ನೆಟ್ಫ್ಲಿಕ್ಸ್ನಲ್ಲಿ ಹೆಚ್ಚುವರಿ ಶುಲ್ಕವಿಲ್ಲದೆ ವಿಡಿಯೊ ಗೇಮ್ಸ್: ಮಕ್ಕಳಿಗಾಗಿ ಎರಡು ಹೊಸ ಕೊಡುಗೆ ಘೋಷಣೆ
ಅಮೆರಿಕ ಸೇರಿ ಹಲವು ಶ್ರೀಮಂತ ದೇಶಗಳಲ್ಲಿ ನೆಟ್ಫ್ಲಿಕ್ಸ್ ಚಂದಾದಾರರು ವ್ಯಾಪಕವಾಗಿ ಹರಡಿಕೊಂಡಿದ್ದು, ಇನ್ನು ಮುಂದೆ ಈ ಕ್ಷೇತ್ರದಲ್ಲಿ ಕಂಪನಿ ಬೆಳೆಯುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಬಂದೊದಗಿದೆ.
ವಿಶ್ವದ ಒಟಿಟಿ ದೈತ್ಯ ಕಂಪನಿ ನೆಟ್ಫ್ಲಿಕ್ಸ್ ವಿಡಿಯೊ ಗೇಮಿಂಗ್ ಉದ್ಯಮಕ್ಕೂ ಶೀಘ್ರದಲ್ಲಿಯೇ ಪದಾರ್ಪಣೆ ಮಾಡಲಿದೆ. ಇದಕ್ಕಾಗಿ ಎಲೆಕ್ಟ್ರಾನಿಕ್ ಆರ್ಟ್ಸ್ ಅಂಡ್ ಫೇಸ್ಬುಕ್ ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಹೆಸರಾಂತ ಪ್ರೋಗ್ರಾಮರ್ ಮೈಕ್ ವೆರ್ಡು ಅವರನ್ನು ನೆಟ್ಫ್ಲಿಕ್ಸ್ ತನ್ನ ಸಂಸ್ಥೆಗೆ ಸೇರಿಸಿಕೊಂಡಿದೆ. ಮೈಕ್ ವೆರ್ಡು ಅವರಿಗೆ ಉಪಾಧ್ಯಕ್ಷ ಹುದ್ದೆ ನೀಡಿರುವ ನೆಟ್ಫ್ಲಿಕ್ಸ್ ಗೇಮ್ ಡೆವಲಪ್ಮೆಂಟ್ ಹೊಣೆ ಒಪ್ಪಿಸಿದೆ.
ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಒಟಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನೆಟ್ಫ್ಲಿಕ್ಸ್ ಪ್ರಸ್ತುತ ಸಿನಿಮಾಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಅಮೆರಿಕ ಸೇರಿ ಹಲವು ಶ್ರೀಮಂತ ದೇಶಗಳಲ್ಲಿ ನೆಟ್ಫ್ಲಿಕ್ಸ್ ಚಂದಾದಾರರು ವ್ಯಾಪಕವಾಗಿ ಹರಡಿಕೊಂಡಿದ್ದು, ಇನ್ನು ಮುಂದೆ ಈ ಕ್ಷೇತ್ರದಲ್ಲಿ ಕಂಪನಿ ಬೆಳೆಯುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಬಂದೊದಗಿದೆ. ಹೀಗಾಗಿಯೇ ನೆಟ್ಫ್ಲಿಕ್ಸ್ ಇದೀಗ ಗೇಮಿಂಗ್ ಮತ್ತು ಮಕ್ಕಳ ಮನರಂಜನೆ ಕ್ಷೇತ್ರದತ್ತ ಮನಸ್ಸು ಹರಿಸಿದೆ.
