Oscar: ಆಸ್ಕರ್ ಹಿಂದಿನ ಕರಾಳ ಸತ್ಯ, ಕೋಟಿಗಟ್ಟಲೆ ಸುರಿಯದೆ ಪ್ರಶಸ್ತಿ ಸಿಗದು

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 12 ರಂದು ನಡೆಯಲಿದೆ. ಆದರೆ ಆಸ್ಕರ್ ಪ್ರಶಸ್ತಿಯ ಹಿಂದಿನ ಕರಾಳ ಸತ್ಯ ತಿಳಿದಿದೆಯೇ? ಆಸ್ಕರ್ ಪಡೆಯಲು ಲಾಭಿ ಹೇಗೆ ನಡೆಯುತ್ತದೆ? ಕೋಟಿ ಕೋಟಿ ಹಣ ಹೇಗೆ ಕೈ ಬದಲಾಗುತ್ತದೆ ಇಲ್ಲಿ ತಿಳಿಯಿರಿ.

Oscar: ಆಸ್ಕರ್ ಹಿಂದಿನ ಕರಾಳ ಸತ್ಯ, ಕೋಟಿಗಟ್ಟಲೆ ಸುರಿಯದೆ ಪ್ರಶಸ್ತಿ ಸಿಗದು
ಆಸ್ಕರ್
Follow us
ಮಂಜುನಾಥ ಸಿ.
|

Updated on:Mar 11, 2023 | 5:07 PM

ಅರ್ಹತೆ, ಯೋಗ್ಯತೆಯಿಂದ ಪಡೆಯುವುದು ಪ್ರಶಸ್ತಿ, ಹಣ ಖರ್ಚು ಮಾಡಿ ಪಡೆದ ಯಾವುದೇ ಆದರೂ ಅದು ಖರೀದಿಯೇ ಆಗುತ್ತದೆ. ಆಸ್ಕರ್ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ. ಆಸ್ಕರ್ ಪಡೆಯುವುದು ವಿಶ್ವದ ಹಲವು ನಿರ್ದೇಶಕರ ಜೀವಮಾನದ ಆಸೆ. ಆದರೆ ಈ ಆಸ್ಕರ್ (Oscar) ಪ್ರಶಸ್ತಿಯ ಹಿಂದೆ ಅಡಗಿರುವ ಲಾಭಿ, ಪ್ರಶಸ್ತಿ ಪಡೆಯಲು ಖರ್ಚು ಮಾಡುವ ಸಾವಿರಾರು ಕೋಟಿಗಳ ಹಣ ತೀರಾ ಗುಟ್ಟೇನೂ ಅಲ್ಲ, ಆದರೂ ಆ ಲಾಭಿ ಹೇಗೆ ನಡೆಯುತ್ತದೆ, ಲಾಸ್ ಏಂಜಲಸ್​ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನಕ್ಕೂ ಮುನ್ನ ಸಾವಿರಾರು ಕೋಟಿ ಹಣ ಹೇಗೆ ವ್ಯವಸ್ಥಿತವಾಗಿ ಕೈಬದಲಾಗುತ್ತವೆ ಎಂಬುದು ಕುತೂಹಲಕಾರಿ ವಿಷಯ.

