ಮತ್ತೆ ಬಂದ ‘ದಿ ಕರಾಟೆ ಕಿಡ್’ ಈ ಬಾರಿ ಇಬ್ಬರು ಶಿಕ್ಷಕರು, ಒಬ್ಬನೇ ಶಿಷ್ಯ
The Karate Kid: ‘ದಿ ಕರಾಟೆ ಕಿಡ್’ ಸಿನಿಮಾ ಸರಣಿ ಹಾಲಿವುಡ್ನ ಸೂಪರ್ ಹಿಟ್ ಸಿನಿಮಾ ಸರಣಿಗಳಲ್ಲಿ ಒಂದು. 1984 ರಿಂದಲೂ ಇದು ಬರುತ್ತಿದೆ. ಇದೀಗ ‘ದಿ ಕರಾಟೆ ಕಿಡ್’ನ ಆರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

ಹಾಲಿವುಡ್ನ (Hollywood) ಅತ್ಯಂತ ಜನಪ್ರಿಯ ಆಕ್ಷನ್ ಸಿನಿಮಾ ಸರಣಿಗಳಲ್ಲಿ ‘ದಿ ಕರಾಟೆ ಕಿಡ್’ (The Karate Kid) ಸಹ ಒಂದು. ಈ ವರೆಗೆ ಬರೋಬ್ಬರಿ ಐದು ‘ದಿ ಕರಾಟೆ ಕಿಡ್’ ಸಿನಿಮಾಗಳು ಬಂದಿವೆ. ಎಲ್ಲವೂ ಹಿಟ್ ಎನಿಸಿಕೊಂಡಿವೆ. ಅದರಲ್ಲಿ ಬಹಳ ಜನಪ್ರಿಯವಾಗಿದ್ದು 2010 ರಲ್ಲಿ ಬಂದ ಜಾಕಿ ಚಾನ್ ನಟನೆಯ ‘ದಿ ಕರಾಟೆ ಕಿಡ್’. ಖ್ಯಾತ ನಟ ವಿಲ್ ಸ್ಮಿತ್ ಮಗ ನಟಿಸಿದ್ದ ಆ ಸಿನಿಮಾದಲ್ಲಿ ಜಾಕಿ ಚಾನ್ (Jackie Chan) ಕುಂಫು ಮಾಸ್ಟರ್ ಆಗಿ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಮತ್ತೊಮ್ಮೆ ‘ದಿ ಕರಾಟೆ ಕಿಡ್’ ಬರುತ್ತಿದೆ.
ಹೊಸ ‘ದಿ ಕರಾಟೆ ಕಿಡ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಬರೋಬ್ಬರಿ 15 ವರ್ಷಗಳ ಬಳಿಕ ‘ದಿ ಕರಾಟೆ ಕಿಡ್’ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿಯೂ ಜಾಕಿ ಚಾನ್ ಗುರುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ಸಿನಿಮಾಕ್ಕಿಂತಲೂ ವಯಸ್ಸಾದಂತೆ ಈ ಸಿನಿಮಾನಲ್ಲಿ ಜಾಕಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಆಕ್ಷನ್ನ ವೇಗ ಕಡಿಮೆ ಆಗಿಲ್ಲ ಎಂಬುದು ಟ್ರೈಲರ್ನಿಂದ ಗೊತ್ತಾಗುತ್ತಿದೆ.
ಇದನ್ನೂ ಓದಿ:Val Kilmer: ಖ್ಯಾತ ಹಾಲಿವುಡ್ ನಟ ವಾಲ್ ಕಿಲ್ಮರ್ ನಿಧನ
ಸಿನಿಮಾಕ್ಕೆ ‘ದಿ ಕರಾಟೆ ಕಿಡ್: ಲಿಜೆಂಡ್ಸ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾನಲ್ಲಿ ಇಬ್ಬರು ಗುರು ಇದ್ದಾರೆ. ಈ ಹಿಂದಿನ ನಾಲ್ಕು ‘ದಿ ಕರಾಟೆ ಕಿಡ್’ ಸಿನಿಮಾಗಳಲ್ಲಿ (2010ರ ಸಿನಿಮಾ ಹೊರತುಪಡಿಸಿ) ಗುರುವಿನ ಪಾತ್ರದಲ್ಲಿ ನಟಿಸಿರುವ ರಾಲ್ಫ್ ಮಾಹಿನೊ ಸಹ ಈ ಸಿನಿಮಾದಲ್ಲಿ ಜಾಕಿ ಚಾನ್ ಜೊತೆಗೆ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ನೋಡಿದರೆ 2010 ರಲ್ಲಿ ಬಿಡುಗಡೆ ಆಗಿದ್ದ ‘ದಿ ಕರಾಟೆ ಕಿಡ್’ ಸಿನಿಮಾದ ಕತೆಯ ಥೀಮ್ ಅನ್ನೇ ಇಲ್ಲೂ ಬಳಸಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
‘ದಿ ಕರಾಟೆ ಕಿಡ್: ಲೆಜೆಂಡ್ಸ್’ ಟ್ರೈಲರ್
2010 ರ ಸಿನಿಮಾದಲ್ಲಿ ಅಮೆರಿಕದಿಂದ ಬಾಲಕನೊಬ್ಬ ಚೀನಾಕ್ಕೆ ಹೋಗಿ ಅಲ್ಲಿ ಕುಂಫು ಕಲಿತ ಕೆಲವು ಬಾಲಕರಿಂದ ತೊಂದರೆಗೆ ಒಳಗಾಗುತ್ತಾನೆ ಆ ನಂತರ ಅದೇ ಬಾಲಕರು ಭಾಗವಹಿಸುವ ಕುಂಫು ಟೂರ್ನಿಯಲ್ಲಿ ಭಾಗವಹಿಸಿ ಗೆಲ್ಲುತ್ತಾನೆ. ಹೊಸ ಸಿನಿಮಾನಲ್ಲಿ ಚೀನಾದ ಬಾಲಕ ಅಮೆರಿಕಕ್ಕೆ ಬರುತ್ತಾನೆ ಇಲ್ಲಿ ಕರಾಟೆ ಕಲಿತ ವಿದ್ಯಾರ್ಥಿಗಳಿಂದ ತೊಂದರೆಗೆ ಒಳಗಾಗುತ್ತಾನೆ. ಬಳಿಕ ಕರಾಟೆ ಟೂರ್ನಿಯಲ್ಲಿ ಭಾಗಿಯಾಗಿ ಚಾಂಪಿಯನ್ ಆಗುವ ಕತೆ ಇದೆ. ಮೇ 30ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Wed, 2 April 25