ಕಳ್ಳ ಎಂದರೂ ಮುನಿಸು ಮರೆತು ‘ಕಣ್ಣಪ್ಪ’ನಿಗೆ ಶುಭ ಕೋರಿದ ಮನೋಜ್
Manchu Family: ಮಂಚು ಕುಟುಂಬದಲ್ಲಿ ನಡೆದ ಆಸ್ತಿ ಜಗಳಗಳು ಬೀದಿ ಜಗಳಾಗಿ ಮಾರ್ಪಾಡಾಗಿದ್ದವು. ಇದೀಗ ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾ ನಾಳೆ (ಜೂನ್ 27) ಬಿಡುಗಡೆ ಆಗುತ್ತಿದ್ದು, ಇದೀಗ ಕುಟುಂಬದಿಂದ ದೂರಾಗಿರುವ ಮಂಚು ಮನೋಜ್, ಮುನಿಸು ಮರೆತು ‘ಕಣ್ಣಪ್ಪ’ ಸಿನಿಮಾಕ್ಕೆ ಶುಭ ಕೋರಿದ್ದಾರೆ. ಆದರೆ ಅಣ್ಣ ಮಂಚು ವಿಷ್ಣು ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ.

ಮಂಚು ವಿಷ್ಣು (Manchu Vishnu) ನಟನೆಯ ‘ಕಣ್ಣಪ್ಪ’ ಸಿನಿಮಾ ನಾಳೆ ಅಂದರೆ ಜೂನ್ 27 ಕ್ಕೆ ಬಿಡುಗಡೆ ಆಗಲಿದೆ. ಮಂಚು ವಿಷ್ಣು ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ ಇದಾಗಿದ್ದು, ಮಂಚು ವಿಷ್ಣುವಿನ ಸಿನಿಮಾ ವೃತ್ತಿ ಈ ಸಿನಿಮಾದ ಮೇಲೆ ನಿರತವಾಗಿದೆ. ಭಾರಿ ಬಜೆಟ್ ಹೂಡಿಕೆ ಮಾಡಿ, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾಕ್ಕೆ ಮಂಚು ಮನೋಜ್ ಮತ್ತು ಅವರ ತಂದೆ ಮೋಹನ್ ಬಾಬು ಬಂಡವಾಳ ಹೂಡಿದ್ದಾರೆ. ಇದೀಗ ಮಂಚು ಕುಟುಂಬದಿಂದ ದೂರವಾಗಿರುವ ಮಂಚು ಮನೋಜ್, ಹಳೆಯ ಮುನಿಸು ಮರೆತು ಶುಭ ಕೋರಿದ್ದಾರೆ.
ಮಂಚು ಕುಟುಂಬದಲ್ಲಿ ಕಳೆದ ಕೆಲ ತಿಂಗಳಿನಿಂದ ಹಾದಿ-ಬೀದಿಯಲ್ಲಿ ಜಗಳಗಳು ನಡೆದಿವೆ. ಮಂಚು ಮನೋಜ್, ತನ್ನ ತಂದೆ ಮೋಹನ್ ಬಾಬು ಹಾಗೂ ಅಣ್ಣ ಮಂಚು ವಿಷ್ಣು ವಿರುದ್ಧ ಪೊಲೀಸರಿಗೆ ಬೆದರಿಕೆ, ಕೊಲೆ ಯತ್ನ ಆರೋಪದಡಿ ದೂರು ದಾಖಲಿಸಿದ್ದರು. ಮಂಚು ವಿಷ್ಣು ಸಹ ನಾನಾ ಆರೋಪಗಳನ್ನು ಸಹೋದರನ ಮೇಲೆ ಮಾಡಿದ್ದರು. ಮೋಹನ್ ಬಾಬು ಅಂತೂ, ಮಗನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದರು. ಆಸ್ತಿಗಾಗಿ ಈ ಎಲ್ಲ ರಾದ್ಧಾಂತಗಳನ್ನು ಮನೋಜ್, ವಿಷ್ಣು ಮಾಡಿಕೊಂಡಿದ್ದಾರೆ. ಪ್ರಕರಣ ಈಗ ನ್ಯಾಯಾಲಯದಲ್ಲಿದೆ.