ಭಾರತದಿಂದ ಪ್ರತಿವರ್ಷ ಒಂದು ಸಿನಿಮಾವನ್ನು ಅಧಿಕೃತವಾಗಿ ಆರಿಸಿ ಆಸ್ಕರ್​ಗೆ ಕಳಿಸಲಾಗುತ್ತದೆ. ಅವುಗಳಲ್ಲಿ 1957 ರ ‘ಮದರ್ ಇಂಡಿಯಾ’, ‘ಸಲಾಂ ಬಾಂಬೆ’ ಹಾಗೂ ಆಮಿರ್ ಖಾನ್ ನಟನೆಯ ‘ಲಗಾನ್’ ಹೊರತಾಗಿ ಇನ್ನಾವ ಸಿನಿಮಾವೂ ನಾಮಿನೇಶನ್ ಹಂತ ತಲುಪಿಲ್ಲ. ಈ ಬಾರಿ ‘ಆರ್​ಆರ್​ಆರ್’ ಸಿನಿಮಾದ ‘ನಾಟು-ನಾಟು’ ಹಾಡು ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಆದರೆ ಭಾರತ ಅಥವಾ ಭಾರತದಂಥಹಾ ಇನ್ಯಾವುದೇ ದೇಶದ ಸಿನಿಮಾಗಳು ನಾಮಿನೇಟ್ ಆಗಲು ಪಡಬೇಕಾದ ಕಷ್ಟ, ಹರಿಸಬೇಕಾದ ಹಣದ ಹೊಳೆ ಕಡಿಮೆಯಲ್ಲ. ‘ಆರ್​ಆರ್​ಆರ್’ ಸಿನಿಮಾ ಆಸ್ಕರ್ ಪ್ರೊಮೋಷನ್​ಗೆಂದೇ ಈವರೆಗೆ ನೂರು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆ. ಆದರೆ ಪಡೆದಿರುವುದು ಕೇವಲ ಒಂದು ನಾಮಿನೇಶನ್.

2016 ರಲ್ಲಿ ಭಾರತದಿಂದ ತಮಿಳು ಸಿನಿಮಾ ‘ವಿಸಾರನೈ’ ಆಸ್ಕರ್​ಗೆ ಆಯ್ಕೆ ಆಗಿತ್ತು. ಆ ಸಿನಿಮಾದ ನಿರ್ದೇಶಕ ವೆಟ್ರಿಮಾರನ್ ತಮ್ಮ ಸಿನಿಮಾವನ್ನು ‘ಪ್ರಮೋಟ್’ ಮಾಡಲು ಸುಮಾರು ನಾಲ್ಕು ತಿಂಗಳು ಅಮೆರಿಕದಲ್ಲಿಯೇ ಕಳೆದಿದ್ದರು. ಆಸ್ಕರ್ ಮುಗಿದ ಬಳಿಕ ಒಂದು ಸಂದರ್ಶನದಲ್ಲಿ ತಮ್ಮ ಆಸ್ಕರ್ ಅಭಿಯಾನದ ಬಗ್ಗೆ ವಿವರವಾಗಿ ಮಾತನಾಡಿದ ವೆಟ್ರಿಮಾರನ್ ಆಸ್ಕರ್​ನ ಒಳಸುಳಿಗಳ ಬಗ್ಗೆ ಭಾರತ ಅಥವಾ ಭಾರತದಂಥಹಾ ದೇಶದ ಸಿನಿಮಾಗಳು ಅಲ್ಲಿ ಎದುರಿಸಬೇಕಾದ ಕಷ್ಟಗಳ ಬಗ್ಗೆ ವಿವರಿಸಿದ್ದರು.

