Dhanush: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೊಬೈಲ್​ಗೆ ಬಂತು ಧನುಷ್​ ಸಿನಿಮಾ ಕರ್ಣನ್​!

Karnan Movie Leak: ಲಾಕ್​ಡೌನ್​ ಬಳಿಕ ತೆರೆಕಂಡ ಎಲ್ಲ ದೊಡ್ಡ ಸಿನಿಮಾಗಳು ಕೂಡ ಪೈರಸಿ ಹಾವಳಿಗೆ ಬಲಿಯಾಗಿವೆ. ಈಗ ಧನುಷ್​ ನಟನೆಯ ಕರ್ಣನ್​ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.

  • TV9 Web Team
  • Published On - 13:08 PM, 9 Apr 2021
Dhanush: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೊಬೈಲ್​ಗೆ ಬಂತು ಧನುಷ್​ ಸಿನಿಮಾ ಕರ್ಣನ್​!
ಕರ್ಣನ್​ ಸಿನಿಮಾದಲ್ಲಿ ಧನುಷ್​

ಕೆಲವೇ ದಿನಗಳ ಹಿಂದೆ ನಟ ಧನುಷ್​ ಅವರು ‘ಅಸುರನ್​’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಬೀಗಿದ್ದರು. ಅದರ ಬೆನ್ನಲ್ಲೇ ಅವರ ಹೊಸ ಸಿನಿಮಾ ‘ಕರ್ಣನ್​’ ಬಿಡುಗಡೆ ಆಗಿದೆ. ಇಂದು (ಏ.9) ತೆರೆಕಂಡ ಈ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಅಚ್ಚರಿ ಎಂದರೆ, ಸಿನಿಮಾ ತೆರೆಕಂಡ ಕೆಲವೇ ಗಂಟೆಗಳಲ್ಲಿ ಇದನ್ನು ಕದಿಯಲಾಗಿದೆ! ಹಲವು ಪೈರಸಿ ಜಾಲತಾಣಗಳಲ್ಲಿ ಈ ಚಿತ್ರ ಡೌನ್​ಲೋಡ್​ಗೆ ಲಭ್ಯವಿದೆ.

ಎಲ್ಲ ಭಾಷೆಯ ಚಿತ್ರರಂಗಗಳೂ ಈಗ ಸಂಕಷ್ಟದಲ್ಲಿವೆ. ಕೊರೊನಾ ಭೀತಿಯಿಂದಾಗಿ ಕೆಲವು ವರ್ಗದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಅದರ ಜೊತೆಗೆ ಶೇ.50 ಆಸನ ಮಿತಿ ಆದೇಶ ಜಾರಿ ಆಗಿದೆ. ಈ ಸಂಕಷ್ಟಗಳ ನಡುವೆ ಒಂದು ಸಿನಿಮಾ ಗೆಲ್ಲುವುದು ಸುಲಭವಲ್ಲ. ಅಂಥದ್ದರಲ್ಲಿ ‘ಕರ್ಣನ್​’ ನಿರ್ಮಾಪಕರು ಧೈರ್ಯ ತೋರಿಸಿ ಈ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಆದರೆ ಅವರ ಶ್ರಮವೆಲ್ಲ ಈಗ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ಪೈರಸಿ ಎಂಬುದು ಹೊಸ ಸಂಕಷ್ಟವೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪೈರಸಿ ಕಾಟ ಮಿತಿ ಮೀರಿದೆ. ಕಾನೂನು ಎಷ್ಟೇ ಬಿಗಿಯಾಗಿದ್ದರೂ, ನಿರ್ಮಾಪಕರು ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೂಡ ಅದಕ್ಕೆ ಎರಡರಷ್ಟು ಚಾಲಾಕಿತನದೊಂದಿಗೆ ಪೈರಸಿ ಮಾಡಲಾಗುತ್ತಿದೆ. ಲಾಕ್​ಡೌನ್​ ಬಳಿಕ ತೆರೆಕಂಡ ಎಲ್ಲಾ ದೊಡ್ಡ ಸಿನಿಮಾಗಳು ಕೂಡ ಈ ಹಾವಳಿಗೆ ಬಲಿಯಾಗಿವೆ. ಈಗ ಧನುಷ್​ ನಟನೆ ಕರ್ಣನ್​ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.

ಕನ್ನಡದಲ್ಲಿ ತೆರೆಕಂಡ ರಾಬರ್ಟ್​, ಪೊಗರು, ಯುವರತ್ನ ಚಿತ್ರಗಳು ಕೂಡ ಪೈರಸಿಗೆ ತುತ್ತಾದವು. ರೂಹಿ, ದಿ ಬಿಗ್​ ಬುಲ್​, ಮುಂಬೈ ಸಾಗಾ ಮುಂತಾದ ಬಾಲಿವುಡ್​ ಸಿನಿಮಾಗಳಿಗೂ ಈ ಕಾಟ ತಪ್ಪಿಲ್ಲ. ಹಾಲಿವುಡ್​ನ ಗಾಡ್ಜಿಲಾ ವರ್ಸಸ್​ ಕಾಂಗ್​ ಸಹ ಪೈರಸಿ ವೆಬ್​ಸೈಟ್​ಗಳಲ್ಲಿ ಡೌನ್​ಲೋಡ್​ಗೆ ಲಭ್ಯವಿದೆ. ಈಗ ಕರ್ಣನ್​ ಚಿತ್ರವನ್ನು ಕಳ್ಳರು ಟಾರ್ಗೆಟ್​ ಮಾಡಿದ್ದಾರೆ. ತಮಿಳ್​ ರಾಕರ್ಸ್​ ಮುಂತಾದ ವೆಬ್​ಸೈಟ್​ಗಳಲ್ಲಿ ಎಚ್​​ಡಿ ಕಾಪಿ ಸಿಗುತ್ತಿದೆ. ಇದರಿಂದ ಧನುಷ್​ ಚಿತ್ರಕ್ಕೆ ಬಾಕ್ಸ್​ ಆಫೀಸ್​ನಲ್ಲಿ ತೀವ್ರ ಹಿನ್ನಡೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಯುವರತ್ನಕ್ಕೆ ಮೊದಲ ದಿನವೇ ಶುರುವಾಯ್ತು ಪೈರಸಿ ಕಾಟ; ಎಲ್ಲೇ ಪೈರಸಿ ಲಿಂಕ್ ಸಿಕ್ಕರೂ ರಿಪೋರ್ಟ್ ಮಾಡಿ ಎಂದ ಚಿತ್ರತಂಡ

ಸಿಕ್ಕಿಬಿದ್ದ ‘ರಾಬರ್ಟ್​’ ಪೈರಸಿ ಮಾಡುತ್ತಿದ್ದ ವ್ಯಕ್ತಿ! ‘ದುಡ್ಡು ಕೊಟ್ಟರೆ ಹೊಸ ಕಾಪಿ ಶೇರ್ ಮಾಡ್ತೀನಿ’ ಎನ್ನುತ್ತಿದ್ದ ಆರೋಪಿ!

 

(Dhanush starrer Karnan Movie Leaked Online and Full HD film available for download)