ಬ್ಲಾಕ್​ ಆಗಲಿವೆ ಸಿನಿಮಾ ಪೈರಸಿ ವೆಬ್​ಸೈಟ್​ಗಳು; ಕೋಟಿಗಟ್ಟಲೆ ದಂಡ ಹಾಕಲು ಮುಂದಾದ ಕೇಂದ್ರ ಸರ್ಕಾರ

Cinematograph (Amendment) Bill 2023: ‘ಸಾವಿರ ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿನಿಮಾ ಸಿದ್ಧವಾಗಿದ್ದರೆ, ಅದನ್ನು ಪೈರಸಿ ಮಾಡುವವರಿಗೆ 50 ಕೋಟಿ ರೂಪಾಯಿವರೆಗೆ ದಂಡ ಹಾಕಲಾಗುತ್ತದೆ’ ಎಂದು ಅನುರಾಗ್​ ಠಾಕೂರ್​ ಅವರು ತಿಳಿಸಿದ್ದಾರೆ.

ಬ್ಲಾಕ್​ ಆಗಲಿವೆ ಸಿನಿಮಾ ಪೈರಸಿ ವೆಬ್​ಸೈಟ್​ಗಳು; ಕೋಟಿಗಟ್ಟಲೆ ದಂಡ ಹಾಕಲು ಮುಂದಾದ ಕೇಂದ್ರ ಸರ್ಕಾರ
ಅನುರಾಗ್​ ಠಾಕೂರ್​, ಪೈರಸಿ ಸಾಂದರ್ಭಿಕ ಚಿತ್ರ

Updated on: Aug 01, 2023 | 12:16 PM

ಚಿತ್ರರಂಗದವರಿಗೆ ಪೈರಸಿ (Piracy) ಎಂಬುದು ತಲೆನೋವಿನ ವಿಚಾರ. ಕೋಟಿಗಟ್ಟಲೆ ಬಂಡವಾಳ ಹಾಕಿ ಸಿನಿಮಾ ಮಾಡಿದರೆ ಅದನ್ನು ಕಳ್ಳರು ಪೈರಸಿ ಮೂಲಕ ಹರಿಬಿಡುತ್ತಾರೆ. ಅದನ್ನೇ ಉದ್ಯೋಗವಾಗಿಸಿಕೊಂಡಿರುವ ಹಲವಾರು ಪೈರಸಿ ವೆಬ್​ಸೈಟ್​ಗಳು ಚಾಲ್ತಿಯಲ್ಲಿ ಇವೆ. ಪೈರಸಿ ತಡೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಚಿತ್ರರಂಗದವರ ಬೇಡಿಕೆ. ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಇನ್ಮುಂದೆ ಪೈರಸಿ ಮಾಡುವವರಿಗೆ ಕೋಟಿಗಟ್ಟಲೆ ದಂಡ ಹಾಕಲು ನಿರ್ಧರಿಸಲಾಗಿದೆ. ಅಲ್ಲದೇ ಪೈರಸಿ ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡಲು ತೀರ್ಮಾನಿಸಲಾಗಿದೆ. ಲೋಕಸಭೆಯಲ್ಲಿ ‘ಸಿನಿಮಾಟೋಗ್ರಾಫ್​ ಬಿಲ್​ 2023’ (Cinematograph Bill 2023) ಮಂಡಿಸುವ ವೇಳೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ (Anurag Thakur) ಈ ವಿಷಯ ತಿಳಿಸಿದ್ದಾರೆ.

