡದವರು ಪೊಲೀಸರ ಗಮನಕ್ಕೆ ತಂದರು. ದೂರು ಆಧರಿಸಿ ‘ಎಪಿ ಲೋಕಲ್ ಟಿವಿ’ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಪೈರಸಿಗೆ ಬಳಸಿದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಫ್ಲಾಪ್ ಸಿನಿಮಾವನ್ನು ಟಿವಿಯಲ್ಲಿ ಪ್ರಸಾರ ಮಾಡಿದವರು ಈಗ ಕಂಬಿ ಎಣಿಸುವಂತಾಗಿದೆ.
ಇದನ್ನೂ ಓದಿ: ‘ಗೇಮ್ ಚೇಂಜರ್ ಬಾಕ್ಸ್ ಆಫೀಸ್ ಲೆಕ್ಕ ಸುಳ್ಳು’: ಹಿಗ್ಗಾಮುಗ್ಗ ಜಾಡಿಸಿದ ರಾಮ್ ಗೋಪಾಲ್ ವರ್ಮಾ
ರಿಲೀಸ್ ಆದ ದಿನವೇ ಆನ್ಲೈನ್ನಲ್ಲಿ ‘ಗೇಮ್ ಚೇಂಜರ್’ ಸಿನಿಮಾವನ್ನು ಲೀಕ್ ಮಾಡಲಾಯಿತು. ಇದರಿಂದ ಕೂಡ ಚಿತ್ರದ ಕಲೆಕ್ಷನ್ ಮೇಲೆ ಹೊಡೆತ ಬಿತ್ತು. ಈ ಸಿನಿಮಾವನ್ನು ದಿಲ್ ರಾಜು ಅವರು ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ರಾಮ್ ಚರಣ್ಗೆ ಜೋಡಿಯಾಗಿ ನಟಿಸಿದ್ದಾರೆ. ಇಂಥ ಘಟಾನುಘಟಿಗಳು ಇದ್ದರೂ ಕೂಡ ಸಿನಿಮಾಗೆ ಜನರಿಂದ ಬೆಂಬಲ ಸಿಕ್ಕಿಲ್ಲ. ಅಲ್ಲದೇ ನಿರ್ಮಾಪಕರು ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಕಾರಣದಿಂದಲೂ ಟ್ರೋಲ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.