ಹೊಸ ರಿಯಾಲಿಟಿ ಶೋಗೆ ಹೋಸ್ಟ್​ ಆಗಿ ಬರಲಿದ್ದಾರೆ ಕಿಚ್ಚ ಸುದೀಪ್​! ಶುರುವಾಗಲಿದೆಯಂತೆ ಅತಿ ದೊಡ್ಡ ಕುಕ್ಕಿಂಗ್​ ಶೋ

ಹೊಸ ರಿಯಾಲಿಟಿ ಶೋಗೆ ಹೋಸ್ಟ್​ ಆಗಿ ಬರಲಿದ್ದಾರೆ ಕಿಚ್ಚ ಸುದೀಪ್​! ಶುರುವಾಗಲಿದೆಯಂತೆ ಅತಿ ದೊಡ್ಡ ಕುಕ್ಕಿಂಗ್​ ಶೋ
ಕಿಚ್ಚ ಸುದೀಪ್

ಮೂಲಗಳ ಪ್ರಕಾರ ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ಕಾಜಲ್ ಅಗರ್​ವಾಲ್ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಈ ಹೊಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

Skanda

| Edited By: Rajesh Duggumane

Apr 17, 2021 | 6:24 PM

ಕನ್ನಡ ಕಿರುತೆರೆಯಲ್ಲಿ ಕಿಚ್ಚ ಸುದೀಪ್​ಗೆ ಅತಿ ದೊಡ್ಡ ವೀಕ್ಷಕ ವರ್ಗವಿದೆ. ಈಗಾಗಲೇ ಬಿಗ್​ಬಾಸ್​ ಕಾರ್ಯಕ್ರಮದ ಎಂಟು ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಗೆಲುವು ಸಾಧಿಸಿರುವ ಸುದೀಪ್, ಅತಿ ಶೀಘ್ರದಲ್ಲಿಯೇ ಇನ್ನೊಂದು ವಿಭಿನ್ನವಾದ ಹೊಸ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮನೆಗೆ ಬರಲಿದ್ದಾರೆ. ಮೂಲಗಳ ಪ್ರಕಾರ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ಮಾಸ್ಟರ್ ಶೆಫ್’ ಅತಿ ಶೀಘ್ರದಲ್ಲಿಯೇ ಕನ್ನಡದಲ್ಲಿ ಆರಂಭವಾಗಲಿದ್ದು, ಈ ಖ್ಯಾತ ಅಡುಗೆ ಶೋ ಕಿಚ್ಚನ ಸಾರಥ್ಯದಲ್ಲಿ ಮೂಡಿಬರಲಿದೆ ಎಂಬ ಸುದ್ದಿ ಕಿರುತೆರೆ ವಲಯದಲ್ಲಿ ಹರಿದಾಡಲಾರಂಭಿಸಿದೆ.

ಈ ಹಿಂದೆಯೂ ಕೆಲ ಬಾರಿ ಕಿಚ್ಚ ಸುದೀಪ್​ ಅಡುಗೆ ಕಾರ್ಯಕ್ರಮವನ್ನು ನಿರೂಪಿಸುತ್ತಾರಂತೆ ಎಂಬ ಸುದ್ದಿ ಕೇಳಿ ಬಂದಿದ್ದವು. ಅಡುಗೆ ಸುದೀಪ್​ ಅವರಿಗೆ ಅಚ್ಚುಮೆಚ್ಚಾಗಿರುವ ಕಾರಣ ಕನ್ನಡದಲ್ಲಿ ಅಂತಹದ್ದೊಂದು ಕಾರ್ಯಕ್ರಮ ಮೂಡಿಬಂದರೆ ಯಶಸ್ವಿಯಾಗಲಿದೆ ಎನ್ನಲಾಗಿತ್ತು. ಇದೀಗ ಆ ಸುದ್ದಿ ನಿಜವಾಗುವ ಹಂತಕ್ಕೆ ಬಂದಿದ್ದು ಮಾಸ್ಟರ್ ಶೆಫ್​ ಕನ್ನಡ ಅವತರಣಿಕೆ ಇನ್ನೇನು ಕೆಲ ತಿಂಗಳಲ್ಲಿ ಕಿರುತೆರೆಯ ಜನಪ್ರಿಯ ವಾಹಿನಿಯೊಂದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕಿರುತೆರೆ ಮಟ್ಟಿಗೆ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿರುವ ಮಾಸ್ಟರ್ ಶೆಫ್ ಕೇವಲ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲೂ ಮೂಡಿಬರಲಿದೆ. ಮೂಲಗಳ ಪ್ರಕಾರ ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ಕಾಜಲ್ ಅಗರ್​ವಾಲ್ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಎಂಡಮಾಲ್​ ಶೈನ್ ಅವರ ಬಳಿ ಇದ್ದ ಕಾರ್ಯಕ್ರಮದ ಹಕ್ಕನ್ನು ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯು ವಿಇಎಲ್​ಎಸ್​ ಫಿಲ್ಮ್ ಇಂಟರ್​ನ್ಯಾಶನಲ್ ಹಾಗೂ ಇನ್​ವೆನಿಯೋ ಫಿಲ್ಮ್ಸ್ ಸಹಭಾಗಿತ್ವದಲ್ಲಿ ಖರೀದಿ ಮಾಡಿದ್ದು, ನಾಲ್ಕು ಭಾಷೆಗಳ ಅವತರಣಿಕೆಯನ್ನೂ ಬಿಡದಿ ಬಳಿಯ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಇಲ್ಲಿಯ ತನಕ ಯಾವ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ತಿಂಗಳ ಅಂತ್ಯದೊಳಗೆ ಕಾರ್ಯಕ್ರಮದ ಕುರಿತಾದ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆಯಾದರೂ ಯಾವುದರ ಬಗ್ಗೆಯೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು 

Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ

Follow us on

Related Stories

Most Read Stories

Click on your DTH Provider to Add TV9 Kannada