‘ತಮ್ಮ ಸಿನಿಮಾವನ್ನು ಆಸ್ಕರ್​ಗೆ ತೆಗೆದುಕೊಂಡು ಬಂದ ವ್ಯಕ್ತಿಯ ಬಳಿ ಹಣ ಥೈಲಿ ಇದೆ ಎಂದು ಗೊತ್ತಾದಕೂಡಲೇ ಪಿಆರ್ ಸಂಸ್ಥೆಗಳು, ಏಜೆಂಟರು ಅವರ ಮೇಲೆ ಮುಗಿಬೀಳುತ್ತಾರೆ. ಕೇಕ್​ನ ತುಣುಕುಗಳು ಅಲ್ಲಿ ಎಲ್ಲರಿಗೂ ಬೇಕು’ ತಮ್ಮ ಸಿನಿಮಾವನ್ನು ಆಸ್ಕರ್​ನಲ್ಲಿ ಪ್ರಮೋಟ್ ಮಾಡಿದ ವೆಟ್ರಿಮಾರನ್ ಆಸ್ಕರ್ ಪ್ರಮೋಷನ್ ಬಗ್ಗೆ ಹೇಳಿರುವ ತಮ್ಮ ಅನುಭವದ ಮಾತುಗಳಿವು. ಹಾಲಿವುಡ್ ಪತ್ರಿಕೆಯೊಂದು 2019 ರಲ್ಲಿ ಪ್ರಕಟ ಮಾಡಿರುವ ವರದಿ ಪ್ರಕಾರ, ಆಸ್ಕರ್​ ಪ್ರಮೋಷನ್​ಗೆ ಪ್ರತಿ ಸಿನಿಮಾ ಖರ್ಚು ಮಾಡುವ ಮೊತ್ತ 15 ಮಿಲಿಯನ್ ಡಾಲರ್ ಅಂದರೆ ಸುಮಾರು 125 ಕೋಟಿಗಳು. ಈಗ 2023 ರಲ್ಲಿ ಈ ಮೊತ್ತ ಕನಿಷ್ಟ 50% ಹೆಚ್ಚಾಗಿರಬಹುದೆಂಬುದು ಸುಲಭದ ಊಹೆ.

ಆಸ್ಕರ್​ ಪ್ರಶಸ್ತಿಗಾಗಿ ಸಿನಿಮಾ ಪ್ರಮೋಟ್ ಮಾಡುವ ಬಗ್ಗೆ ಪ್ರಶಸ್ತಿ ಆಯೋಜನಾ ಸಂಸ್ಥೆಯಾದ ಅಕಾಡೆಮಿ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್ ನವರು ಕಠಿಣವಾದ ನಿಯಮಗಳನ್ನು ಹಾಕಿದ್ದಾರೆ. ನಿಯಮಗಳ ಪುಸ್ತಕವೇ ಸುಮಾರು 40 ಪುಟಗಳಿಗೂ ದೊಡ್ಡದಿದೆಯಂತೆ. ಇಷ್ಟು ಕಠಿಣ ನಿಯಮಗಳು ಇರುವುದನ್ನೇ ಪಿಆರ್ ಸಂಸ್ಥೆಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದು, ಸಿನಿಮಾ ತಂಡಗಳಿಗೆ ಕಳ್ಳದಾರಿಯಲ್ಲಿ ಸಿನಿಮಾ ಪ್ರಮೋಟ್ ಮಾಡಿಕೊಡುತ್ತೇವೆಂದು ಹೇಳಿ, ಪ್ರಶಸ್ತಿಗೆ ನಾಮಿನೇಟ್ ಮಾಡಿಸುತ್ತೇವೆಂದು ಹೇಳಿ ಕೋಟ್ಯಂತರ ಹಣ ಪೀಕಿಸುತ್ತವೆ. ನಿರ್ದೇಶಕ ವೆಟ್ರಿಮಾರನ್ ಹೇಳಿರುವಂತೆ ನಾನಾ ವಿಧದ ಪ್ರಚಾರದ ‘ಆಪ್ಷನ್’​ಗಳನ್ನು ಈ ಸಂಸ್ಥೆಗಳು ನೀಡುತ್ತವೆ. ಪ್ರತಿಯೊಂದಕ್ಕೂ ಒಂದೊಂದು ಬೆಲೆ. ಎಲ್ಲವೂ ದುಬಾರಿಯೇ. ‘ವಿಸಾರನೈ’ ಸಿನಿಮಾದ ನಿರ್ಮಾಣಕ್ಕೆ ಖರ್ಚಾದ ಹಣಕ್ಕಿಂತಲೂ ದುಪ್ಪಟ್ಟು ಹಣ ಅದರ ಆಸ್ಕರ್​ ಪ್ರಮೋಷನ್​ಗೆ ಖರ್ಚಾಯಿತಂತೆ. ಆದರೂ ಆ ಸಿನಿಮಾ ಯಾವ ವಿಭಾಗದಲ್ಲಿಯೂ ನಾಮಿನೇಟ್ ಆಗಲಿಲ್ಲ.