ಕೆಲ ದಿನಗಳ ಹಿಂದೆ ಸಹ ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾದ ವಿಎಫ್ಎಕ್ಸ್ ಇರುವ ಹಾರ್ಡ್ ಡಿಸ್ಕ್ ಕಾಣೆ ಆಗಿತ್ತು. ಮಂಚು ವಿಷ್ಣು ಕಚೇರಿಯಲ್ಲಿ ಕೆಲಸ ಮಾಡುವ ನೌಕರರೇ ಹಾರ್ಡ್ ಡಿಸ್ಕ್ ಅನ್ನು ತೆಗೆದುಕೊಂಡು ಪರಾರಿ ಆಗಿದ್ದರು. ಆಗಲೂ ಸಹ ಮಂಚು ವಿಷ್ಣು, ಈ ಘಟನೆಯ ಹಿಂದೆ ಮಂಚು ಮನೋಜ್ ಹಸ್ತವಿದೆ ಎಂದು ತಮ್ಮನ ಮೇಲೆ ಕಳ್ಳತನದ ಆರೋಪ ಮಾಡಿದ್ದರು. ಅದಕ್ಕೆ ಮಂಚು ಮನೋಜ್ ಮಾತಿನ ಮೂಲಕ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ:‘ಕಣ್ಣಪ್ಪ’ನ ಟ್ರೋಲ್ ಮಾಡಿದರೆ ಸುಮ್ಮನಿರಲ್ಲ: ಚಿತ್ರತಂಡದ ಎಚ್ಚರಿಕೆ
ಇದೀಗ ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಮುನಿಸುಗಳನ್ನು ಮರೆತು ಮಂಚು ಮನೋಜ್, ‘ಕಣ್ಣಪ್ಪ’ ಸಿನಿಮಾಕ್ಕೆ ಶುಭ ಕೋರಿದ್ದಾರೆ. ‘ಕಣ್ಣಪ್ಪ’ ತಂಡಕ್ಕೆ ಒಳಿತಾಗಲಿ. ನನ್ನ ತಂದೆ ಮತ್ತು ಅವರ ತಂಡ ವರ್ಷಗಳ ಕಾಲ ಶ್ರಮಪಟ್ಟು ಈ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ದೊಡ್ಡ ಹಿಟ್ ಆಗಲಿ ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. ಅಣ್ಣ ಮಂಚು ವಿಷ್ಣು ಅವರ ಮಕ್ಕಳು ‘ಕಣ್ಣಪ್ಪ’ ಸಿನಿಮಾನಲ್ಲಿ ನಟಿಸಿದ್ದು, ಅವರ ಚಿತ್ರಗಳನ್ನು ಟ್ವೀಟ್ ಮಾಡಿರುವ ಮಂಚು ಮನೋಜ್, ‘ನನ್ನ ಸ್ಟಾರ್ಗಳಾದ ಅರಿ, ಅವಿ ಮತ್ತು ಅವರಂ ಅವರು ಬೆಳ್ಳಿ ಪರದೆಯ ಮೇಲೆ ಮ್ಯಾಜಿಕ್ ಸೃಷ್ಟಿಸಲಿ ಎಂದು ಕೋರುತ್ತೇನೆ. ತನಿಕೇಲ ಭರಣಿ ಅವರ ಜೀವಮಾನದ ಕನಸು ನನಸಾಗುತ್ತಿರುವುದನ್ನು ನೋಡುವುದಕ್ಕೆ ಸಂತೋಷವಾಗುತ್ತಿದೆ’ ಎಂದಿದ್ದಾರೆ.
ಮುಂದುವರೆದು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್ ಹಾಗೂ ಪ್ರಭುದೇವ ಅವರುಗಳಿಗೆ ಧನ್ಯವಾದ ಹೇಳಿದ್ದಾರೆ. ಸಿನಿಮಾ ಅನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಕಾತರನಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ. ‘ಕಣ್ಣಪ್ಪ’ ತಂಡಕ್ಕೆ ಶುಭ ಕೋರಿರುವ ಮನೋಜ್, ತನ್ನ ತಂದೆಯ ಹಾಗೂ ಮಂಚು ವಿಷ್ಣು ಅವರ ಮಕ್ಕಳ ಚಿತ್ರಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ ಎಲ್ಲಿಯೂ ಸಹ ಸಿನಿಮಾದ ನಾಯಕನಾದ ಮಂಚು ವಿಷ್ಣು ಅವರ ಹೆಸರನ್ನು ಉಲ್ಲೇಖಿಸಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