AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಗದ ಮೇಲೆ ದೈವಿಕ ಕಾವ್ಯ: ನಿರುಪಮಾ ರಾಜೇಂದ್ರ ಹೆಜ್ಜೆಗೆ ಮನಸೋತ ಪ್ರೇಕ್ಷಕರು

ಬೆಂಗಳೂರಿನ ಮೀನಾಕ್ಷಿ ರಂಗಮಂಚದಲ್ಲಿ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ಕಲಾವಿದೆ ನಿರುಪಮಾ ರಾಜೇಂದ್ರ ಅವರ 'ರಸಾರಾಧನಂ' ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನಡೆಯಿತು. ಶತಾವಧಾನಿ ಡಾ. ಆರ್. ಗಣೇಶ್ ಅವರ ಕೃತಿ ಆಧಾರಿತ ಈ ನೃತ್ಯರೂಪಕದಲ್ಲಿ ಪಾರ್ವತಿಯ ತಪಸ್ಸು ಹಾಗೂ ದೈವಿಕ ಕಥನಗಳು ಅನಾವರಣಗೊಂಡವು.

ರಂಗದ ಮೇಲೆ ದೈವಿಕ ಕಾವ್ಯ: ನಿರುಪಮಾ ರಾಜೇಂದ್ರ ಹೆಜ್ಜೆಗೆ ಮನಸೋತ ಪ್ರೇಕ್ಷಕರು
ನಿರುಪಮಾ
ರಾಜೇಶ್ ದುಗ್ಗುಮನೆ
|

Updated on: Sep 23, 2026 | 2:45 PM

Share

ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ನೃತ್ಯ ಕಲಾವಿದೆ ನಿರುಪಮಾ ರಾಜೇಂದ್ರ ಅವರ ‘ರಸಾರಾಧನಂ’ ಭರತನಾಟ್ಯ ಪ್ರದರ್ಶನ ಇತ್ತೀಚೆಗೆ ನಗರದ ದೊಡ್ಡಕಲ್ಲಸಂದ್ರದ ಮೀನಾಕ್ಷಿ ರಂಗಮಂಚದಲ್ಲಿ ಪ್ರೇಕ್ಷಕರ ಮನಸೂರೆಗೊಂಡಿತು. ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್ ಅವರ ಕೃತಿಗಳನ್ನು ಆಧಾರಿಸಿ ಪ್ರದರ್ಶಿಸಲಾದ ಈ ಏಕವ್ಯಕ್ತಿ ಶಾಸ್ತ್ರೀಯ ನೃತ್ಯರೂಪಕವು ಪ್ರಕೃತಿ, ದೈವಿಕತೆ ಮತ್ತು ಪುರಾಣದ ಕಥನಗಳಿಗೆ ಅಭಿನಯದ ರೂಪ ನೀಡಿತು.

ಶಿವನನ್ನು ಓಲೈಸಲು ಸರ್ವ ಋತುಗಳಲ್ಲಿ ಪಾರ್ವತಿ ಮಾಡಿದ ತಪಸ್ಸು ಹಾಗೂ ಅವಳ ಆತ್ಮ ಸೌಂದರ್ಯಕ್ಕೆ ಒಲಿದು ಶಿವ ಅರ್ಧನಾರೀಶ್ವರನಾಗುವ ಕಥಾಭಾಗವನ್ನು ನೃತ್ಯದ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಲಾಯಿತು. ಹರಿ ಹಾಗೂ ಹರ ತಮ್ಮ ಶಕ್ತಿಗಳನ್ನು ಪರಸ್ಪರ ಪ್ರಶಂಸಿಸುತ್ತಾ ಒಂದಾಗುವ ಅಭೇದ ಭಾವ, ಕಾಳಿಂಗ ಮರ್ದನ, ಗಂಗೆ-ಯಮುನೆಯರ ಹರಿವು ಮತ್ತು ಅಭಿವ್ಯಕ್ತಿಯ ಕ್ಷಣಾರ್ಧದ ಪರಿವರ್ತನೆಗಳು ನಿರುಪಮಾ ಅವರ ಹೆಜ್ಜೆಗಳಲ್ಲಿ ಅನಾವರಣಗೊಂಡವು.

