‘ಎಂಪುರನ್’ ಸಿನಿಮಾ ಬಗ್ಗೆ ಬಿಜೆಪಿ ಅಸಮಾಧಾನ, ಕಾಂಗ್ರೆಸ್ ಪ್ರತಿಕ್ರಿಯೆ ಏನು?
L2 Empuraan: ಮೋಹನ್ಲಾಲ್ ನಟನೆಯ ‘ಎಲ್2 ಎಂಪುರಾನ್’ ಸಿನಿಮಾ ನಿನ್ನೆಯಷ್ಟೆ ದೇಶದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ ಸಿನಿಮಾಕ್ಕೆ ರಾಜಕೀಯ ಬಿಸಿ ಸಹ ತಟ್ಟುತ್ತಿದೆ. ಸಿನಿಮಾ ಕೆಲ ದೃಶ್ಯಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋಹನ್ಲಾಲ್ (Mohanlal) ನಟಿಸಿ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿರುವ ‘ಎಲ್ 2: ಎಂಪುರಾನ್’ ಸಿನಿಮಾ ನಿನ್ನೆಯಷ್ಟೆ ದೇಶದಾದ್ಯಂತ ಬಿಡುಗಡೆ ಆಗಿದೆ. ಮೋಹನ್ಲಾಲ್ ಅಭಿಮಾನಿಗಳಿಗೆ ಹಬ್ಬದಂತಾಗಿರುವ ಸಿನಿಮಾ ಮೊದಲ ದಿನ ಕೇರಳದಲ್ಲಿ ದಾಖಲೆಯ ಹಣ ಗಳಿಕೆ ಮಾಡಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಆದರೆ ‘ಎಂಪುರಾನ್’ ಸಿನಿಮಾಕ್ಕೆ ರಾಜಕೀಯದ ಬಿಸಿ ತಾಗಲು ಆರಂಭವಾಗಿದ್ದು, ಬಿಜೆಪಿ ಪಕ್ಷದ ಕೆಲ ಮುಖಂಡರು ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಎಲ್2: ಎಂಪುರಾನ್’ ಸಿನಿಮಾದ ಕೆಲವು ದೃಶ್ಯಗಳು ಬಿಜೆಪಿ ಪೋಷಿಸಿಕೊಂಡು ಬಂದಿರುವ ಆಂಟಿ ಮುಸ್ಲಿಂ ನರೇಟಿವ್ ಅನ್ನು ಒಡೆಯುವಂತಿದೆ ಎನ್ನಲಾಗಿದೆ. ಹಿಂದೂ ತೀವ್ರಗಾಮಿಯೊಬ್ಬ ಗರ್ಭಿಣಿ ಮುಸ್ಲಿಂ ಮಹಿಳೆಯ ಮೇಲೆ ದಾಳಿ ಮಾಡುವ ದೃಶ್ಯಗಳು ಸಿನಿಮಾದಲ್ಲಿದ್ದು, ಇದು ಗೋಧ್ರಾ ಹತ್ಯಾಕಾಂಡವನ್ನು ನೆನಪಿಸುವಂತಿದೆ ಎನ್ನಲಾಗಿದೆ. ಮಾತ್ರವಲ್ಲದೆ ತೀವ್ರತರವಾದ ಹಿಂದುತ್ವವವನ್ನು ವಿರೋಧಿಸುವ ಸಂಭಾಷಣೆ, ದೃಶ್ಯಗಳು ಈ ಸಿನಿಮಾದಲ್ಲಿದ್ದು, ಇವಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೋಹನ್ಲಾಲ್, ನರೇಂದ್ರ ಮೋದಿಯ ಆಪ್ತ ನಟರಲ್ಲಿ ಒಬ್ಬರು. ಬಿಜೆಪಿ ಬಗ್ಗೆ ಒಲವಿರುವ ನಟ ಅವರು, ಹಾಗಿದ್ದರೂ ಅವರು ಈ ದೃಶ್ಯಗಳು ಸಿನಿಮಾದಲ್ಲಿರಲು ಹೇಗೆ ಬಿಟ್ಟರು? ಎಂಬ ಪ್ರಶ್ನೆಯನ್ನು ಕೇರಳ ಬಿಜೆಪಿ ಕಾರ್ಯಕರ್ತರು ಕೇಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಇತರೆ ಕೆಲ ಪಕ್ಷಗಳು, ‘ಎಲ್2: ಎಂಪುರಾನ್’ ಸಿನಿಮಾ ಅನ್ನು ಸ್ವಾಗತಿಸಿದ್ದು, ‘ದಿ ಕೇರಳ ಸ್ಟೋರಿ’, ‘ದಿ ಕಶ್ಮೀರ್ ಫೈಲ್ಸ್’ ಅಂಥಹಾ ಸಿನಿಮಾಗಳಿಂದ ರಾಜಕೀಯ ಲಾಭ ಪಡೆದುಕೊಂಡಿರುವ ಬಿಜೆಪಿ, ಈಗ ‘ಎಂಪುರಾನ್’ ಸಿನಿಮಾ ಅನ್ನು ವಿರೋಧಿಸುತ್ತಿರುವುದು ಹಾಸ್ಯಾಸ್ಪದ ಎಂದಿದೆ.
ಇದನ್ನೂ ಓದಿ:‘ಮುಸ್ಲಿಮರ ಬಳಿ ಮೋಹನ್ಲಾಲ್ ಕ್ಷಮೆ ಕೇಳಬೇಕು’; ಮಾಡಿದ ತಪ್ಪೇನು?
‘ಎಲ್ 2: ಎಂಪುರಾನ್’ ಸಿನಿಮಾ ರಾಜಕೀಯ, ಕೌಟುಂಬಿಕ ಬಾಂಧವ್ಯ, ಭರ್ಜರಿ ಆಕ್ಷನ್, ಥ್ರಿಲ್ಲರ್ ಕತೆಯನ್ನು ಹೊಂದಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ಮೋಹನ್ಲಾಲ್ ನಾಯಕ, ಪೃಥ್ವಿರಾಜ್ ಸುಕುಮಾರನ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಮಂಜು ವಾರಿಯರ್, ಟೊವಿನೊ ಥಾಮಸ್, ಕನ್ನಡದ ನಟ ಕಿಶೋರ್ ಇನ್ನೂ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಆಂಟೊನಿ ಪೆರಂಬೂರು ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