ಸೋದರರ ನಡುವೆ ಭುಗಿಲೆದ್ದ ವಿವಾದ, ಸನ್ ನೆಟ್ವರ್ಕ್ಸ್ ಸೇರಿದ್ಯಾರಿಗೆ?
Sun Networks: ದೇಶದ ಯಶಸ್ವಿ ಮನರಂಜನಾ ಸಂಸ್ಥೆಗಳಲ್ಲಿ ಒಂದು ಸನ್ ನೆಟ್ವರ್ಕ್ಸ್, 37 ಟಿವಿ ಚಾನೆಲ್, 48 ಎಫ್ಎಂ, ಸ್ಟುಡಿಯೋ, ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ಸನ್ ನೆಟ್ವರ್ಕ್ಸ್ ಹೊಂದಿದೆ. 24 ಸಾವಿರ ಕೋಟಿ ಮೌಲ್ಯದ ಈ ಸಂಸ್ಥೆಯ ಮಾಲೀಕತ್ವ ಈಗ ವಿವಾದದಲ್ಲಿ ಸಿಲುಕಿದೆ. ಅಣ್ಣ-ತಮ್ಮಂದಿರ ನಡುವೆ ಸನ್ ನೆಟ್ವರ್ಕ್ಸ್ ಮಾಲೀಕತ್ವಕ್ಕೆ ಸಮರ ಇದೀಗ ಆರಂಭವಾಗಿದೆ. ವಿವಾದದ ವಿವರ ಇಲ್ಲಿದೆ...

ಉದಯ ಟಿವಿ, ಸನ್ ಟಿವಿ ಸೇರಿದಂತೆ ಬರೋಬ್ಬರಿ 37 ಟಿವಿ ಚಾನೆಲ್, 48 ಎಫ್ಎಂ, ಸ್ಟುಡಿಯೋ, ಸಿನಿಮಾ ನಿರ್ಮಾಣ ಸಂಸ್ಥೆ ಹೀಗೆ ಮನೊರಂಜನಾ ಕ್ಷೇತ್ರದ ಹಲವು ವಿಭಾಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸನ್ ನೆಟ್ವರ್ಕ್ಸ್ ದೇಶದ ಯಶಸ್ವಿ ಮನರಂಜನಾ ಸಂಸ್ಥೆಗಳಲ್ಲಿ ಒಂದು. ಸನ್ ನೆಟ್ವರ್ಕ್ಸ್ನ ಮಾಲೀಕ ಕಲಾನಿಧಿ ಮಾರನ್ ಅವರು ದೇಶದ ಶ್ರೀಮಂತರಲ್ಲಿ ಒಬ್ಬರು. ಇದೀಗ ಕಲಾನಿಧಿ ಮಾರನ್ ಅವರ ಸಹೋದರ, ಡಿಎಂಕೆ ಮುಖಂಡ, ಮಾಜಿ ಕೇಂದ್ರ ಸಚಿವ ದಯಾನಿದಿ ಮಾರನ್ ಅವರು ಕಲಾನಿಧಿ ಮಾರನ್ ಅವರಿಗೆ ನೊಟೀಸ್ ನೀಡಿದ್ದು, ಅಕ್ರಮವಾಗಿ ಸನ್ ನೆಟ್ವರ್ಕ್ಸ್ ಅನ್ನು ಜಪ್ತಿ ಮಾಡಿದ್ದು, ಈ ಕೂಡಲೇ ಸನ್ ನೆಟ್ವರ್ಕ್ಸ್ ಅನ್ನು ಸರಿಯಾದ ಮಾಲೀಕರಿಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
ದಯಾನಿದಿ ಮಾರನ್, ಕಲಾನಿಧಿ ಮಾರನ್ಗೆ ಕಳಿಸಿರುವ ನೊಟೀಸ್ನಲ್ಲಿ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಅನಧಿಕೃತವಾಗಿ ಸನ್ ನೆಟ್ವರ್ಕ್ಸ್ ಅನ್ನು ಕುಟುಂಬದವರಿಂದ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 2003 ಕ್ಕೆ ಮುಂಚೆ ಅಂದರೆ ದಯಾನಿಧಿ ಹಾಗೂ ಕಲಾನಿಧಿ ಅವರ ತಂದೆ ಮುರಸೋಲಿ ಮಾರನ್ ನಿಧನ ಹೊಂದುವ ಮುಂಚೆ ಸನ್ ನೆಟ್ವರ್ಕ್ಸ್ನ ಒಂದು ಷೇರು ಸಹ ಕಲಾನಿಧಿ ಬಳಿ ಇರಲಿಲ್ಲ. ಅದಕ್ಕೆ ಮುಂಚೆ ಕಲಾನಿಧಿ ಮಾರನ್ ಸುಮಂಗಲಿ ಪಬ್ಲಿಕೇಷನ್ಸ್ನಲ್ಲಿ ಕೇವಲ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಆದರೆ ತಂದೆ ಕೋಮಾ ಸ್ಥಿತಿಗೆ ಹೋದ ಕೂಡಲೇ ಕಂಪೆನಿಯ ದಾಖಲೆಗಳಲ್ಲಿ ಬದಲಾವಣೆ ಮಾಡಿ ತಾನು 60% ಷೇರು ಹೊಂದಿರುವುದಾಗಿ ದಾಖಲು ಮಾಡಿಕೊಂಡ ಎಂದಿದ್ದಾರೆ.