ಈ ಸಂಬಂಧ ನೆಟ್ಫ್ಲಿಕ್ಸ್ ಕಂಪನಿಯ ಮೂಲಗಳನ್ನು ಉದ್ದೇಶಿಸಿ ವರದಿ ಮಾಡಿರುವ ಬ್ಲೂಮ್ಬರ್ಗ್ ಸುದ್ದಿತಾಣವು, ಮುಂದಿನ ವರ್ಷದಲ್ಲಿಯೇ ನೆಟ್ಫ್ಲಿಕ್ಸ್ ತನ್ನ ಗ್ರಾಹಕ ವಲಯ ಮತ್ತು ಸೇವೆಗಳನ್ನು ವಿಸ್ತರಿಸಲಿದೆ ಎಂದು ಹೇಳಿದೆ. ಸಾಕ್ಷ್ಯಚಿತ್ರ ಮತ್ತು ಸ್ಟ್ಯಾಂಡ್ಅಪ್ ಸ್ಪೆಷಲ್ಸ್ ಮಾದರಿಯಲ್ಲಿ ಗೇಮ್ಸ್ ಸಹ ಮುಂದಿನ ದಿನಗಳಲ್ಲಿ ಪ್ರತ್ಯೇಕ ಪ್ರೋಗ್ರಾಮಿಂಗ್ ಜರ್ನ್ ಆಗಿಯೂ ವಿಕಸನಗೊಳ್ಳಬಹುದು. ಆರಂಭದ ದಿನಗಳಲ್ಲಿ ನೆಟ್ಫ್ಲಿಕ್ಸ್ ಹೆಚ್ಚುವರಿ ಶುಲ್ಕವಿಲ್ಲದೆ ಈ ಸೇವೆ ಒದಗಿಸುತ್ತಿದೆ. ವೆರ್ಡು ಅವರು ನೆಟ್ಫ್ಲಿಕ್ಸ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಗ್ರೆಗ್ ಪೀಟರ್ಸ್ ಅವರಿಗೆ ವರದಿ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ಕೆಲ ವರ್ಷಗಳಿಂದಲೂ ನೆಟ್ಫ್ಲಿಕ್ಸ್ ವಿಡಿಯೊ ಗೇಮಿಂಗ್ ಮಾರುಕಟ್ಟೆ ಪ್ರವೇಶಿಸುವ ಸೂಚನೆಗಳನ್ನು ನೀಡುತ್ತಿತ್ತು. ಈ ನಿಟ್ಟಿನಲ್ಲಿ ಕಂಪನಿಯ ಮೊದಲು ಘೋಷಣೆಯು 2019ರಲ್ಲಿ ಹೊರಬಿದ್ದಿತ್ತು. ಕಳೆದ ಮೇ ತಿಂಗಳಲ್ಲಿ ಈ ನಿಟ್ಟಿನಲ್ಲಿ ದೃಢವಾದ ಪ್ರಯತ್ನಗಳು ಆರಂಭವಾದವು.
ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಎರಡು ಹೊಸ ಆಯ್ಕೆಗಳನ್ನು ನೀಡುವುದಾಗಿಯೂ ನೆಟ್ಫ್ಲಿಕ್ಸ್ ಘೋಷಿಸಿದೆ. ಕಿಡ್ಸ್ ರಿಕ್ಯಾಪ್ ಇಮೇಲ್ ಎನ್ನುವುದು ಇದರಲ್ಲಿ ಒಂದು. ಈ ಆಯ್ಕೆಯ ಮೂಲಕ ಪೋಷಕರ ಇಮೇಲ್ಗೆ ಮಕ್ಕಳ ಚಟುವಟಿಕೆಯ ಮಾಹಿತಿ ಸಿಗುತ್ತದೆ. ಮಕ್ಕಳು ನೆಟ್ಫ್ಲಿಕ್ಸ್ನಲ್ಲಿ ಮಾಡಿಕೊಂಡಿರುವ ಆಯ್ಕೆಗಳ ಬಗ್ಗೆಯೂ ಪೋಷಕರಿಗೆ ಇದು ಮಾಹಿತಿ ನೀಡಲಿದೆ. ಮಕ್ಕಳು ಎಂಥ ಕಾರ್ಯಕ್ರಮ ವೀಕ್ಷಿಸಬಹುದು ಎಂಬುದನ್ನು ಸೂಚಿಸಲು ಅನುವಾಗುವಂತೆ ಪೋಷಕರಿಗೂ ಸಲಹೆಗಳು ಹೋಗುತ್ತವೆ. ಇಂದಿನಿಂದ ಅಂದರೆ, ಜುಲೈ 16ರಿಂದಲೇ ಈ ಆಯ್ಕೆ ಕಾರ್ಯಾರಂಭ ಮಾಡಿದೆ. ನೆಟ್ಫ್ಲಿಕ್ಸ್ ಪ್ರೊಫೈಲ್ನಲ್ಲಿ ಮಕ್ಕಳ ಅಕೌಂಟ್ ಜೋಡಿಸಿಕೊಂಡಿರುವವರಿಗೆ ಇದು ಕಾಣಿಸಲಿದೆ.
