AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕರೂಪ ಟಿಕೆಟ್ ದರ: ಕರ್ನಾಟಕದಲ್ಲೂ ತೆಲುಗು ಮಾದರಿ, ಮತ್ತೆ ಪ್ರೇಕ್ಷಕರಿಗೆ ಹೊರೆ?

Movie Ticket Price: ಕರ್ನಾಟಕ ಸರ್ಕಾರವು ಸಿನಿಮಾ ಟಿಕೆಟ್ ದರಗಳನ್ನು ಕಡಿಮೆ ಮಾಡಿದೆ. ಆದರೆ ಇದರಿಂದ ದೊಡ್ಡ ಬಜೆಟ್​​ನ ಸಿನಿಮಾಗಳಿಗೆ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ. ಇದಕ್ಕಾಗಿಯೇ ಕೆಲ ನಿರ್ಮಾಪಕರು ನೆರೆಯ ತೆಲುಗು ಚಿತ್ರರಂಗದ ಮಾದರಿಯನ್ನು ಕರ್ನಾಟಕದಲ್ಲೂ ತರುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ಏನಿದು ತೆಲುಗು ಮಾದರಿ?

ಏಕರೂಪ ಟಿಕೆಟ್ ದರ: ಕರ್ನಾಟಕದಲ್ಲೂ ತೆಲುಗು ಮಾದರಿ, ಮತ್ತೆ ಪ್ರೇಕ್ಷಕರಿಗೆ ಹೊರೆ?
Movie Ticket Price
ಮಂಜುನಾಥ ಸಿ.
|

Updated on: Sep 13, 2025 | 7:37 PM

Share

ಸಿನಿಮಾ ಟಿಕೆಟ್ ದರಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 50% ಗೂ ಹೆಚ್ಚಿತ್ತು. ತಮಿಳುನಾಡು, ಆಂಧ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಟಿಕೆಟ್ ದರ 100% ಹೆಚ್ಚಿತ್ತು. ಪರಭಾಷೆ ಸಿನಿಮಾಗಳಂತೂ ಒಂದಕ್ಕೆ ಐದರಷ್ಟು ಟಿಕೆಟ್ ದರ ಹೆಚ್ಚು ಮಾಡಿ ಮಾರಾಟ ಮಾಡಿದ ಉದಾಹರಣೆಯೂ ಇದೆ. ಆದರೆ ಇದಕ್ಕೆಲ್ಲ ಬ್ರೇಕ್ ಹಾಕಿದೆ ಸರ್ಕಾರದ ನೂತನ ಆದೇಶ. ಇನ್ನು ಮುಂದೆ ಕರ್ನಾಟಕದಲ್ಲಿ ಯಾವುದೇ ದಿನ, ಯಾವುದೇ ಸಿನಿಮಾದ ಟಿಕೆಟ್ ದರಗಳು 200 ರೂಪಾಯಿ ದಾಟುವಂತಿಲ್ಲ.

ಮಲ್ಟಿಪ್ಲೆಕ್ಸ್​​ಗಳಾಗಲಿ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳೇ ಆಗಲಿ, ವೀಕೆಂಡ್ ಆಗಲಿ ವಾರದ ಇನ್ಯಾವುದೇ ದಿನವಾಗಲಿ, ಬಿಡುಗಡೆ ಆದ ಹೊಸ ಸಿನಿಮಾ ಆಗಲಿ, ವಾರ ಓಡಿದ ಸಿನಿಮಾ ಆಗಲಿ, ಪ್ಯಾನ್ ಇಂಡಿಯಾ ಸ್ಟಾರ್ ನಟನ ಸಿನಿಮಾ ಆಗಿರಲಿ, ಹೊಸಬರ ಹೊಸ ಸಿನಿಮಾ ಆಗಿರಲಿ 200 ರೂಪಾಯಿಗೆ ಮೀರದಂತೆ ಟಿಕೆಟ್ ದರ ನಿಗದಿ ಪಡಿಸಲೇ ಬೇಕು. ಅದಕ್ಕಿಂತೂ ಹೆಚ್ಚು ಮಾಡುವಂತಿಲ್ಲ. ಕಡಿಮೆ ಮಾಡುವ ಸ್ವಾತಂತ್ರ್ಯ ಚಿತ್ರಮಂದಿರಗಳದ್ದು. ಆದರೆ ಇದರಿಂದ ಕೆಲವು ದೊಡ್ಡ ಬಜೆಟ್ ಸಿನಿಮಾಗಳಿಗೆ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.

