ನೆಟ್ಫ್ಲಿಕ್ಸ್ ಜಾಗತಿಕ ಟಾಪ್ 10 ಟ್ರೆಂಡಿಂಗ್ನಲ್ಲಿ ಸ್ಥಾನ ‘ಪುಷ್ಪ 2’ ಸಿನಿಮಾ
‘ಪುಷ್ಪ 2’ ಸಿನಿಮಾದ ಹವಾ ಇನ್ನೂ ನಿಂತಿಲ್ಲ. ಅಲ್ಲು ಅರ್ಜುನ್ ಅವರಿಗೆ ಈ ಸಿನಿಮಾದಿಂದ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಾಗಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ‘ಪುಷ್ಪ 2’ ಸಿನಿಮಾ ಈಗ ಒಟಿಟಿಯಲ್ಲೂ ಧೂಳೆಬ್ಬಿಸುತ್ತಿದೆ. ನೆಟ್ಫ್ಲಿಕ್ಸ್ ಮೂಲಕ ಈ ಸಿನಿಮಾವನ್ನು ಬೇರೆ ಬೇರೆ ದೇಶಗಳ ಪ್ರೇಕ್ಷಕರು ಕೂಡ ನೋಡುತ್ತಿದ್ದಾರೆ.

ವಿಶ್ವಾದ್ಯಂತ 1800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಖ್ಯಾತಿ ‘ಪುಷ್ಪ 2’ ಸಿನಿಮಾಗೆ ಸಲ್ಲುತ್ತದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ನಟನೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಅದ್ದೂರಿ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಮನಸೋತಿದ್ದಾರೆ. ಥಿಯೇಟರ್ನಲ್ಲಿ ‘ಪುಷ್ಪ 2’ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತು. ಅದೇ ರೀತಿ ಒಟಿಟಿಯಲ್ಲಿ ಕೂಡ ಈ ಚಿತ್ರ ಮಿಂಚುತ್ತಿದೆ. ಒಟಿಟಿಗೆ ಬಂದ ಬಳಿಕ ಭಾರತ ಮಾತ್ರವಲ್ಲದೇ ವಿದೇಶದಲ್ಲಿ ಇರುವ ಪ್ರೇಕ್ಷಕರು ಸಹ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.
‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿದ್ದು ಕಳೆದ ವರ್ಷ ಡಿಸೆಂಬರ್ 5ರಂದು. ಈ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ. ಜನವರಿ 30ರಿಂದ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೆಟ್ಫ್ಲಿಕ್ಸ್ ಗ್ಲೋಬಲ್ ಟಾಪ್ 10 ಟ್ರೆಂಡಿಂಗ್ನಲ್ಲಿ ‘ಪುಷ್ಪ 2’ ಸಿನಿಮಾ ಕೂಡ ಸ್ಥಾನ ಪಡೆದುಕೊಂಡಿದೆ. ಇದು ಚಿತ್ರತಂಡಕ್ಕೆ ಮತ್ತು ಅಲ್ಲು ಅರ್ಜುನ್ ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.
ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೋಡಿಲ್ಲದೇ ಇರುವ ಕೆಲವು ತುಣುಕುಗಳನ್ನು ಸೇರಿಸಿ ಒಟಿಟಿಯಲ್ಲಿ ‘ಪುಷ್ಪ 2’ ಬಿಡುಗಡೆ ಮಾಡಲಾಯಿತು. ಆ ಹೆಚ್ಚುವರಿ 23 ನಿಮಿಷಗಳ ದೃಶ್ಯಗಳನ್ನು ನೋಡಲು ಅನೇಕರು ಆಸಕ್ತಿ ತೋರಿಸಿದ್ದಾರೆ. ಈ ಕಾರಣದಿಂದ ಕೂಡ ಒಟಿಟಿಯಲ್ಲಿ ‘ಪುಷ್ಪ 2’ ಸಿನಿಮಾದ ವೀಕ್ಷಣೆ ಹೆಚ್ಚಾಗಿದೆ. ಬೇರೆ ಬೇರೆ ದೇಶಗಳಲ್ಲಿ ಇರುವ ಪ್ರೇಕ್ಷಕರು ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ನೋಡಿ ವಿಮರ್ಶೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ‘ಗೇಮ್ ಚೇಂಜರ್’, ‘ಪುಷ್ಪ 2’ ನಿರ್ಮಾಪಕರಿಗೆ ಐಟಿ ಶಾಕ್; 65 ತಂಡಗಳಿಂದ ದಾಳಿ
ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ಫಹಾದ್ ಪಾಸಿಲ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾದ ಗೆಲುವಿನಿಂದ ಎಲ್ಲರ ಜನಪ್ರಿಯತೆ ಜಾಸ್ತಿ ಆಗಿದೆ. ಚಿತ್ರ ಬಿಡುಗಡೆ ಆದಾಗ ಕಾಲ್ತುಳಿತದಿಂದ ಅಭಿಮಾನಿ ಮೃತಪಟ್ಟ ಘಟನೆಯಿಂದ ಅಲ್ಲು ಅರ್ಜುನ್ ಅವರಿಗೆ ನೋವಾಯಿತು. ಹಾಗಾಗಿ ಅವರು ಸಿನಿಮಾದ ಗೆಲುವಿನ ಸಂಭ್ರಮಾಚರಣೆ ಮಾಡಿಲ್ಲ. ಒಂದಷ್ಟು ದಿನ ಒಂಟಿಯಾಗಿಯೇ ಕಾಲ ಕಳೆದ ಅಲ್ಲು ಅರ್ಜುನ್ ಅವರು ಈಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.