ಮುಂದುವರಿದ ಕಿತ್ತಾಟ; ಅಲ್ಲು ಅರ್ಜುನ್​ ವಿರುದ್ಧ ಮತ್ತೊಂದು ದೂರು ದಾಖಲು

‘ಪುಷ್ಪ 2’ ಚಿತ್ರದ ಪ್ರೀಮಿಯರ್ ನಂತರ ಅಲ್ಲು ಅರ್ಜುನ್ ಅವರು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರೊಬ್ಬರು ಚಿತ್ರದಲ್ಲಿ ಪೊಲೀಸರಿಗೆ ಅವಮಾನ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಇದರಿಂದ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು ಮತ್ತು ನಂತರ ಜಾಮೀನು ನೀಡಲಾಗಿತ್ತು. ಈಗ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಮುಂದುವರಿದ ಕಿತ್ತಾಟ; ಅಲ್ಲು ಅರ್ಜುನ್​  ವಿರುದ್ಧ ಮತ್ತೊಂದು ದೂರು ದಾಖಲು
ಅಲ್ಲು ಅರ್ಜುನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 24, 2024 | 10:47 AM

ನಟ ಅಲ್ಲು ಅರ್ಜುನ್​ ಅವರಿಗೆ ಸಂಕಷ್ಟ ಸದ್ಯಕ್ಕೆ ಪೂರ್ಣಗೊಳ್ಳುವ ಹಾಗೆ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಅವರು ‘ಪುಷ್ಪ 2’ ಚಿತ್ರದ ಪ್ರೀಮಿಯರ್ ವೇಳೆ ನಡೆದ ಘಟನೆಯಿಂದ ಸಾಕಷ್ಟು ನೊಂದಿದ್ದಾರೆ. ಹೀಗಿರುವಾಗಲೇ ಅವರಿಗೆ ಮತ್ತೊಂದು ತೊಂದರೆ ಎದುರಾಗಿದೆ ಎಂಬ ವಿಚಾರ ತಿಳಿದು ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಕೇಳಿ.

‘ಪುಷ್ಪ 2’ ಚಿತ್ರ ಇರುವುದು ರಕ್ತಚಂದನ ಕಳ್ಳಸಾಗಣೆ ಮಾಡುವ ಪುಷ್ಪರಾಜ್ ಹಾಗೂ ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಶೇಖಾವತ್ ನಡುವಿನ ಘರ್ಷಣೆ ಬಗ್ಗೆ. ಇಬ್ಬರೂ ಸದಾ ಕಿತ್ತಾಡಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಪೊಲೀಸರಿಗೆ ಅವಮಾನ ಆಗಿದೆ ಎಂದು ಕಾಂಗ್ರೆಸ್ ನಾಯಕ ಧೀನ್ಮರ್ ಮಲ್ಲಣ್ಣ ಅವರು ಕೇಸ್ ದಾಖಲು ಮಾಡಿದ್ದಾರೆ. ಸಿನಿಮಾ ಬಗ್ಗೆ ಅವರು ಅಪಸ್ವರ ತೆಗೆದಿದ್ದಾರೆ.

ಬನ್ವರ್ ಸಿಂಗ್ ಶೇಖಾವತ್ (ಫಹಾದ್ ಫಾಸಿಲ್) ಸ್ವಿಮ್ಮಿಂಗ್​ಪೂಲ್​ನಲ್ಲಿ ಇರುವಾಗ ಪುಷ್ಪರಾಜ್ (ಅಲ್ಲು ಅರ್ಜುನ್ ) ಮೂತ್ರ ಮಾಡುತ್ತಾನೆ. ಇದು ಪೊಲೀಸರಿಗೆ ಅವಮಾನ ಮಾಡುವಂಥದ್ದು ಎಂದು ಕಾಂಗ್ರೆಸ್ ನಾಯಕ ಅಭಿಪ್ರಾಯಪಟ್ಟಿದ್ದಾರೆ. ಕಾನೂನನ್ನು ಕಾಪಾಡುವರಿಗೆ ನೀಡುವ ಗೌರವ ಇದಲ್ಲ ಎಂದಿದ್ದಾರೆ. ಹೀಗಾಗಿ, ಅವರು ದೂರು ದಾಖಲು ಮಾಡಿದ್ದು, ಅಲ್ಲು ಅರ್ಜುನ್​ಗೆ ನೋಟಿಸ್ ಹೋಗಿದೆ ಎನ್ನಲಾಗಿದೆ.

‘ಪುಷ್ಪ 2’ ಚಿತ್ರದ ಪ್ರೀಮಿಯರ್​ ಶೋ ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆಯಿತು. ಈ ವೇಳೆ ಅಲ್ಲು ಅರ್ಜುನ್ ಅವರು ಸಿನಿಮಾ ವೀಕ್ಷಣೆಗೆ ಬಂದಿದ್ದರು. ಅವರ ಬಳಿ ಪೊಲೀಸರು ತೆರಳುವಂತೆ ಕೋರಿದ್ದರೂ ಅವರು ಹೋಗಿಲ್ಲ ಎನ್ನಲಾಗಿದೆ. ಈ ಕಾರಣದಿಂದಲೇ ಅಲ್ಲು ಅರ್ಜುನ್ ವಿರುದ್ಧ ಕೇಸ್ ಫೈಲ್ ಆಗಿ ಅವರನ್ನು ಬಂಧಿಸುವ ಕಾರ್ಯ ನಡೆದಿದೆ. ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಬಂಧನಕ್ಕೆ ಒಳಗಾದರು. ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ, 50 ಸಾವಿರ ರೂಪಾಯಿ ಬಾಂಡ್ ಜೊತೆ ಅವರಿಗೆ ಮಧ್ಯಂತರ ಜಾಮೀನು ನೀಡಲಾಯಿತು. ಆದರೆ, ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಅವರು ಒಂದು ದಿನ ಜೈಲಿನಲ್ಲಿ ಇರಬೇಕಾಯಿತು.

ಇದನ್ನೂ ಓದಿ: ‘ಒಂದಲ್ಲ 20 ಕೋಟಿ ರೂಪಾಯಿ ಕೊಡಬೇಕು’; ಅಲ್ಲು ಅರ್ಜುನ್​ಗೆ ಸಚಿವನ ಆಗ್ರಹ

ಈಗ ಅಲ್ಲು ಅರ್ಜುನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮುಂದೇನು ಎನ್ನುವ ಭಯ ಅವರನ್ನು ಕಾಡುತ್ತಿದೆ. ಇತ್ತೀಚೆಗೆ ಅವರು ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.