ವಿಶೇಷವಾಗಿ ‘ದೌತ್ಯ ದೀಕ್ಷಿತೆ’ ಕೃತಿಯ ಪ್ರಸ್ತುತಿಯಲ್ಲಿ, ದೂರದಲ್ಲಿರುವ ಪತಿಗೆ ಸಂದೇಶ ಕಳುಹಿಸಲು ಕಡೆಗೆ ತನ್ನ ಮನಸ್ಸನ್ನೇ ದೂತನನ್ನಾಗಿ ಕಳುಹಿಸುವ ನಾಯಕಿಯ ಭಾವಪೂರ್ಣ ಸನ್ನಿವೇಶ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸ್ಪುಟವಾದ ಸಂಗೀತ ಮತ್ತು ಬೆಳಕಿನ ನಿಖರ ಸಂಯೋಜನೆಯು ರಂಗಮಂಚದಲ್ಲಿ ದೈವಿಕ ವಾತಾವರಣವನ್ನು ಸೃಷ್ಟಿಸಿತು.

ಕಾರ್ಯಕ್ರಮದಲ್ಲಿದ್ದ ಶತಾವಧಾನಿ ಡಾ. ಆರ್. ಗಣೇಶ್ ಮಾತನಾಡಿ, ‘ನಿರುಪಮಾ ಅವರ ಶ್ರದ್ಧೆ ಹಾಗೂ ಪ್ರದರ್ಶನದ ವೇಳೆಯಲ್ಲೇ ಅಭಿನಯವನ್ನು ಸುಧಾರಿಸಿಕೊಳ್ಳುವ ಕೌಶಲ ಅದ್ಭುತವಾದದ್ದು. ಶೃಂಗಾರ ರಸದ ಸರಿಯಾದ ಅಭಿವ್ಯಕ್ತಿಯಿಂದ ಭರತನಾಟ್ಯ ಅರ್ಥಪೂರ್ಣವೆನಿಸುತ್ತದೆ. ಇಂತಹ ಏಕವ್ಯಕ್ತಿ ಪ್ರದರ್ಶನಗಳು ಹೆಚ್ಚು ನಡೆಯಬೇಕು’ ಎಂದರು. ಗಾಯಕಿ ಎಂ.ಎಸ್. ಶೀಲಾ ಅವರು ನಿರುಪಮಾ ಅವರ ಕಲಾಸೇವೆಯನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ನಿರುಪಮಾ ರಾಜೇಂದ್ರ ದಂಪತಿಯನ್ನು ಡಾ. ಆರ್. ಗಣೇಶ್ ಗೌರವಿಸಿದರು. ಕುಮಾರನ್ ಸಮೂಹ ಸಂಸ್ಥೆಗಳ ದೀಪಾ ಶ್ರೀಧರ್, ಕಲಾವಿದ ರಾಜೇಂದ್ರ ಉಪಸ್ಥಿತರಿದ್ದರು. ಹಿನ್ನೆಲೆಯಲ್ಲಿ ರಘುರಾಮ್ ರಾಜಗೋಪಾಲನ್ (ಗಾಯನ), ಮಹೇಶ್ ಸ್ವಾಮಿ (ಕೊಳಲು), ಪ್ರಶಾಂತ್ ರುದ್ರಪಟ್ಟಣ (ವೀಣೆ), ಶ್ರೀನಿಧಿ ಮಾಥುರ್ (ವಯೋಲಿನ್), ಪ್ರಸನ್ನಕುಮಾರ್ (ನಟುವಾಂಗ) ಹಾಗೂ ವಿದ್ಯಾಶಂಕರ್ (ಮೃದಂಗ) ಸಾಥ್ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More