‘ಭಾರೀ ಮುಜುಗರ ತಂದಿತ್ತು ಆ ವಿಚಾರ’; ಸ್ಲಿಮ್ ಆದ ಹಿಂದಿನ ಕಥೆ ಹೇಳಿದ ಖುಷ್ಬೂ
ಖುಷ್ಬೂ ಅವರಿಗೆ ಈ ವಯಸ್ಸಿನಲ್ಲಿ ಫಿಟ್ನೆಸ್ ಬಗ್ಗೆ ಇಷ್ಟೊಂದು ಆಸಕ್ತಿ ಬಂದಿದ್ದು ಏಕೆ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಕುಟುಂಬದಲ್ಲಿ ಅವರಿಗೆ ಮುಜುಗರ ಎದುರಾಗಿತ್ತು. ಈ ಕಾರಣಕ್ಕೆ ಫಿಟ್ ಆಗಲು ಪಣತೊಟ್ಟರು.
ಖುಷ್ಬೂ (Khushbu ) ಅವರಿಗೆ ಈಗ ವಯಸ್ಸು 51. ಈ ವಯಸ್ಸಿನಲ್ಲೂ ಅವರು ಯುವತಿಯರನ್ನೂ ನಾಚಿಸುವಂತಹ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಆಗೊಂದು, ಈಗೊಂದು ಸಿನಿಮಾ ಮಾಡುವ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಕೆಲ ವರ್ಷಗಳ ಕಾಲ ಅವರು ಫಿಟ್ನೆಸ್ (Fitness) ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ಫಿಟ್ನೆಸ್ಗೆ ಆದ್ಯತೆ ನೀಡುತ್ತಿದ್ದಾರೆ. ಸಖತ್ ಸ್ಲಿಮ್ ಆಗಿರೋ ಫೋಟೋ ಹಂಚಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಖುಷ್ಬೂ ಅವರಿಗೆ ಈ ವಯಸ್ಸಿನಲ್ಲಿ ಫಿಟ್ನೆಸ್ ಬಗ್ಗೆ ಇಷ್ಟೊಂದು ಆಸಕ್ತಿ ಬಂದಿದ್ದು ಏಕೆ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಕುಟುಂಬದಲ್ಲಿ ಅವರಿಗೆ ಮುಜುಗರ ಎದುರಾಗಿತ್ತು. ಈ ಕಾರಣಕ್ಕೆ ಫಿಟ್ ಆಗಲು ಪಣತೊಟ್ಟರು.
‘ನನ್ನ ಪತಿ ಸುಂದರ್ ಅವರು ಮೂರು ಸಿನಿಮಾಗಳಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ಹೀಗಾಗಿ, ಅವರು ಜಿಮ್ನಲ್ಲಿ ಕಸರತ್ತು ನಡೆಸಿದ್ದರು. ನನ್ನ ಮಕ್ಕಳು ಕೂಡ ಅಷ್ಟೇ, ಅವರು ಫಿಟ್ನೆಸ್ಗೆ ಆದ್ಯತೆ ನೀಡುತ್ತಾರೆ. ನನ್ನ ಪತಿ, ಮಕ್ಕಳು ಮೂವರು ಎತ್ತರವಿದ್ದಾರೆ. ಅವರಿಗೆ ಹೋಲಿಸಿದರೆ ನಾನು ದಪ್ಪ ಮತ್ತು ಎತ್ತರ ಕಡಿಮೆ. ಇದು ನನಗೆ ಕೊಂಚ ಮುಜುಗರ ತಂದಿತ್ತು. ಹೀಗಾಗಿ, ನನಗೂ ಸ್ಲಿಮ್ ಆಗಬೇಕು ಎಂದು ಅನಿಸಿತು. ನಾನು ಯೋಗ ಹಾಗೂ ವ್ಯಾಯಾಮ ಮಾಡೋಕೆ ಪ್ರಾರಂಭಿಸಿದೆ’ ಎಂದು ಸ್ಲಿಮ್ ಆದ ಹಿಂದಿನ ಕಥೆಯನ್ನು ಅವರು ಹೇಳಿದ್ದಾರೆ.
‘ನಾನು ತಿನ್ನುವುದಕ್ಕೆ ಬ್ರೇಕ್ ಹಾಕಿಲ್ಲ. ಐಸ್‌ಕ್ರೀಂ ಸೇವನೆ ಕಡಿಮೆ ಮಾಡಿದ್ದೇನೆ. ಮಟನ್ ಬಿರಿಯಾನಿ ತಿನ್ನೋದನ್ನು ನಿಲ್ಲಿಸಿಲ್ಲ. ಆಗೊಮ್ಮೆ, ಈಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇರುತ್ತೇನೆ. ನನಗೆ ಚಾಕೋಲೆಟ್ ಎಂದರೆ ಇಷ್ಟವಿಲ್ಲ. ಆದರೆ, ಚಾಕೊಲೇಟ್ನಿಂದ ಮಾಡಿದ ತಿನಿಸುಗಳನ್ನು ಇಷ್ಟಪಡುತ್ತೇನೆ’ ಎಂದು ಆಹಾರ ಕ್ರಮದ ಬಗ್ಗೆ ಹೇಳಿಕೊಂಡಿದ್ದಾರೆ ಅವರು.
2018ರಲ್ಲಿ ತೆರೆಗೆ ಬಂದ ‘ಅಜ್ಞಾತವಾಸಿ’ ಸಿನಿಮಾದಲ್ಲಿ ಖುಷ್ಬೂ ನಟಿಸಿದ್ದರು. ಒಂದು ದೊಡ್ಡ ಬ್ರೇಕ್ ಬಳಿಕ ಅವರು ಒಪ್ಪಿಕೊಂಡ ಸಿನಿಮಾ ಇದಾಗಿತ್ತು. ಆ ಬಳಿಕ ಅವರಿಗೆ ಸಾಕಷ್ಟು ಆಫರ್‌ಗಳು ಬರೋಕೆ ಆರಂಭವಾದವು. ಒಂದು ಸಿನಿಮಾ ಬಿಟ್ಟು ಅವರು ಬೇರೆ ಯಾವುದನ್ನೂ ಒಪ್ಪಿಕೊಂಡಿಲ್ಲ. ‘ಅಜ್ಞಾತವಾಸಿ ಬಳಿಕ ಒಂದಷ್ಟು ಆಫರ್‌ಗಳು ಬಂದವು. ಕಂಬ್ಯಾಕ್ ಮಾಡಿದ ನಂತರದಲ್ಲಿ ಆಸಕ್ತಿದಾಯಕ ಸಿನಿಮಾ ಮಾಡಬೇಕು ಎಂಬುದು ನನ್ನ ಉದ್ದೇಶ. ಕೊನೆಗೂ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಒಪ್ಪಿಕೊಂಡೆ. ನನ್ನ ಪಾತ್ರಕ್ಕೂ, ನನಗೂ ಕೆಲವು ಸಾಮ್ಯತೆ ಇದ್ದಿದ್ದರಿಂದ ಈ ಸಿನಿಮಾ ಇಷ್ಟಪಟ್ಟು ಮಾಡಿದೆ’ ಎಂದಿದ್ದಾರೆ ಖುಷ್ಬೂ. ರಶ್ಮಿಕಾ ಮಂದಣ್ಣ ಹಾಗೂ ಶರ್ವಾನಂದ್ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ.
ಇದನ್ನೂ ಓದಿ: Khushbu Sundar | ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಟ್ವಿಟ್ಟರ್ ಖಾತೆ ಹ್ಯಾಕ್