ಹೃದಯವಂತ ಮಹೇಶ್​ ಬಾಬು; 125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗುತ್ತಿರುವ ಸ್ಟಾರ್​ ನಟ

ಹೃದಯವಂತ ಮಹೇಶ್​ ಬಾಬು; 125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗುತ್ತಿರುವ ಸ್ಟಾರ್​ ನಟ
ಮಹೇಶ್ ಬಾಬು

ಇಂದಿನ ದಿನಗಳಲ್ಲಿ ಹೃದಯದ ಸಮಸ್ಯೆ ಬಗ್ಗೆ ಜನರು ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಚಿಕ್ಕ ಮಕ್ಕಳಲ್ಲಿಯೂ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂಥ ಮಕ್ಕಳಿಗೆ ಮಹೇಶ್​ ಬಾಬು ನೆರವಾಗುತ್ತಿದ್ದಾರೆ.

TV9kannada Web Team

| Edited By: Madan Kumar

Mar 06, 2022 | 9:10 AM

ಖ್ಯಾತ ನಟ ಮಹೇಶ್​ ಬಾಬು ಅವರು ಈಗ ‘ಸರ್ಕಾರು ವಾರಿ ಪಾಟ’ (Sarkaru Vaari Paata) ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರು ಬಗೆಬಗೆಯ ಸಿನಿಮಾಗಳ ಮೂಲಕ ಜನರನ್ನು ರಂಜಿಸುತ್ತಾರೆ. ಪ್ರತಿ ಸಿನಿಮಾಗೆ ಮಹೇಶ್​ ಬಾಬು (Mahesh Babu) ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಲ್ಲಿ ನಟಿಸಿದರೂ ಅವರಿಗೆ ಕೈ ತುಂಬ ಹಣ ಸಿಗುತ್ತದೆ. ಹೀಗೆ ಕೋಟ್ಯಂತರ ರೂಪಾಯಿ ಗಳಿಸುವ ಅವರು ಸಮಾಜಮುಖಿ ಕೆಲಸಗಳಿಗಾಗಿಯೂ ತಮ್ಮ ಆದಾಯದ ಒಂದು ಪಾಲನ್ನು ಮೀಸಲು ಇರಿಸಿದ್ದಾರೆ. ಮೊದಲಿನಿಂದಲೂ ಮಹೇಶ್​ ಬಾಬು ಅವರು ಜನಪರ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಅದಕ್ಕಾಗಿ ‘ಮಹೇಶ್​ ಬಾಬು ಫೌಂಡೇಶನ್​’ ಹಗಲಿರುಳು ಕಾರ್ಯನಿರತವಾಗಿದೆ. ಬಡವರಿಗೆ ವಿವಿಧ ರೀತಿಯಲ್ಲಿ ಈ ಸಂಸ್ಥೆ ಮೂಲಕ ನೆರವು ಸಿಕ್ಕಿದೆ. ಈಗ ಇನ್ನೊಂದು ವಿಶೇಷ ಕಾಳಜಿಗಾಗಿ ಮಹೇಶ್​ ಬಾಬು ಮುಂದೆಬಂದಿದ್ದಾರೆ. ಹೃದಯದ ಸಮಸ್ಯೆಯಿಂದ ಬಳಲುವ ಪುಟ್ಟ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮಹೇಶ್​ ಬಾಬು ಫೌಂಡೇಶನ್ (Mahesh Babu Foundation)​ ಪಣ ತೊಟ್ಟಿದೆ. ಮಕ್ಕಳ ಹಾರ್ಟ್​ ಸರ್ಜರಿಗೆ ಈ ಸಂಸ್ಥೆ ನೆರವು ನೀಡಲಿದೆ. ಈ ಕಾರ್ಯದಿಂದಾಗಿ ಮಹೇಶ್​ ಬಾಬು ಅವರು ಹೃದಯವಂತ ಎಂಬುದು ಮತ್ತೊಮ್ಮೆ ಸಾಬೀತು ಆದಂತಾಗಿದೆ.

