AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ದುಬಾರಿ ಬೆಲೆಗೆ ಐಶಾರಾಮಿ ಮನೆ ಖರೀದಿಸಿದ ನಾಗ ಚೈತನ್ಯ, ಯಾರಿಗಾಗಿ?

ನಾಗ ಚೈತನ್ಯ ನಟಿಸಿರುವ ಈ ಹಿಂದಿನ ಮೂರು ಸಿನಿಮಾಗಳು ಧಾರುಣವಾಗಿ ಸೋತಿವೆ. ಹಾಗಿದ್ದಾಗಿಯೂ ಹೈದರಾಬಾದ್​ನಲ್ಲಿ ಭಾರಿ ಹಣ ನೀಡಿ ಐಶಾರಾಮಿ ಮನೆಯನ್ನು ನಾಗ ಚೈತನ್ಯ ಖರೀದಿಸಿದ್ದಾರೆ.

ಹೈದರಾಬಾದ್​ನಲ್ಲಿ ದುಬಾರಿ ಬೆಲೆಗೆ ಐಶಾರಾಮಿ ಮನೆ ಖರೀದಿಸಿದ ನಾಗ ಚೈತನ್ಯ, ಯಾರಿಗಾಗಿ?
ನಾಗ ಚೈತನ್ಯ
ಮಂಜುನಾಥ ಸಿ.
|

Updated on: Mar 28, 2023 | 2:57 PM

Share

ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಪುತ್ರ ನಾಗ ಚೈತನ್ಯ ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕಕ್ಕೂ ಹೆಚ್ಚು ಸಮಯವಾಗಿದೆ. ಭಾರಿ ಬಜೆಟ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಾಗ ಚೈತನ್ಯ (Naga Chaitanya) ಆರಂಭದಲ್ಲಿ ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡಿದರು. ಆದರೆ ಇತ್ತೀಚೆಗೆ ಸತತ ಸೋಲುಗಳನ್ನೇ ಕಾಣುತ್ತಿದ್ದಾರೆ ಈ ನಟ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ನಾಗ ಚೈತನ್ಯ ನಟಿಸಿರುವ ಸತತ ಮೂರು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸೋತಿವೆ. ಅದರಲ್ಲಿಯೂ ಆಮಿರ್ ಖಾನ್ ಜೊತೆಗೆ ನಟಿಸಿದ್ದ ಲಾಲ್ ಸಿಂಗ್ ಛಡ್ಡ ಸಿನಿಮಾ ಸಹ ಧಾರುಣ ಸೋಲು ಕಂಡಿದ್ದು ನಾಗ ಚೈತನ್ಯಗೆ ತೀವ್ರ ನಿರಾಸೆ ಮೂಡಿಸಿದೆ. ಹೀಗಿದ್ದರೂ ನಾಗ ಚೈತನ್ಯ ಹೈದರಾಬಾದ್​ನಲ್ಲಿ ಐಶಾರಾಮಿ ಮನೆಯೊಂದನ್ನು ಇತ್ತೀಚೆಗೆ ಖರೀದಿಸಿದ್ದಾರೆ!

ಸಮಂತಾ ಜೊತೆಗೆ ವಿಚ್ಛೇದನ ಪಡೆವ ಮುಂಚೆ ಈ ಇಬ್ಬರೂ ಹೈದರಾಬಾದ್​ನಲ್ಲಿಯೇ ಐಶಾರಾಮಿ ಮನೆಯೊಂದರಲ್ಲಿ ವಾಸವಿದ್ದರು. ವಿಚ್ಛೇದನದ ಬಳಿಕ ಸಮಂತಾ ಆ ಮನೆಯಿಂದ ಹೊರನಡೆದಿದ್ದರು. ಆ ನಂತರ ದುಪ್ಪಟ್ಟು ಹಣ ತೆತ್ತು ಅದೇ ಮನೆಯನ್ನು ಖರೀದಿಸಿ ಈಗ ಅಲ್ಲಿಯೇ ವಾಸವಿದ್ದಾರೆ. ಇದೀಗ ನಾಗ ಚೈತನ್ಯ ಸಹ ಸಮಂತಾಗೆ ಸೆಡ್ಡು ಹೊಡೆಯುವ ರೀತಿ ಐಶಾರಾಮಿ ಮನೆಯೊಂದನ್ನು ಹೈದರಾಬಾದ್​ನಲ್ಲಿಯೇ ಖರೀದಿ ಮಾಡಿದ್ದಾರೆ. ಈ ಮನೆ ಖರೀದಿಗೂ ನಾಗ ಚೈತನ್ಯ ಖಾಸಗಿ ಜೀವನಕ್ಕೂ ಲಿಂಕ್ ಇದೆ ಎನ್ನಲಾಗುತ್ತಿದೆ.

