ದುಬಾರಿ ಸಂಭಾವನೆ, ‘ಕೈದಿ 2’ಗೆ ಫುಲ್ ಸ್ಟಾಪ್? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ನಿರ್ದೇಶಕ
ನಿರ್ದೇಶಕ ಲೋಕೇಶ್ ಕನಗರಾಜ್ ತಮ್ಮ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. 'ಕೈದಿ 2' ನಿಲ್ಲಲು ದೊಡ್ಡ ಸಂಭಾವನೆ ಕಾರಣ ಎಂಬ ಟೀಕೆಗಳನ್ನು ಅಲ್ಲಗಳೆದಿದ್ದಾರೆ. ಅಲ್ಲು ಅರ್ಜುನ್ ಚಿತ್ರದ ನಂತರ 'ಕೈದಿ 2', ನಂತರ 'ವಿಕ್ರಮ್ 2' ಮತ್ತು 'ರೋಲೆಕ್ಸ್' ಮಾಡುವುದಾಗಿ ದೃಢಪಡಿಸಿದ್ದಾರೆ. LCU ಯೋಜನೆಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.

ನಿರ್ದೇಶಕ ಲೋಕೇಶ್ ಕನಗರಾಜ್ ಅವರು ದಕ್ಷಿಣದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಬಂದ ಅವರ ನಿರ್ದೇಶನದ ‘ಕೂಲಿ’ ಸೋಲು ಕಂಡಿತು. ಈಗ ಲೋಕೇಶ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಬಗ್ಗೆ ಕೇಳಿ ಬಂದ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಲೋಕೇಶ್ ಕನಗರಾಜ್ ಅವರು ‘ಕೈದಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ರಿಲೀಸ್ ಆಗಿದ್ದು 2019ರಲ್ಲಿ. ಈ ಚಿತ್ರಕ್ಕೆ ಸೀಕ್ವೆಲ್ ತರೋದಾಗಿ ಘೋಷಣೆ ಮಾಡಿದ್ದರು. ಆದರೆ, ಸೀಕ್ವೆಲ್ ಬಗ್ಗೆ ಅವರ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಅವರು 75 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿರುವುದೇ ಸಿನಿಮಾ ನಿಲ್ಲಲು ಕಾರಣ ಎಂದೆಲ್ಲ ವದಂತಿಗಳು ಹಬ್ಬಿದ್ದವು. ಇದಕ್ಕೆ ಅವರು ಖಡಕ್ ಉತ್ತರ ನೀಡಿದ್ದಾರೆ. ಟೀಕಿಸಿದವರಿಗೆ ಅವರು ತಿರುಗೇಟು ಕೊಟ್ಟಿದ್ದಾರೆ.
‘ನಾನು ದೊಡ್ಡ ಸಂಭಾವನೆ ಕೇಳಿದ್ದಕ್ಕೆ ಕೈದಿ ಸೀಕ್ವೆಲ್ ನಿಂತಿದೆ ಎಂದೆಲ್ಲ ವದಂತಿ ಹಬ್ಬಿಸಲಾಗುತ್ತಿದೆ. ಲೋಕೇಶ್ ಕನಗರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ನಿಂತಿದೆ ಎಂದು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಸ್ಪಷ್ಟನೆ ನೀಡಲು ಬಯಸುತ್ತೇನೆ’ ಎಂದಿದ್ದಾರೆ ಲೋಕೇಶ್.
‘ಅಲ್ಲು ಅರ್ಜುನ್ ಸಿನಿಮಾ ಬಳಿಕ ನಾನು ಕೈದಿ 2 ಮಾಡುತ್ತೇನೆ. ಆ ಬಳಿಕ ವಿಕ್ರಮ್ 2 ಮಾಡುತ್ತೇನೆ. ನಂತರ ರೊಲೆಕ್ಸ್ ಬರಲಿದೆ. ಇದು ನನ್ನ ಕಮಿಟ್ಮೆಂಟ್. ಇದನ್ನು ಮಾಡದೇ ಚಿತ್ರರಂಗ ತೊರೆಯಲ್ಲ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಿರ್ದೇಶಕನ ಅತಿಆಸೆಗೆ ನಿಂತೋಯ್ತು ‘ಕೈದಿ 2’? ಬೇಸರದ ಉತ್ತರ ಕೊಟ್ಟ ಕಾರ್ತಿ
2027ರ ವೇಳೆಗೆ ‘ಕೈದಿ 2’ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ. ಈ ಚಿತ್ರಕ್ಕೆ ಕಾರ್ತಿ ಹೀರೋ. ಅವರಿಗೆ ಇತ್ತೀಚೆಗೆ ‘ಕೈದಿ 2’ ಬಗ್ಗೆ ಕೇಳಲಾಯಿತು. ಈ ವೇಳೆ ‘ನಿರ್ದೇಶಕರನ್ನು ಕೇಳಿ’ ಎಂದಿದ್ದರು. ಅವರಿಗೆ ನಿರ್ದೇಶಕರ ಬಗ್ಗೆ ಅಸಮಾಧಾನ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಈಗ ಲೋಕೇಶ್ ಅವರ ಸ್ಪಷ್ಟನೆಯಿಂದ ಒಂದಷ್ಟು ಮಂದಿಗೆ ಖುಷಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