ಇಂದಿನ ದಿನಗಳಲ್ಲಿ ಹೃದಯದ ಸಮಸ್ಯೆ ಬಗ್ಗೆ ಜನರು ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಯುವ ಜನರು ಹೃದಯಾಘಾತದಿಂದ ಮೃತರಾಗುತ್ತಿರುವ ಘಟನೆ ಪದೇಪದೇ ವರದಿ ಆಗುತ್ತಿದೆ. ಇನ್ನು, ಚಿಕ್ಕ ಮಕ್ಕಳಲ್ಲಿಯೂ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹುಟ್ಟುವಾಗಲೇ ಅನೇಕ ಮಕ್ಕಳಿಗೆ ಈ ರೀತಿಯ ತೊಂದರೆ ಇರುತ್ತದೆ. ಬಡ ಕುಟುಂಬದ ಮಕ್ಕಳಿಗೆ ಇಂಥ ಸಮಸ್ಯೆಗಳಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಲು ‘ಮಹೇಶ್​ ಬಾಬು ಫೌಂಡೇಶನ್​’ ಸಹಾಯ ಮಾಡಲಿದೆ.

ಈ ಕಾರ್ಯಕ್ಕಾಗಿ ಮಹೇಶ್​ ಬಾಬು ಅವರು ಹೈದರಾಬಾದ್​ನ ರೇನ್​ಬೋ ಚಿಲ್ರನ್ಸ್​ ಹಾರ್ಟ್​ ಇನ್ಸ್​ಟಿಟ್ಯೂಟ್​ ಜೊತೆ ಕೈ ಜೋಡಿಸಿದ್ದಾರೆ. ಪ್ಯೂರ್​ ಲಿಟಲ್​ ಹಾರ್ಟ್​ ಫೌಂಡೇಶನ್​ ಸ್ಥಾಪಿಸಿ, ಅದರ ಮೂಲಕ ಮಕ್ಕಳ ಹೃದಯದ ಚಿಕಿತ್ಸೆಗೆ ನೆರವು ನೀಡಲಾಗುತ್ತದೆ. ಇತ್ತೀಚೆಗೆ ಇದರ ಲಾಂಚಿಂಗ್​ ಕಾರ್ಯಕ್ರಮ ನಡೆಯಿತು. ಅದರಲ್ಲಿ ಮಹೇಶ್​ ಬಾಬು ಭಾಗಿ ಆಗಿದ್ದರು. ಈ ಮೂಲಕ ಅವರು 125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗಲಿದ್ದಾರೆ. ‘ಮಕ್ಕಳೆಂದರೆ ನನಗೆ ಯಾವಾಗಲೂ ಇಷ್ಟ. ಹೃದಯದ ಚಿಕಿತ್ಸೆ ಅಗತ್ಯ ಇರುವ ಮಕ್ಕಳಿಗೆ ನೆರವು ನೀಡುತ್ತಿರುವುದಕ್ಕೆ ನನಗೆ ಖುಷಿ ಇದೆ. ಪುಟ್ಟ ಹೃದಯಗಳಿಗೆ ಅತಿ ಹೆಚ್ಚಿನ ಕಾಳಜಿ ಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಮಹೇಶ್​ ಬಾಬು ಹಾಗೂ ಕೀರ್ತಿ ಸುರೇಶ್​ ಜೊತೆಯಾಗಿ ನಟಿಸಿರುವ ‘ಸರ್ಕಾರು ವಾರಿ ಪಾಟ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ‘ಕಲಾವತಿ..’ ಹಾಡು ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಒಂದೇ ದಿನಕ್ಕೆ ಯೂಟ್ಯೂಬ್​ನಲ್ಲಿ ಈ ಹಾಡು ಕೋಟ್ಯಂತರ ಬಾರಿ ವೀಕ್ಷಣೆ ಕಂಡಿತು. ಎಸ್​. ಥಮನ್​ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿದ್ ಶ್ರೀರಾಮ್​ ಅವರ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ. ಮಹೇಶ್​ ಬಾಬು ಹಾಗೂ ಕೀರ್ತಿ ಸುರೇಶ್ ಅವರ ಕೆಮಿಸ್ಟ್ರೀ ಕಂಡು ಫ್ಯಾನ್ಸ್​ ವಾವ್​ ಎನ್ನುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ:

ಸೈಲೆಂಟ್​ ಆಗಿ ಸೆಟ್ಟೇರಿದ ಮಹೇಶ್​ ಬಾಬು ಹೊಸ ಸಿನಿಮಾ; ಫ್ಯಾನ್ಸ್​ಗೆ ಬೇಸರ ತಂದ​ ವಿಚಾರ

ತಂದೆ ಮಹೇಶ್​ ಬಾಬು ಡ್ಯಾನ್ಸ್​ ಮಾಡಿದ ‘ಕಲಾವತಿ..’ ಹಾಡಿಗೆ ಸಖತ್​ ಆಗಿ ಸ್ಟೆಪ್​ ಹಾಕಿದ ಮಗಳು ಸಿತಾರಾ

Follow us on

Related Stories

Most Read Stories

Click on your DTH Provider to Add TV9 Kannada