ಸಮಂತಾ ಜೊತೆ ವಿಚ್ಛೇದನ ಪಡೆದ ಕೆಲವೇ ದಿನಗಳಲ್ಲಿ ನಾಗ ಚೈತನ್ಯ ಹೆಸರು ನಟಿ ಶೋಭಿತಾ ಧುಲಿಪಾಲ ಜೊತೆ ಕೇಳಿ ಬಂದಿತ್ತು. ನಾಗ ಚೈತನ್ಯ ಹಾಗೂ ಶೋಭಿತಾ ಕೈ-ಕೈ ಹಿಡಿದುಕೊಂಡು ಓಡಾಡುತ್ತಿರುವ ಕೆಲವು ಚಿತ್ರಗಳು ಸಹ ವೈರಲ್ ಆಗಿದ್ದವು. ಇದೀಗ ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದ್ದು, ಇಬ್ಬರೂ ಹೊಸದಾಗಿ ಸಂಸಾರ ಶುರು ಮಾಡಲೆಂದು ಜೂಬ್ಲಿ ಹಿಲ್ಸ್​ನಲ್ಲಿಯ ಈ ಐಶಾರಾಮಿ ಮನೆಯನ್ನು ನಾಗ ಚೈತನ್ಯ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮನೆ ಖರೀದಿಸಲು ಬರೋಬ್ಬರಿ 15 ಕೋಟಿ ರುಪಾಯಿ ಹಣ ತೆತ್ತಿದ್ದಾರಂತೆ ನಾಗ ಚೈತನ್ಯ.

ನಾಗ ಚೈತನ್ಯ ಸಿನಿಮಾಗಳ ಜೊತೆಗೆ ಉದ್ಯಮದಲ್ಲಿಯೂ ತೊಡಗಿಕೊಂಡಿದ್ದಾರೆ. ಶೋಯು ಹೆಸರಿನ ಕ್ಲೌಡ್ ಕಿಚನ್ ಅನ್ನು ನಾಗಾರ್ಜುನ ತೆರೆದಿದ್ದಾರೆ. ಇದು ಕೇವಲ ಕ್ಲೌಡ್ ಕಿಚನ್ ಆಗಿದ್ದು ಫುಡ್ ಡೆಲಿವರಿ ಆಪ್​ಗಳ ಮೂಲಕ ವಿಶ್ವದ ಭಿನ್ನ ಭಿನ್ನ ದೇಶಗಳ ಆಹಾರವನ್ನು ಹೈದರಾಬಾದ್​ನ ಗ್ರಾಹಕರಗೆ ತಲುಪಿಸುತ್ತಿದೆ. ಇನ್ನು ದಕ್ಷಿಣ ಭಾರತದ ಜನಪ್ರಿಯ ಅನ್ನಪೂರ್ಣ ಸ್ಟುಡಿಯೋ, ನಾಗ ಚೈತನ್ಯ ಅವರ ತಂದೆ ನಾಗಾರ್ಜುನ ಅವರದ್ದೇ ಆಗಿದೆ. ಅನ್ನಪೂರ್ಣ ಸ್ಟುಡಿಯೋ ವತಿಯಿಂದ ನಿರ್ಮಾಣವಾಗುವ ಸಿನಿಮಾಗಳ ಮೇಲುಸ್ತುವಾರಿಯನ್ನೂ ಸಹ ನಾಗ ಚೈತನ್ಯ ನೋಡಿಕೊಳ್ಳುತ್ತಾರೆ.

2022 ರಲ್ಲಿ ನಾಗ ಚೈತನ್ಯ ನಟಿಸಿರುವ ಬಂಗಾರ್ರಾಜು, ಥ್ಯಾಂಕ್​ ಯೂ ಹಾಗೂ ಹಿಂದಿಯ ಲಾಲ್ ಸಿಂಗ್ ಛಡ್ಡ ಸಿನಿಮಾಗಳು ಬಿಡುಗಡೆ ಆದವು. ಮೂರೂ ಸಿನಿಮಾಗಳು ಫ್ಲಾಪ್ ಆದವು. ಇದೀಗ ಕಸ್ಟಡಿ ಹೆಸರಿನ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದು ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಈ ಸಿನಿಮಾದ ಮೇಲೆ ನಾಗ ಚೈತನ್ಯ ಹಾಗೂ ಅವರ ಅಭಿಮಾನಿಗಳು ಭಾರಿ ನಿರೀಕ್ಷೆ ಇರಿಸಿದ್ದು ಸಿನಿಮಾ ಹಿಟ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