
ಸಿನಿಮಾ ಮಾಡುವುದು ಕಷ್ಟದ ಕೆಲಸ. ಅದೇ ಸಿನಿಮಾವನ್ನು ಪೈರಸಿಯಿಂದ ಕಾಪಾಡುವುದು ಇನ್ನೂ ಕಷ್ಟದ ಕೆಲಸ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಕೂಡ ಈ ಪಿಡುಗಿಗೆ ಬಲಿ ಆದ ಉದಾಹರಣೆ ಇದೆ. ಈಗ ಮಹೇಶ್ ಬಾಬು (Mahesh Babu) ಅಭಿಮಾನಿಗಳಿಗೆ ಪೈರಸಿ ವಿಚಾರಲ್ಲಿ ಚಿಂತೆ ಶುರುವಾಗಿದೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ‘ಪ್ರಿನ್ಸ್’ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ( Sarkaru Vaari Paata) ಸಿನಿಮಾ ಮೇಲೆ ಸಿನಿಪ್ರಿಯರು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೇ 12ರಂದು ಈ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ. ಅದಕ್ಕೂ ಮುನ್ನ ಪೋಸ್ಟರ್, ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆಯಲಾಗಿದೆ. ಮೇ 2ರಂದು ಟ್ರೇಲರ್ ರಿಲೀಸ್ ಮಾಡಿ, ಆ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಬೇಕು ಎಂಬುದು ಚಿತ್ರತಂಡದ ಪ್ಲ್ಯಾನ್ ಆಗಿತ್ತು. ಆದರೆ ಟ್ರೇಲರ್ (Sarkaru Vaari Paata Trailer) ರಿಲೀಸ್ ಆಗೋದಕ್ಕಿಂತಲೂ ಮುನ್ನವೇ ಈ ಸಿನಿಮಾದ ಕೆಲವು ಸೀನ್ಗಳು ಲೀಕ್ ಆಗಿವೆ. ಇದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾ ಮೂಲಕ ಮಹೇಶ್ ಬಾಬು ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ಸರ್ಕಾರು ವಾರಿ ಪಾಟ’ ಸಿನಿಮಾಗೆ ಲೀಕ್ ಸಮಸ್ಯೆ ಕಾಡುತ್ತಿರುವುದು ಇದೇ ಮೊದಲೇನಲ್ಲ. ‘ಕಲಾವತಿ..’ ಸಾಂಗ್ ಕೂಡ ಲೀಕ್ ಆಗಿತ್ತು. ಈ ರೀತಿ ಸೋರಿಕೆ ಮಾಡುವುದರಿಂದ ಜನರಿಗೆ ಸಿನಿಮಾ ಮೇಲಿನ ಕ್ರೇಜ್ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಸಿನಿಮಾವೇ ಪೈರಸಿಗೆ ಒಳಗಾಗುವ ಅಪಾಯ ದಟ್ಟವಾಗಿರುತ್ತದೆ. ಇದು ಮಹೇಶ್ ಬಾಬು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ.
ತೆಲುಗು ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್’ ಬ್ಯಾನರ್ ಮೂಲಕ ‘ಸರ್ಕಾರು ವಾರಿ ಪಾಟ’ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಪರಶುರಾಮ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿಯೇ ಈ ರೀತಿ ದೃಶ್ಯಗಳು ಲೀಕ್ ಆಗಿವೆ ಎಂದು ಫ್ಯಾನ್ಸ್ ಆರೋಪಿಸುತ್ತಿದ್ದಾರೆ. ಈ ಬಗ್ಗೆ ‘ಮೈತ್ರಿ ಮೂವೀ ಮೇಕರ್ಸ್’ ಕಡೆಯಿಂದ ಸ್ಪಷ್ಟನೆ ಬರಬೇಕಿದೆ. ‘ಉಪ್ಪೆನಾ’, ‘ರಂಗಸ್ಥಲಂ’, ‘ಪುಷ್ಪ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಈ ಸಂಸ್ಥೆಗಿದೆ. ಮೇ 2ರಂದು ಸಂಜೆ 4 ಗಂಟೆಗೆ ‘ಸರ್ಕಾರು ವಾರಿ ಪಾಟ’ ಟ್ರೇಲರ್ ಬಿಡುಗಡೆ ಆಗಲಿದೆ.
ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ಜೋಡಿಯಾಗಿ ಖ್ಯಾತ ನಟಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಬಂದ ‘ಕಲಾವತಿ..’ ಹಾಡನ್ನು ನೋಡಿ ಜನರು ಸಖತ್ ಇಷ್ಟಪಟ್ಟಿದ್ದಾರೆ. ಕೀರ್ತಿ ಸುರೇಶ್ ಅವರಿಗೂ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಎಸ್. ತಮನ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ಅದಕ್ಕೂ ಮುನ್ನ ನಿರ್ಮಾಪಕರು ಪೈರಸಿ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಮಹೇಶ್ ಬಾಬು ಅಭಿಮಾನಿಗಳು ಕಿವಿಮಾತು ಹೇಳುತ್ತಿದ್ದಾರೆ. (Source)
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
ತಂದೆ ಮಹೇಶ್ ಬಾಬು ಡ್ಯಾನ್ಸ್ ಮಾಡಿದ ‘ಕಲಾವತಿ..’ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ ಮಗಳು ಸಿತಾರಾ
‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್ ಬಾಬು ವಿಶೇಷ ಮಾತು
Published On - 12:22 pm, Mon, 2 May 22