ಆಯೋಜಕರು ಮಾಡುವ ಸ್ಕ್ರೀನಿಂಗ್ ಹೊರತಾಗಿ ಸಿನಿಮಾಕ್ಕೆ ಸಂಬಂಧಿಸಿದವರು ನೇರವಾಗಿ ತಮ್ಮ ಸಿನಿಮಾ ಪ್ರಚಾರ ಮಾಡುವಂತಿಲ್ಲವೆಂಬ ನಿಯಮ ಇದೆ. ಅದಕ್ಕಾಗಿ ಪಿಆರ್ ಸಂಸ್ಥೆಗಳು ಮೂರನೇ ವ್ಯಕ್ತಿಯ ಮನೆಯಲ್ಲಿ ಅಥವಾ ಐಶಾರಾಮಿ ಹೋಟೆಲ್​ಗಳಲ್ಲಿ ವೈನ್ ಆಂಡ್ ಡೈನ್ ಪಾರ್ಟಿ ಮಾಡಿಸಿ ಅಲ್ಲಿಗೆ ಆಸ್ಕರ್ ವೋಟರ್​ಗಳನ್ನು ಆಹ್ವಾನಿಸಿ ಅಲ್ಲಿ ಸಿನಿಮಾ ಪ್ರದರ್ಶನ ಆಯೋಜಿಸಿ ಸಿನಿಮಾ ಬಗ್ಗೆ ಹಿಂಬಾಗಿಲ ಮೂಲಕ ಪ್ರಚಾರ ಮಾಡಿಸುತ್ತವೆ. ಪಾರ್ಟಿಯ ಖರ್ಚು, ಸಿನಿಮಾ ಪ್ರದರ್ಶನದ ಖರ್ಚಿನ ಜೊತೆಗೆ ಯಾರ ಹೆಸರಲ್ಲಿ ಪಾರ್ಟಿ ಆಯೋಜನೆಗೊಳ್ಳುತ್ತದೆಯೋ ಆ ವ್ಯಕ್ತಿಗೆ ಭರಪೂರ ಹಣವನ್ನೂ ಚಿತ್ರತಂಡವೇ ನೀಡಬೇಕು. ಪಿಆರ್​ ಫೀಸ್ ಪ್ರತ್ಯೇಕ.