ನೆರೆಯ ಆಂಧ್ರ ಪ್ರದೇಶದಲ್ಲಿ ಸಹ ಟಿಕೆಟ್ ದರಗಳು ಬಹಳ ಕಡಿಮೆ ಇದ್ದವು. ಅದರಲ್ಲೂ ಜಗನ್ ಸರ್ಕಾರದ ಅವಧಿಯಲ್ಲಂತೂ ಸಿನಿಮಾ ಟಿಕೆಟ್ ದರಗಳು 10 ರೂಪಾಯಿಗಳಿಂದ ಪ್ರಾರಂಭ ಆಗುತ್ತಿದ್ದವು. ಇದೀಗ ಚಂದ್ರಬಾಬು ನಾಯ್ಡು ಸರ್ಕಾರ ಬಂದ ಬಳಿಕವೂ ಸಹ ಟಿಕೆಟ್ ದರಗಳು ಕಡಿಮೆಯೇ ಇದೆ. ಆದರೆ ದೊಡ್ಡ ಬಜೆಟ್ ಸಿನಿಮಾಗಳು ಸರ್ಕಾರದ ಬಳಿ ಅರ್ಜಿ ಹಾಕಿಕೊಂಡು ಬಿಡುಗಡೆ ಆದ ಮೊದಲ ವಾರ ಅಥವಾ ಮೂರು ದಿನ ಅಥವಾ ಹತ್ತು ದಿನಗಳ ಅವಧಿಯ ವರೆಗೆ ಟಿಕೆಟ್ ಬೆಲೆಯನ್ನು ಹೆಚ್ಚು ಮಾಡಲು ಅನುಮತಿ ಪಡೆಯುವ ಅವಕಾಶ ನೀಡಲಾಗಿದೆ. ಜೊತೆಗೆ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಅವಕಾಶವನ್ನೂ ಸಹ ಪಡೆಯಬಹುದಾಗಿದೆ.

ಇದನ್ನೂ ಓದಿ:ಜಿಎಸ್​ಟಿ ದರ ಪರಿಷ್ಕರಣೆ: ಸಿನಿಮಾ ಟಿಕೆಟ್ ದರ ಇಳಿಕೆ, ಆದರೆ

ಆಂಧ್ರ ಮತ್ತು ತೆಲಂಗಾಣದಲ್ಲಿ ಹೀಗೊಂದು ವ್ಯವಸ್ಥೆ ಇರುವ ಕಾರಣದಿಂದಾಗಿ ದೊಡ್ಡ ಬಜೆಟ್ ಸಿನಿಮಾಗಳು ಸರ್ಕಾರದ ಅನುಮತಿ ಮೇರೆಗೆ ಶೋಗಳ ಸಂಖ್ಯೆ ಹೆಚ್ಚು ಮಾಡಿಕೊಂಡು, ಸಿನಿಮಾ ಟಿಕೆಟ್ ದರ ಹೆಚ್ಚು ಮಾಡಿಕೊಂಡು ದೊಡ್ಡ ಮೊತ್ತದ ಹಣವನ್ನು ಮೊದಲ ವಾರದಲ್ಲೇ ಬಾಚಿಕೊಳ್ಳುತ್ತವೆ. ಇದರಿಂದ ಸಿನಿಮಾಕ್ಕೆ ಹೊಡೆತ ಬೀಳುವುದಿಲ್ಲ. ಆದರೆ ಈ ಅವಕಾಶ ದೊಡ್ಡ ಬಜೆಟ್ ಸಿನಿಮಾಗಳಗೆ ಮಾತ್ರವೇ ಇದೆ. ಆದರೆ ಸಣ್ಣ ಬಜೆಟ್ ಸಿನಿಮಾಗಳಿಗೆ ಈ ಅವಕಾಶ ಇಲ್ಲ.

ಈಗ ಕರ್ನಾಟಕದಲ್ಲಿ ಟಿಕೆಟ್ ದರ ಕಡಿಮೆ ಮಾಡಿರುವುದರಿಂದ ಕರ್ನಾಟಕದಲ್ಲಿಯೂ ತೆಲುಗು ಮಾದರಿಯನ್ನೇ ಅನುಸರಿಸುವ ಬಗ್ಗೆ ದೊಡ್ಡ ನಿರ್ಮಾಣ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ ಎನ್ನಲಾಗುತ್ತಿದೆ. ಇಂದು ಫಿಲಂ ಚೇಂಬರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಹ ಇದೇ ವಿಷಯ ಚರ್ಚೆ ಆಗಿದೆ. ರಾಜ್ಯದಾದ್ಯಂತ ಫ್ಯಾನ್ಸ್ ಶೋ, ಎಕ್ಸ್ಟ್ರಾ ಶೋಗಳನ್ನು ಹಾಕಿಕೊಳ್ಳಲು ಅನುಮತಿ ನೀಡಬೇಕೆಂದು, ಹಾಗೂ ಸಿನಿಮಾ ಬಿಡುಗಡೆ ಆದ ಮೊದಲ ಒಂದು ವಾರ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಬೇಕೆಂದು ನಿರ್ಮಾಪಕರು ಸರ್ಕಾರವನ್ನು ಕೇಳುವ ಸಾಧ್ಯತೆ ಇದೆ ಎಂದು ಫಿಲಂ ಚೇಂಬರ್​​ ಸುದ್ದಿಗೋಷ್ಠಿಯಲ್ಲಿಯೂ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ವೇಳೆ ಅದುವೇ ನಿಜವಾದರೆ ಮತ್ತೆ ಪ್ರೇಕ್ಷಕರಿಗೆ ಅದರಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ನೋಡಲು ಮುಗಿಬೀಳುವ ಸಿನಿಮಾ ಪ್ರೇಮಿ ಪ್ರೇಕ್ಷಕರ ಜೇಬಿಗೆ ಹೊರೆ ಆಗುವುದು ಪಕ್ಕಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