‘ಈ ಕಾಯ್ದೆ ಮೂಲಕ ನಾವು ಪೈರಸಿ ತಡೆಯುತ್ತೇವೆ. ಇದು ಚಿತ್ರರಂಗದವರ ಬಹುಕಾಲದ ಬೇಡಿಕೆ ಆಗಿತ್ತು’ ಎಂದು ಅನುರಾಗ್​ ಠಾಕೂರ್​ ಅವರು ಹೇಳಿದ್ದಾರೆ. ಯಾವುದೇ ಸಿನಿಮಾವನ್ನು ಪೈರಸಿ ಮಾಡಿದರೆ ಈ ಸಿನಿಮಾ ನಿರ್ಮಾಣದ ಶೇಕಡ 5ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಸಾವಿರ ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿನಿಮಾ ಸಿದ್ಧವಾಗಿದ್ದರೆ, ಅದನ್ನು ಪೈರಸಿ ಮಾಡುವವರಿಗೆ 50 ಕೋಟಿ ರೂಪಾಯಿವರೆಗೆ ದಂಡ ಹಾಕಲಾಗುತ್ತದೆ. ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಅನುರಾಗ್​ ಠಾಕೂರ್​ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್​’ನ ಪೈರಸಿ ಕಾಪಿ ತೋರಿಸಲು ಮುಂದಾದ ರಾಜಕೀಯ ನಾಯಕರು; ವಿವೇಕ್​ ಅಗ್ನಿಹೋತ್ರಿ ಅಸಮಾಧಾನ

ಈ ಕಾಯ್ದೆಯಿಂದ ರಾಜ್ಯ ಸರ್ಕಾರಗಳಿಗೂ ಹೆಚ್ಚಿನ ಅಧಿಕಾರ ಸಿಗಲಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ರಾಜ್ಯ ಸರ್ಕಾರಗಳು ಪೈರಸಿ ಸಿನಿಮಾ ವಿತರಿಸುವ ವೆಬ್​ಸೈಟ್​ಗಳನ್ನು ಮತ್ತು ಯುಆರ್​ಎಲ್​ಗಳನ್ನು ಬ್ಲಾಕ್​ ಮಾಡಬಹುದು. ಮೊದಲು ಚಿತ್ರಮಂದಿರದಲ್ಲಿ ಕ್ಯಾಮೆರಾಗಳ ಮೂಲಕ ಪೈರಸಿ ಮಾಡಲಾಗುತ್ತಿತ್ತು. ಈಗ ಪೈರಸಿ ವ್ಯಾಪ್ತಿ ಹಿರಿದಾಗಿದೆ. ಬೇರೆ ಬೇರೆ ತಂತ್ರಜ್ಞಾನ ಬಳಸಿ ಪೈರಸಿ ಮಾಡಲಾಗುತ್ತಿದೆ. ಅದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಒಂದು ಲಿಂಕ್​ ತೆಗೆದರೆ, 10 ಲಿಂಕ್​ ಅಪ್​ಲೋಡ್​ ಆಗ್ತಾ ಇತ್ತು; ಪೈರಸಿ ಬಗ್ಗೆ ‘ಏಕ್​ ಲವ್​ ಯಾ’ ಟೀಂ ಮಾತು

ಸಿನಿಮಾಗಳಿಗೆ ಸೆನ್ಸಾರ್​ ಮಂಡಳಿ ನೀಡುವ ಪ್ರಮಾಣಪತ್ರದ ವರ್ಗೀಕರಣದಲ್ಲೂ ಕೆಲವೊಂದು ಬದಲಾವಣೆಗಳು ಆಗಲಿವೆ. ‘ಯುಎ 7+’, ‘ಯುಎ 13+’, ‘ಯುಎ 16+’ ಎಂಬ ಮೂರು ರೀತಿಯಲ್ಲಿ ಪ್ರಮಾಣಪತ್ರ ನೀಡಲಾಗುವುದು. ಕಿರುತೆರೆ ಮತ್ತು ಇತರೆ ಮಾಧ್ಯಮಗಳಲ್ಲಿ ಪ್ರದರ್ಶನ ಆಗುವಾಗ ಪ್ರತ್ಯೇಕವಾಗಿ ಪ್ರಮಾಣಪತ್ರ ನೀಡಲು ಸೆನ್ಸಾರ್​ ಮಂಡಳಿಗೆ ಅವಕಾಶ ಕಲ್ಪಿಸಲಾಗುವುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:26 am, Tue, 1 August 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us