ಇನ್ನು ಆಸ್ಕರ್ ವೋಟರ್​ಗಳೊಟ್ಟಿಗೆ ಚಿತ್ರತಂಡ ನೇರವಾಗಿ ಸಿನಿಮಾ ಬಗ್ಗೆ ಮಾತನಾಡುವಂತಿಲ್ಲ ಎಂಬ ನಿಯಮವೂ ಇದೆ. ಹಾಗಾಗಿ ಪಿಆರ್ ಏಜನ್ಸಿ ಕಡೆಯವರು ವೋಟರ್​ಗಳಿಗೆ ಸಿನಿಮಾ ಬಗ್ಗೆ ಮೇಲ್​ಗಳನ್ನು ಮಾಡುವುದು, ವಾಟ್ಸ್​ಆಫ್ ಸಂದೇಶಗಳನ್ನು ಕಳಿಸುವುದು, ವಿಡಿಯೋಗಳನ್ನು ಕಳಿಸುವುದು ಮಾಡುತ್ತವೆ. ನಿಗದಿತ ಸಿನಿಮಾ ಏಕೆ ಅದ್ಭುತ ಎಂಬ ಬಗ್ಗೆಯೇ ಈ ಮೆಸೇಜ್​ಗಳು ಇರುತ್ತವೆ. ಇದಕ್ಕಾಗಿಯೂ ದೊಡ್ಡ ಮೊತ್ತ ಪಿಆರ್​ ಸಂಸ್ಥೆಗಳ ಪಾಲಾಗುತ್ತದೆ. ಇದರ ಜೊತೆಗೆ ‘ವಿಸ್ಪರ್ ಪ್ರಮೋಟಿಂಗ್’ ಎಂಬ ಆಪ್ಷನ್ ಸಹ ಇದೆ. ಪಿಆರ್ ತಂಡದವರೇ ಬೇರೆ ಸಿನಿಮಾದ ಸ್ಕ್ರೀನಿಂಗ್​ಗಳಿಗೆ ಹೋಗಿ ತಾವು ಪ್ರಚಾರ ಮಾಡಬೇಕಾದ ಸಿನಿಮಾದ ಬಗ್ಗೆ ಅಲ್ಲಿ ಸ್ಕ್ರೀನಿಂಗ್​ಗೆ ಬಂದವರೊಟ್ಟಿಗೆ ಹೇಳುವುದು, ಆ ಸಿನಿಮಾವನ್ನು ನೋಡುವಂತೆ ಪ್ರೇರೇಪಿಸುವುದು ವಿಸ್ಪರ್ ಪ್ರೊಮೋಷನ್ ಇದಕ್ಕೆ ಬಹಳ ಬೇಡಿಕೆ ಇದೆಯಂತೆ.

ಇನ್ನು ಹಾಲಿವುಡ್​ನ ಜನಪ್ರಿಯ ಕ್ರಿಟಿಕ್​ಗಳನ್ನು ಸಿನಿಮಾ ವಿಶೇಷ ಸ್ಕ್ರೀನಿಂಗ್​ಗೆ ಕರೆತಂದು ಅವರಿಂದ ಒಳ್ಳೆಯ ಮಾತುಗಳನ್ನು ಆಡಿಸುವುದು ಸಹ ಪಿಆರ್ ಕಾರ್ಯಯೋಜನೆಗಳಲ್ಲಿ ಒಂದು. ಈ ‘ಸೇವೆ’ ಅತ್ಯಂತ ದುಬಾರಿ. ಆಸ್ಕರ್​ ಪ್ರಶಸ್ತಿಯ ಒಂದೊಂದು ವಿಭಾಗಕ್ಕೆ ಒಂದೊಂದು ಪರಿಣಿತಿ ಹೊಂದಿದ ಪಿಆರ್​ ಸಂಸ್ಥೆಗಳಿವೆ ಹಾಲಿವುಡ್​ನಲ್ಲಿ. ಈ ಪಿಆರ್​ ಸಂಸ್ಥೆಗಳು ತಾವು ಇಷ್ಟು ಸಿನಿಮಾಕ್ಕೆ ಆಸ್ಕರ್ ಕೊಡಿಸಿದ್ದೇವೆ, ಇಷ್ಟು ಸಿನಿಮಾಕ್ಕೆ ನಾಮಿನೇಶನ್ ಕೊಡಿಸಿದ್ದೇವೆ ಎಂದು ಹೆಮ್ಮೆಯಿಂದ ಜಾಹೀರಾತು ಹಾಕಿಕೊಳ್ಳುತ್ತವೆ! ಆಸ್ಕರ್​ ಪ್ರಮೋಷನ್​ನ ಕರಾಳತೆ ಬಗ್ಗೆ ವರದಿಗಳು ಪ್ರಕಟವಾಗಿವೆ, ಟೀಕೆಗಳು ವ್ಯಕ್ತವಾಗಿವೆ ಹಾಗಿದ್ದರೂ ಸಹ ಪ್ರಶಸ್ತಿ ಕೊಡಿಸುವ ಈ ವ್ಯವಹಾರ ಅವ್ಯಾಹತವಾಗಿ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Sat, 11 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