ಆಸ್ಕರ್ ಅವಾರ್ಡ್ಗೆ (Academy Awards) ಪ್ರತಿವರ್ಷ ಭಾರತದಿಂದ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಈ ಬಾರಿಯೂ ಆ ಪ್ರಕ್ರಿಯೆ ನಡೆದಿದೆ. ‘ಆರ್ಆರ್ಆರ್’, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಹಿಂದಿಕ್ಕಿ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಆಸ್ಕರ್ಗೆ ಎಂಟ್ರಿ ಪಡೆದಿದೆ. ಆಯ್ಕೆ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ‘ಆರ್ಆರ್ಆರ್’ ಚಿತ್ರವನ್ನು ಏಕೆ ಆಯ್ಕೆ ಮಾಡಿಲ್ಲ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ, ‘ಚೆಲ್ಲೋ ಶೋ’ (Chhello Show) ಭಾರತದ ಚಿತ್ರವೇ ಅಲ್ಲ ಎಂಬ ಆರೋಪ ಕೇಳಿಬಂದಿದೆ. ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ (FWICE) ಈ ಆರೋಪವನ್ನು ಮಾಡಿದೆ. ಅಲ್ಲದೆ ಭಾರತದ ಫಿಲ್ಮ್ ಫೆಡರೇಷನ್ಗೆ ಪತ್ರ ಬರೆದು ಆಸ್ಕರ್ ಆಯ್ಕೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಕೋರಿದೆ.
FWICEನ ಅಧ್ಯಕ್ಷ ಬಿಎನ್ ತಿವಾರಿ ಅವರು ಈ ಬಗ್ಗೆ ಇಟೈಮ್ಸ್ ಜತೆ ಮಾತನಾಡಿದ್ದಾರೆ. ‘ಚೆಲ್ಲೋ ಶೋ ಭಾರತದ ಸಿನಿಮಾ ಅಲ್ಲ. ಆಸ್ಕರ್ಗೆ ಮಾಡಿದ ಆಯ್ಕೆ ಪ್ರಕ್ರಿಯೆ ಸರಿ ಇಲ್ಲ. ಆರ್ಆರ್ಆರ್ ಹಾಗೂ ದಿ ಕಾಶ್ಮೀರ್ ಫೈಲ್ಸ್ ರೀತಿಯ ಚಿತ್ರಗಳು ಕೂಡ ಇದ್ದವು. ಸಿದ್ದಾರ್ಥ್ ರಾಯ್ ಕಪೂರ್ ಅವರು ಖರೀದಿಸಿದ ವಿದೇಶಿ ಚಿತ್ರವನ್ನು ಜ್ಯೂರಿಗಳು ಆಯ್ಕೆ ಮಾಡಿದ್ದಾರೆ’ ಎಂದು ಸಿದ್ದಾರ್ಥ್ ಆರೋಪಿಸಿದ್ದಾರೆ.
‘ಮತ್ತೆ ಸಿನಿಮಾ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಈಗಿರುವ ಜ್ಯೂರಿಗಳನ್ನು ತೆಗೆದುಹಾಕಬೇಕು. ಈ ಜ್ಯೂರಿಗಳು ಹಲವು ವರ್ಷಗಳಿಂದ ಇದ್ದಾರೆ. ಇಲ್ಲಿರುವ ಅನೇಕರು ಚಿತ್ರವನ್ನೇ ನೋಡುವುದಿಲ್ಲ. ವೋಟಿಂಗ್ ಮೂಲಕ ಸಿನಿಮಾ ಆಯ್ಕೆ ಮಾಡುತ್ತಾರೆ. ಅತ್ಯಧಿಕ ಚಿತ್ರಗಳನ್ನು ರಿಲೀಸ್ ಮಾಡುವ ಭಾರತ ಚಿತ್ರರಂಗದ ಬಗ್ಗೆ ‘ಚೆಲ್ಲೋ ಶೋ’ ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತದೆ’ ಎಂದಿದ್ದಾರೆ ತಿವಾರಿ.
ಪ್ಯಾನ್ ನಳಿನ್ ಅವರು ‘ಚೆಲ್ಲೋ ಶೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಕೊನೆಯ ಸಿನಿಮಾ ಶೋ’ ಎಂಬುದು ಈ ಶೀರ್ಷಿಕೆಯ ಅರ್ಥ. ನಿರ್ದೇಶಕರು ತಮ್ಮ ಬಾಲ್ಯದ ಅನುಭವಗಳನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ.
‘ಆರ್ಆರ್ಆರ್’ ಸಿನಿಮಾ ಆಸ್ಕರ್ಗೆ ಕಾಲಿಡಬೇಕು ಎಂಬುದು ಅನೇಕರ ಆಸೆ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ‘ಆರ್ಆರ್ಆರ್’ ಚಿತ್ರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಅನೇಕರು ಆಂದೋಲನ ಶುರು ಮಾಡಿದ್ದರು. ‘ಆಸ್ಕರ್ಗೆ ಆಯ್ಕೆ ಆಗಲು ಸಿನಿಮಾದ ಮನರಂಜನೆ, ಮಾಸ್ ಗುಣ, ಮಾರ್ಕೆಟಿಂಗ್, ಮೇಕಿಂಗ್, ಚಿತ್ರದ ಕಲೆಕ್ಷನ್ ಮುಖ್ಯವಲ್ಲ. ಕಥೆ ಮುಖ್ಯವಾಗುತ್ತದೆಯೇ ಹೊರತು ಜನಪ್ರಿಯತೆ ಅಲ್ಲ’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಇತ್ತೀಚೆಗೆ ಹೇಳಿದ್ದರು.