ಇದನ್ನೂ ಓದಿ:ಲಂಚದ ಆರೋಪ ಸಮರ್ಥಿಸಿದ ಬಿಆರ್ ಪಾಟೀಲ್: ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಅಕ್ರಮದ ರಹಸ್ಯ
ಈಗ ಸನ್ ನೆಟ್ವರ್ಕ್ಸ್ ಆಗಿರುವ ಸಂಸ್ಥೆ ಈ ಮೊದಲು ಸುಮಂಗಲಿ ಪಬ್ಲಿಕೇಷನ್ಸ್ ಆಗಿತ್ತು. ಆ ಸಂಸ್ಥೆ ಕರುಣಾನಿಧಿ ಅವರ ಮೊದಲ ಪತ್ನಿ ಎಂಕೆ ದಯಾಳು ಹಾಗೂ ಮುರಸೋಳಿ ಮಾರನ್ ಅವರು ಪಾತ್ರವೇ ಮಾಲೀಕರಾಗಿದ್ದರು. 2003 ರಲ್ಲಿ ಮುರಸೋಳಿ ನಿಧನದ ಬಳಿಕ ಕಲಾನಿಧಿ ಮಾರನ್ ಅವರು ಯಾರದ್ದೇ ಒಪ್ಪಿಗೆ ಇಲ್ಲದೆ ತಮ್ಮ ಷೇರು ಮೌಲ್ಯವನ್ನು 60% ಏರಿಸಿಕೊಂಡರು. ಅದಾದ ಬಳಿಕವೂ ಸಹ ಹಲವರ ಷೇರುಗಳನ್ನು ಅಡ್ಡದಾರಿಯಿಂದ ಖರೀದಿ ಮಾಡಿ ಈಗ 75% ಷೇರು ಹೊಂದಿದ್ದಾರೆ. ಆದರೆ ಇದ್ಯಾವುದನ್ನೂ ನಿಯಮಾನುಸಾರ ಹಣ ಕೊಟ್ಟು ಖರೀದಿ ಮಾಡಿಲ್ಲ ಎಂದು ದಯಾನಿದಿ ಮಾರನ್ ಆರೋಪ ಮಾಡಿದ್ದಾರೆ.
ಕಲಾನಿಧಿ ಮಾರನ್ ಅವರ ಪತ್ನಿ ಕಾವೇರಿ ಮಾರನ್ ಹಾಗೂ ಇನ್ನೂ 12 ಮಂದಿಗೆ ನೊಟೀಸ್ ಅನ್ನು ದಯಾನಿಧಿ ಮಾರನ್ ಅವರು ಕಳಿಸಿದ್ದು, ಈ ಕೂಡಲೇ ಸಂಸ್ಥೆಯ ಹಕ್ಕುಗಳನ್ನು ಅದರ ಮೂಲ ಮಾಲೀಕರಿಗೆ ಮರಳಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಯಾನಿಧಿ ಮಾರನ್ ಎಚ್ಚರಿಸಿದ್ದಾರೆ. ಸನ್ ನೆಟ್ವರ್ಕ್ಸ್ ಒಟ್ಟು ಮೌಲ್ಯ ಈಗ 24 ಸಾವಿರ ಕೋಟಿ ರೂಪಾಯಿಗಳಾಗಿದ್ದು, ಕಲಾನಿಧಿ ಮಾರನ್ ಅವರ ಆಸ್ತಿ ಮೌಲ್ಯ ಲಕ್ಷ ಕೋಟಿಗೂ ಹೆಚ್ಚಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