ಕಿಡ್ಸ್ ಟಾಪ್ 10 ಎನ್ನುವುದು ನೆಟ್ಫ್ಲಿಕ್ಸ್ ಪರಿಚಯಿಸುತ್ತಿರುವ ಮತ್ತೊಂದು ಆಯ್ಕೆ. ಇದು 10 ಜನಪ್ರಿಯ ಟೈಟಲ್ಗಳನ್ನು ಮಕ್ಕಳಿಗಾಗಿ ತೋರಿಸಲಿದೆ. ಈ ಪಟ್ಟಿಯು ಪ್ರತಿದಿನ ಅಪ್ಡೇಟ್ ಆಗಲಿದೆ. ಯಾವ ಕಾರ್ಯಕ್ರಮ ಅಥವಾ ಸಿನಿಮಾಕ್ಕೆ ನೆಟ್ಫ್ಲಿಕ್ಸ್ ಕಿಡ್ಸ್ ಟಾಪ್10 ಲೇಬಲ್ ಕೊಡುತ್ತದೆಯೋ ಎಲ್ಲ ಡಿವೈಸ್ಗಳಲ್ಲಿಯೂ ಅಂಥ ಕಾರ್ಯಕ್ರಮಗಳು ಆ ಬ್ಯಾಡ್ಜ್ ಸಹಿತ ಕಾಣಿಸಲಿದೆ. ಈ ಪಟ್ಟಿಯನ್ನು ಕಿಡ್ಸ್ ಪ್ರೊಫೈಲ್ನ ನ್ಯೂ ಅಂಡ ಪಾಪ್ಯುಲರ್ ವಿಭಾಗದಲ್ಲಿ ನೋಡಬಹುದು. ಕಿಡ್ಸ್ ಟಾಪ್ 10 ಸಾಲು ಈಗಾಗಲೇ 93 ದೇಶಗಳಲ್ಲಿ ಸಕ್ರಿಯವಾಗಿದೆ.
(Netflix to Offer Video Games on the OTT Platform at No Extra Cost also Announces Two New Kids Features)
ಇದನ್ನೂ ಓದಿ: Tata Sky Binge: ಟಾಟಾ ಸ್ಕೈ Bingeಯಲ್ಲಿ ಸಿಗಲಿದೆ ಹತ್ತು ಒಟಿಟಿ ಕಂಟೆಂಟ್ ಒಂದೇ ಕಡೆಗೆ; ಪ್ಲಾನ್ ಮತ್ತಿತರ ಮಾಹಿತಿ ಇಲ್ಲಿದೆ
ಇದನ್ನೂ ಓದಿ: ರಾಧೆ ತೆರೆಕಂಡ ಬೆನ್ನಲ್ಲೇ ಒಟಿಟಿಗೆ ಗುಡ್ ಬೈ ಹೇಳಿದ ಸಲ್ಮಾನ್ ಖಾನ್