ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾದ ಮೊದಲ ಎಐ ಸಿನಿಮಾ ಫ್ಲಾಪ್; ಕೇವಲ 1 ಕೋಟಿ ರೂ. ಕಲೆಕ್ಷನ್
ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿ 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಚೀನಾದ ಮೊದಲ ಎಐ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ಕೇವಲ 1.5 ಕೋಟಿ ರೂಪಾಯಿ ಗಳಿಸಿದೆ. ಆದರೆ ಗೇಲಿಗೊಳಗಾಗಿದ್ದ ಮತ್ತೊಂದು ಸಣ್ಣ ಚಿತ್ರವು 80 ಕೋಟಿ ರೂಪಾಯಿ ಗಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಬಾಕ್ಸ್ ಆಫೀಸ್ ಗಳಿಕೆಯ ಲೆಕ್ಕಾಚಾರಗಳು ಯಾವಾಗಲೂ ಅನಿರೀಕ್ಷಿತವಾಗಿರುತ್ತವೆ. ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡ ನಟರಿಲ್ಲದ ಚಿತ್ರವೊಂದು ಭಾರೀ ಯಶಸ್ಸು ಗಳಿಸಬಹುದು. ಅದೇ ಸಮಯದಲ್ಲಿ ಕೋಟಿ ಕೋಟಿ ವೆಚ್ಚದ ಸೂಪರ್‌ಸ್ಟಾರ್‌ಗಳ ಚಿತ್ರಗಳು ಹೀನಾಯವಾಗಿ ಸೋಲಬಹುದು. ಇಂತಹ ಹಲವು ಉದಾಹರಣೆಗಳನ್ನು ಚಿತ್ರರಂಗ ಈ ಹಿಂದೆ ಸಾಕಷ್ಟು ಬಾರಿ ಕಂಡಿದೆ.
ಚೀನಾದಲ್ಲಿ ಇತ್ತೀಚೆಗೆ ತೆರೆಕಂಡ ‘ಸಾನ್‌ಕ್ಸಿಂಗ್‌ಡುಯಿ: ಫ್ಯೂಚರ್ ಪಾಸ್ಟ್’ ಚಿತ್ರಕ್ಕೂ ಇದೇ ಸ್ಥಿತಿ ಬಂದೊದಗಿದೆ. ಬೋನಾ ಫಿಲ್ಮ್ ಗ್ರೂಪ್ ಸಂಸ್ಥೆಯು ಸುಮಾರು 13 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಿಸಿತ್ತು. ಕಳೆದ ಅಕ್ಟೋಬರ್ 23 ರಂದು ಈ ಚಿತ್ರವು ಚೀನಾದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಮೊದಲ ಆರು ದಿನಗಳಲ್ಲಿ ಈ ಚಿತ್ರ ಗಳಿಸಿದ್ದು ಕೇವಲ 1.5 ಕೋಟಿ ರೂಪಾಯಿ ಮಾತ್ರ.
ಈ ಚಿತ್ರದ ಅತ್ಯಂತ ಪ್ರಮುಖ ಹಾಗೂ ವಿಶಿಷ್ಟ ಅಂಶವೆಂದರೆ ಇದನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಬಳಸಿ ನಿರ್ಮಿಸಲಾಗಿತ್ತು. ನಿರ್ದೇಶಕ ಯುವೆ ಮಿಂಗ್ ಅವರ ಈ ವಿನೂತನ ಪ್ರಯೋಗಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರೀ ಬಂಡವಾಳ ಹೂಡಿದ್ದ ನಿರ್ಮಾಣ ಸಂಸ್ಥೆಗೆ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ನಿರಾಸೆ ಎದುರಾಗಿದೆ.
ಮತ್ತೊಂದೆಡೆ ಆರಂಭದಲ್ಲಿ ಪ್ರೇಕ್ಷಕರಿಂದ ತೀವ್ರ ಗೇಲಿಗೊಳಗಾಗಿದ್ದ ‘ನ್ಯೂ ಲೈ’ ಎಂಬ ಚೀನೀ ಸಿನಿಮಾ ಅದ್ಭುತ ಸಾಧನೆ ಮಾಡಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ತುಣುಕುಗಳು ವೈರಲ್ ಆಗಿದ್ದು ಚಿತ್ರದ ಅದೃಷ್ಟವನ್ನೇ ಬದಲಾಯಿಸಿತು.
ಇದನ್ನೂ ಓದಿ: ಅನಿರುದ್ಧ್-ಕಾವ್ಯಾ ಮಾರನ್ ವಿವಾಹಕ್ಕೆ ವಿಶೇಷ ಥೀಮ್; ವಿವರಿಸಿದ ಡಿಸೈನರ್ ರಂಜಿನಿ
ಸಾಮಾಜಿಕ ಜಾಲತಾಣದ ವೈರಲ್ ವೀಡಿಯೊಗಳನ್ನು ನೋಡಿ ಜನರು ಚಿತ್ರಮಂದಿರಗಳತ್ತ ಹರಿದುಬಂದರು. ಈ ಮೂಲಕ ಅತ್ಯಂತ ಕಡಿಮೆ ನಿರೀಕ್ಷೆ ಹೊಂದಿದ್ದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ಸಂಚಲನ ಮೂಡಿಸಿತು. ತಂತ್ರಜ್ಞಾನಕ್ಕಿಂತಲೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ಕಥಾಹಂದರವೇ ಗೆಲುವಿನ ಸೂತ್ರ ಎಂಬುದನ್ನು ಈ ಎರಡು ಸಿನಿಮಾಗಳು ಸಾಬೀತುಪಡಿಸಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




