
ವೀಕೆಂಡ್ಗಳಲ್ಲಿ ಅಭೂತಪೂರ್ವ ಗಳಿಕೆ ಮಾಡಿ ಬೀಗಿದ್ದ ರಜನಿಕಾಂತ್ ನಟನೆಯ ‘ಕೂಲಿ’ (Coolie) ಹಾಗೂ ಹೃತಿಕ್ ರೋಷನ್-ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನ ‘ವಾರ್ 2’ ಸಿನಿಮಾಗಳು ವಾರದ ದಿನ ಮುಗ್ಗರಿಸಿವೆ. ಈ ಎರಡೂ ಸಿನಿಮಾಗಳ ಕಲೆಕ್ಷನ್ ವಾರದ ಮೊದಲ ದಿನವಾದ ಸೋಮವಾರ ತೀವ್ರ ತರವಾದ ಕುಸಿತ ಕಂಡಿದೆ. ವೀಕೆಂಡ್‌ನಲ್ಲಿ ಗಳಿಕೆ ಮತ್ತೆ ಹೆಚ್ಚುವ ನಿರೀಕ್ಷೆ ಇದೆ. ಗಣೇಶ ಚತುರ್ಥಿಯ ರಜೆಗಳು ಕೂಡ ಸಹಕಾರಿ ಆಗುವ ಸಾಧ್ಯತೆ ಇದೆ.
ರಜನಿಕಾಂತ್ ನಟನೆಯ ಕೂಲಿ ಸಿನಿಮಾ ನಾಲ್ಕು ದಿನಕ್ಕೆ ಬರೋಬ್ಬರಿ 194 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಸೋಮವಾರದ (ಆಗಸ್ಟ್ 18) ಕಲೆಕ್ಷನ್ ಹೊರ ಬಿದ್ದಿದೆ. ಈ ಚಿತ್ರ ಸರಿ ಸುಮಾರು 12 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರ ಈ ಚಿತ್ರ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 35 ಕೋಟಿ ರೂಪಾಯಿ. ಇನ್ನು ಮುಂದಿನ ದಿನಗಳಲ್ಲಿ (ಶುಕ್ರವಾರದವರೆಗೆ) ಸಿನಿಮಾದ ಗಳಿಕೆ ಒಂದಂಕಿಗೆ ಇಳಿದರೂ ಅಚ್ಚರಿ ಏನಿಲ್ಲ.
ಸದ್ಯ ‘ಕೂಲಿ’ ಸಿನಿಮಾದ ಕಲೆಕ್ಷನ್ 206.5 ಕೋಟಿ ರೂಪಾಯಿ ಆಗಿದೆ. ವೀಕೆಂಡ್‌ನಲ್ಲಿ ಕಲೆಕ್ಷನ್ ಉತ್ತಮ ರೀತಿಯಲ್ಲಿ ಆದರೆ ಸಿನಿಮಾದ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ 300 ಕೋಟಿ ರೂಪಾಯಿ ಆಗಲಿದೆ. ವಿಶ್ವ ಮಟ್ಟದಲ್ಲಿ ಚಿತ್ರ 600 ಕೋಟಿ ರೂಪಾಯಿ ಸಮೀಪಿಸಲಿದಿಯೇ ಎನ್ನುವ ಪ್ರಶ್ನೆ ಮೂಡಿದೆ.
‘ವಾರ್ 2’ ಸಿನಿಮಾದ ಗಳಿಕೆ ಸೋಮವಾರ ತೀವ್ರತರ ಕುಸಿತ ಕಂಡಿದ್ದು, ಒಂದಂಕಿ ತಲುಪಿದೆ. ಈ ಸಿನಿಮಾ ಸೋಮವಾರ 8.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಭಾನುವಾರ 32 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಚಿತ್ರದ ಭಾರತದ ಕಲೆಕ್ಷನ್ 183.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ಕೂಲಿ ಸಿನಿಮಾದಲ್ಲಿ ಮಿಂಚಿದ ರಚಿತಾ ರಾಮ್: ಸಿಕ್ತು ಮೆಚ್ಚುಗೆ
ಎರಡೂ ಸಿನಿಮಾಗಳು ವಿಮರ್ಶೆಯಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿವೆ. ಆದರೂ ಒಂದು ಹಂತದಲ್ಲಿ ಸಿನಿಮಾ ಗಳಿಕೆ ಮಾಡುತ್ತಿದೆ. ಚಿತ್ರಕ್ಕೆ ಹಾಕಿದ ಬಂಡವಾಳ ಅನಾಯಾಸವಾಗಿ ನಿರ್ಮಾಪಕರ ಕೈ ಸೇರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:56 am, Tue, 19 August 25