Jailer First Look: ‘ಜೈಲರ್’ ಕೆಲಸ ಆರಂಭಿಸಿದ ರಜನಿಕಾಂತ್; ಫಸ್ಟ್ ಲುಕ್ ಪೋಸ್ಟರ್ ನೋಡಿ ವಾವ್ ಎಂದ ಫ್ಯಾನ್ಸ್
Rajinikanth | Sun Pictures: ‘ಜೈಲರ್’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಶಿವರಾಜ್ಕುಮಾರ್ ಕೂಡ ನಟಿಸಲಿದ್ದಾರೆ. ಚಿತ್ರದ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.
ನಟ ರಜನಿಕಾಂತ್ (Rajinikanth) ಅವರಿಗೆ ಈಗ 71 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಅವರು ಮುನ್ನುಗ್ಗುತ್ತಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Movie) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರಿಗೆ ವಿಶೇಷ ಗೆಟಪ್ ಇದೆ. ಶೀರ್ಷಿಕೆ ಖಡಕ್ ಆಗಿದೆ. ಅದಕ್ಕೆ ತಕ್ಕಂತೆಯೇ ಈಗ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಜನಿಕಾಂತ್ ಅವರನ್ನು ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ಇಂದು (ಆಗಸ್ಟ್ 22) ‘ಜೈಲರ್’ ಸಿನಿಮಾ ಸೆಟ್ಟೇರಿದೆ. ಆ ಪ್ರಯುಕ್ತ ನಿರ್ಮಾಣ ಸಂಸ್ಥೆಯಾದ ‘ಸನ್ ಪಿಕ್ಚರ್ಸ್’ (Sun Pictures) ಕಡೆಯಿಂದ ಅಪ್ಡೇಟ್ ನೀಡಲಾಗಿದೆ. ರಜನಿಕಾಂತ್ ಅವರ ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದೆ.
ನೂರಾರು ಬಗೆಯ ಪಾತ್ರಗಳ ಮೂಲಕ ಜನರನ್ನು ರಜನಿಕಾಂತ್ ಮನರಂಜಿಸಿದ್ದಾರೆ. ‘ಜೈಲರ್’ ಸಿನಿಮಾದಲ್ಲಿ ಅವರು ನಿಭಾಯಿಸಲಿರುವ ಹೊಸ ಪಾತ್ರದ ಬಗ್ಗೆ ಅಭಿಮಾನಿಗಳು ಭಾರಿ ಕೌತುಕ ಇದೆ. ಇದು ರಜನಿಕಾಂತ್ ನಟನೆಯ 169ನೇ ಸಿನಿಮಾ. ಈ ಚಿತ್ರದಲ್ಲಿ ಅವರ ಜೊತೆ ಶಿವರಾಜ್ಕುಮಾರ್ ಕೂಡ ನಟಿಸಲಿರುವುದು ವಿಶೇಷ. ಶಿವಣ್ಣನ ಫಸ್ಟ್ ಲುಕ್ ಯಾವಾಗ ರಿಲೀಸ್ ಆಗಲಿದೆ ಎಂದು ಫ್ಯಾನ್ಸ್ ಕಾದಿದ್ದಾರೆ.
‘ಜೈಲರ್’ ಸಿನಿಮಾದ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಬತ್ತಳಿಕೆಯಿಂದ ಹಾಡುಗಳು ಹೊರಬರಲಿವೆ. ಈ ಸಿನಿಮಾದ ಬಹುತೇಕ ದೃಶ್ಯಗಳನ್ನು ಸೆಟ್ನಲ್ಲೇ ಶೂಟ್ ಮಾಡಲಾಗುವುದು. ಅದಕ್ಕಾಗಿ ಹೈದರಾಬಾದ್ನಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಇಂದಿನಿಂದ ಶೂಟಿಂಗ್ ಆರಂಭ ಆಗಿದೆ.
#Jailer begins his action Today!@rajinikanth @Nelsondilpkumar @anirudhofficial pic.twitter.com/6eTq1YKPPA
— Sun Pictures (@sunpictures) August 22, 2022
ಇದೇ ಮೊದಲ ಬಾರಿಗೆ ರಜನಿಕಾಂತ್ ಮತ್ತು ಶಿವರಾಜ್ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಸಖತ್ ಹೈಪ್ ಸೃಷ್ಟಿ ಆಗಿದೆ. ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಎದುರು ಶಿವಣ್ಣ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ‘ಬೀಸ್ಟ್’ ಸಿನಿಮಾ ಬಳಿಕ ‘ಜೈಲರ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರ ಪಕ್ಕಾ ಮಾಸ್ ಶೈಲಿಯಲ್ಲಿ ಮೂಡಿಬರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.